ಡಾ. ಮೇಟಿ ಮಲ್ಲಿಕಾರ್ಜುನ ಅವರ ಕೃತಿ “ಕನ್ನಡವೇ ಕಣ್ಣಾಗಿ ಕಣ್ಣೆ ಕನ್ನಡಿಯಾಗಿ . . . .” ತಿಳಿವಿನ ಕಣ್ನೋಟವನ್ನು ಗಂಭೀರವಾಗಿ ಪುನರ್ಪರಿಶೀಲಿಸುವ ಮಹತ್ವಾಕಂಕ್ಷೆಯುಳ್ಳದ್ದು. ಆಧುನಿಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರಿಯುವ, ವಿಮರ್ಶಿಸುವ, ಬೆಲೆಕಟ್ಟುವ ಹೀಗೇ ಹಲವು ರೀತಿಯ ಓದುಗಳು ಇದುವರೆಗೂ ಬಂದಿವೆ. ಈ ಓದುಗಳು ಒಂದೋ, ಆಯಾ ಕಾಲದ ಅಗತ್ಯಗಳಾಗಿಯೋ, ಆಯಾ ಕಾಲದಲ್ಲಿ ದಕ್ಕಿದ ಇತರ ಪ್ರೇರಣೆಗಳಿಂದಲೋ, ಆಯಾ ಕಾಲದಲ್ಲಿ ಮುನ್ನೆಲೆಗೆ ಬಂದ ಸಿದ್ಧಾಂತಗಳ ನೆಲೆಯಲ್ಲಿಯೋ ಹುಟ್ಟಿರುತ್ತವೆ. ಕ್ವಚಿತ್ತಾಗಿ ಕನ್ನಡದ ಚಿಂತನೆಯ ಬಿಂಬವಾಗಿ, ಕನ್ನಡ ಜನಬದುಕುಗಳನ್ನು ಮುನ್ನೆಡಸುವ ದೀವಿಗೆಗಳಾಗಿ ಮತ್ತು ಕನ್ನಡವೇ ಒಂದು ಅರಿವು ಎಂಬುದನ್ನು ಪ್ರಚುರ ಪಡಿಸುವ ಓದುಗಳ ಎರಡನೆಯ ದಾರಿಯೂ ನಮ್ಮ ನಡುವೆ ಇದೆ. ಈ ಎರಡನೆಯ ಓದು ಶ್ರಮವನ್ನು ಬೇಡುವಂತದು ಹಾಗೂ ಜನತೆಗೆ ತಲುಪುವುದಕ್ಕಾಗಿ ಸಾಂಸ್ಥಿಕ ಬೆಂಬಲದ ಅವಶ್ಯಕತೆ ಇರುವಂತದು. ಕನ್ನಡದ ಮಟ್ಟಿಗೆ ಇದು ಎಂದೂ ಸಲೀಸಾದ ಸಂಗತಿ ಅಲ್ಲ. ರೋಚಕತೆಯಾಗಲೀ, ಆಕರ್ಷಣೆಯಾಗಲೀ, ಮನ್ನಣೆಯ ಪುಳಕವಾಗಲೀ ಸಿಗದ ಈ ಹಾದಿಯಲ್ಲಿ ಹೋಗುವುದೆಂದರೆ ಅದೊಂದು ರೀತಿಯ ತಪಸ್ಸೇ ಸರಿ. ಶಂಬಾ ಜೋಶಿಯವರ ಕನ್ನಡ ನೆಲದ ಜ್ಞಾನ ಮತ್ತು ವಿವೇಕದ ಚಿಂತನೆಗಳು ಇಂದಿಗೂ ಕರ್ನಾಟಕದಲ್ಲಿ ನೆಲೆಯೂರಿಲ್ಲ. ಡಿ.ಎನ್.ಶಂಕರಭಟ್ಟರ ಕನ್ನಡ ನುಡಿ ಚಿಂತನೆಯ ತಿರುಳನ್ನೇ ಇನ್ನೂ ಸರಿಯಾಗಿ ಅರ್ಥೈಸಿಕೊಳ್ಳಲು ಕನ್ನಡದ ವಿದ್ವತ್ ಪರಂಪರೆಗೇ ಆಸಕ್ತಿಯಿಲ್ಲ. ಕೆ.ವಿ.ನಾರಾಯಣರಂತಹ ಚಿಂತಕರು ಹೇಳುವ ಕನ್ನಡ ಲೋಕದೃಷ್ಟಿಯ ತಿಳಿವಿನ ದಾರಿ ವ್ಯಾಪಕಗೊಳ್ಳುತ್ತಿಲ್ಲ. ಮೊದಲಿನಿಂದಲೂ ನಮಗೆ ಸಂಸ್ಕೃತದಿಂದಲೋ, ಪಾಶ್ಚಾತ್ಯ ಮೂಲದಿಂದಲೋ ಬರುವ ತಿಳಿವಿನೆಡೆಗೆ ಧಾವಂತ ಇದೆಯೇ ಹೊರತು ಅದನ್ನೂ ಕೂಡ ಸಮಗ್ರವಾಗಿ ಗ್ರಹಿಸಿ ಮುಖಾಮುಖಿಯಾಗಬೇಕು ಎಂಬೆಡೆಗೆ ಗಮನ ಕಡಿಮೆ. ಹೀಗಿರುವ ಸಂದರ್ಭದಲ್ಲಿ ಮೇಟಿ ಮಲ್ಲಿಕಾರ್ಜುನ ಅವರು ಈ ಎರಡನೆಯ ದಾರಿಯಲ್ಲಿ ಸಾಗಲು ಮನಸ್ಸು ಮಾಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ ಕೃತಿಯು ಉದ್ದಕ್ಕೂ ಓದಿನ ತಾತ್ವಿಕತೆಗಳನ್ನು ಕಟ್ಟಿಕೊಳ್ಳುವ ಬಗೆ ಹೇಗೆ? ಎಂಬುದನ್ನು ಚಿಂತಿಸುತ್ತದೆ. ಭಿನ್ನ ಭಿನ್ನ ಸಂದರ್ಭದಲ್ಲಿ ಬರೆದ ಲೇಖನಗಳ ಸಂಕಲವಾಗಿಯೂ ಹೀಗೆ ಫೋಕಸ್ಡ್ ಆದ ನೆಲೆಯೊಂದು ಇಲ್ಲಿ ಪ್ರವಹಿಸಿದೆ. ಲೋಕದ ತಿಳುವಳಿಕೆಯನ್ನು ಕನ್ನಡದ ತಿಳುವಳಿಕೆಯ ಮೂಲಕ ಕರಗಿಸಿಕೊಂಡು ನೋಡುವ ಕ್ರಮದ ಶೋಧನೆ ಅವರ ಆಸಕ್ತಿಯಾಗಿದೆ. ಲೋಕದ ಯಾವ ತಿಳಿವೂ – ಅದು ಒಡೆಯುವ ಬಗೆಯದಲ್ಲದೆ ಒಗ್ಗೂಡಿಸುವ ಆಶಯವನ್ನು ಹೊಂದಿದ್ದಲ್ಲಿ – ಅದು ನಮಗೆ ವರ್ಜ್ಯವಲ್ಲ. ಆದರೆ, ಅದು ಈ ಬದುಕಿನ ಅನುಭವದೊಂದಿಗೆ ಮಿಳಿತಗೊಳ್ಳುತ್ತದೆಯೇ? ಇಲ್ಲಿನ ಬದುಕನ್ನು ವಿವರಿಸಿಕೊಳ್ಳಬಲ್ಲುದೇ? ಅಥವಾ ಅದು ಕೇವಲ ಬಾಹ್ಯ ಕನ್ನಡಕವಾಗಿಯಷ್ಟೇ ಬಯಸಿದ್ದನ್ನು ತೋರಿಸುವ ಕೆಲಸವನ್ನಷ್ಟೇ ಮಾಡುತ್ತದೆಯೇ? ಹಾಗಿದ್ದಲ್ಲಿ ಆ ನೋಟಗಳು ತೋರದೇ ಉಳಿಯುವುದೇನು? ತೋರದೇ ಉಳಿದಿದ್ದನ್ನು ನೋಡುವ ಬಗೆ ಯಾವುದು? ಎನ್ನುವುದನ್ನೂ ನಾವಿಂದು ಯೋಚಿಸಬೇಕಾಗಿದೆ. ಮಾತ್ರವಲ್ಲ, ಈ ಕೊರೆಯನ್ನೇ ಅಸ್ತ್ರವಾಗಿಸಿಕೊಂಡು ‘ಭಾರತೀಯತೆ’ಯ ಹೆಸರಿನಲ್ಲಿ ಯಾರೋ ಕೆಲವು ಉಳ್ಳವರ ಪರವಾದ ಭಾಷೆ ಮತ್ತು ಚಿಂತನೆಯನ್ನು ಹೇರಿಕೆ ಮಾಡುವ ಅಪಾಯವನ್ನು ಸರಿದಾರಿಯಲ್ಲಿ ನಿವಾರಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಕೃತಿಯಲ್ಲಿ ನಮ್ಮ ಸಾಹಿತ್ಯ ಓದನ್ನು ಆಳುತ್ತಿರುವ ಸಂಗತಿಗಳಾವುವು? ಎಂಬುದನ್ನು ಮೊದಲಿಗೆ ನಿಚ್ಚಳಗೊಳಿಸಿಕೊಂಡಿರುವುದನ್ನು ಗಮನಿಸಬಹುದು. ಮೊದಲ ಲೇಖನ ‘ಸಾಹಿತ್ಯ ಸಿದ್ಧಾಂತಗಳ ಬೆನ್ನಹಿಂದಿನ ನೋಟ’ ದಲ್ಲಿಯೇ ಇದನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. “ಸಾಹಿತ್ಯ ಮತ್ತು ಆ ಕುರಿತ ಓದಿಗೆ ತನ್ನದೆಯಾದ ಲೋಕನೋಟಗಳ ಪರಂಪರೆ ಹಾಗೂ ಚರಿತ್ರೆಗಳಿರುತ್ತವೆ. ಈ ಲೋಕನೋಟಗಳ ರಾಚನಿಕ ಚೌಕಟ್ಟುಗಳು ಆಯಾ ಸಮುದಾಯದ ಕನ್ನಡಿಗಳಾಗಿರುತ್ತವೆ. ಸಮುದಾಯದ ಚಹರೆಗಳನ್ನು ಮರುನೆಲೆಗೊಳಿಸುವ ಇಲ್ಲವೇ ಮರುಕಟ್ಟೋಣದ ಹೊಣೆಗಾರಿಕೆ ಇಂತಹ ಚೌಕಟ್ಟುಗಳಿಗೆ ಇರುತ್ತದೆ ಎಂಬುದು ಮಾತ್ರ ಗಮನಾರ್ಹ.” (ಪು:೨) ಎಂಬ ನಿಲುವಿನಿಂದ ಹೊರಡುವ ಲೇಖನವು ಇದಕ್ಕೆ ಇರುವ ತೊಡಕುಗಳು ಎರಡು ಬಗೆಯಲ್ಲಿ ಇರುವುದನ್ನು ಗುರುತಿಸುತ್ತಾರೆ. ಒಂದು, ಅನ್ಯ ಮಾದರಿಗಳ ಬೆನ್ನ ಹಿಂದಿನ ಗ್ರಹಿಕೆಯಿಂದಲೇ ನಮ್ಮ ನಮ್ಮ ಸಾಹಿತ್ಯಕ ಸಂಕಥನಗಳನ್ನು ಕಟ್ಟುವುದು. ಎರಡನೆಯದು ನಮ್ಮ ಸಾಮಾಜಿಕ ಮೂಲ ಚಹರೆಗಳನ್ನೇ ನಾಶ ಮಾಡಿ ಇಲ್ಲವೇ ಅಂತಹ ಅಸ್ತಿತ್ವಗಳನ್ನು ನಿರ್ಲಿಪ್ತಗೊಳಿಸಿ, ಈಗಾಗಲೇ ಪ್ರಾಬಲ್ಯ ಹೊಂದಿರುವ ಸಂಕಥನಗಳನ್ನೇ ಮರುನೆಲೆಗೊಳಿಸಿ ಮುಂಚೂಣಿಗೆ ತರುವುದು. (ಪು:೩) ಇವೆರಡೂ ಪಠ್ಯಗಳ ಓದಿನ ಬಹುಸಾಧ್ಯತೆಗಳನ್ನು ಕೊರೆಗೊಳಿಸುತ್ತವೆ. ಪಠ್ಯವೊಂದು ರೂಪುಗೊಳ್ಳುವುದು ಬರಹಗಾರರ ನೆಲೆಯಲ್ಲಿ ಮಾತ್ರವಲ್ಲ; ಅದು ಓದುಗರೊಳಗೂ ರೂಪುಗೊಳ್ಳುತ್ತದೆ. ಆದರೆ ವಿಮರ್ಶೆಯ ಪ್ರಾಬಲ್ಯ ಇದನ್ನು ಸೀಮಿತಗೊಳಿಸಬಲ್ಲುದು. ಹೀಗಾಗಿ, ವಿಮರ್ಶೆಗೆ ವಿಶೇಷವಾದ ಜವಾಬ್ದಾರಿ ಇರುತ್ತದೆ. ಈ ಪಠ್ಯಗಳೇ (ಲಿಖಿತ ಮತ್ತು ಅಲಿಖಿತ) ಕನ್ನಡ ಚಿಂತನೆಯ ಕಣ್ನೋಟಗಳನ್ನು ಅಂತರ್ಗತ ಮಾಡಿಕೊಂಡಿರುತ್ತವೆ. ಅಥವಾ ಕೆಲವು ಅದಕ್ಕೆ ವಿರುದ್ಧವಾಗಿಯೂ ಕಾರ್ಯ ಪ್ರವೃತ್ತವಾಗಿದ್ದಿರಬಹುದು. ಇವುಗಳನ್ನು ಗುರುತಿಸುವ ಕೆಲಸ ವಿಮರ್ಶೆಯಿಂದಾಗಬೇಕು. ಬದಲಿಗೆ ಎಷ್ಟೋ ಬಾರಿ ಪಠ್ಯದಾಚೆಗೆ ವಿಮರ್ಶೆಯೇ ಈ ಮೂಲ ಕೆಲಸಗಳನ್ನು ನಿರ್ಲಕ್ಷಿಸಿ, ಲೇಖಕ ಕೇಂದ್ರಿತ ಮಾನದಂಡದಲ್ಲಿ ಕೃತಿಗೆ ಮಾನ್ಯತೆಯನ್ನೋ, ನಿರಾಕರಣೆಯನ್ನೋ ಮಾಡುವ ತೀರ್ಪುಗಾರರ ಅನಾವಶ್ಯಕ ಕೆಲಸಕ್ಕೆ ಇಳಿಯುವುದಿದೆ. ಇವೆಲ್ಲವೂ ಒಂದೆಡೆ ಕನ್ನಡ ಚಿಂತನೆಯನ್ನೂ, ಇನ್ನೊಂದೆಡೆ ಪ್ರಮುಖ ಕೃತಿಗಳನ್ನೂ ಅಮಾನ್ಯಗೊಳಿಸಿಬಿಡುವ ಅಪಾಯ ಸದಾ ಇರುತ್ತದೆ. ಈ ದೃಷ್ಟಿಯಿಂದ, “ಸಂಸ್ಕೃತಿ ಮತ್ತು ನುಡಿಗಳ ನಡುವೆ ರ್ಪಟ್ಟಿರುವ ಸಾವಯವ ನಂಟಸ್ತಿಕೆಯ ವಿನ್ಯಾಸಗಳು ಸಾಹಿತ್ಯ ಹಾಗೂ ಸಾಹಿತ್ಯ ಓದಿನ ಮಾದರಿಗಳ ನಡುವೆ ಉಂಟಾಗದೇ ಹೋದರೆ, ಸಾಹಿತ್ಯ ಓದಿನ ಗುರಿ ಮತ್ತು ಆಶಯಗಳು ಯಾವತ್ತಿಗೂ ಈಡೇರಲಾರವು. ಅಷ್ಟೇ ಅಲ್ಲದೆ ಸಾಮಾಜಿಕ ನಂಟಸ್ತಿಕೆಯನ್ನೂ ಈ ಮಾದರಿಯ ಓದುಗಳು ನೆಲೆಗೊಳಿಸಲಾರವು. ಸಾಮಾಜಿಕ ನಂಟಸ್ತಿಕೆ ಹಾಗೂ ನಂಬಿಕೆಯ ಜಗತ್ತನ್ನು ಒಳಗೊಳ್ಳದ ಸಾಹಿತ್ಯ ಓದು ಅಲ್ಲಮನು ಹೇಳುವಂತೆ ತರ್ಕವೆಂಬುದು ತಗರ ಹೋರಟೆಯೇ ಸರಿ.”(ಪು:೯,೧೦) ಎಂಬ ಮೇಟಿಯವರ ಮಾತು ಮೌಲಿಕವಾದುದು.
ಕನ್ನಡ ಸಾಹಿತ್ಯ ಪಠ್ಯಗಳನ್ನು ದೀರ್ಘವಾಗಿ ವಿಶ್ಲೇಷಿಸುತ್ತಾ ಹಲವು ಒಳನೋಟಗಳನ್ನು ಮೇಟಿಯವರು ದಾಖಲಿಸುತ್ತಾರೆ. ಜೈನ ಸಾಹಿತ್ಯದಲ್ಲಿ ಬರುವ ಲೌಕಿಕ, ಅಲೌಕಿಕ ಭಿನ್ನತೆ ಕುರಿತು ಹೇಳುತ್ತಾ, “ಈ ವಿಭಜನೆಗೆ ಮುಖ್ಯ ಕಾರಣ ಏನೆಂದರೆ, ಯಾವ ಮೌಲ್ಯವನ್ನು ಜೈನೇತರ ಸಾಹಿತ್ಯ ತನ್ನ ಹುಡುಕಾಟದ ಕೇಂದ್ರ ವಸ್ತುವನ್ನಾಗಿಸಿಕೊಂಡಿತ್ತೋ? ಅದು ಬದುಕಿನ ಉದಾತ್ತ ಆದರ್ಶವಲ್ಲ ಹಾಗೂ ಗುರಿಯೂ ಅಲ್ಲ ಎಂಬ ಘನವಾದ ಸಂದೇಶವನ್ನು ಸಾರುವ ಇರಾದೆಯು ಈ ವಿಭಜನೆಯಲ್ಲಿ ನಿಚ್ಚಳವಾಗಿದೆ” (ಪು:೧೧೮) ಎನ್ನುತ್ತಾರೆ. ಹಾಗೆಯೇ ಅವರ ಕೆಲವು ಅವಲೋಕನಗಳು ಕುತೂಹಲಕಾರಿಯಾಗಿವೆ. ಉದಾಹರಣೆಗಾಗಿ ಅವರು ಹೆಣ್ಣಿನ ಲೋಕನೋಟವನ್ನು ಕನ್ನಡ ಸಾಹಿತ್ಯ ಗ್ರಹಿಸಿಲ್ಲ ಎಂದು ಮಂಡಿಸುವ ಮಂಡನೆಯನ್ನು ನೋಡಬಹದು. ಹೆಣ್ಣನ್ನು ಕೇವಲ ಗಂಡುಲೋಕದ ಅನುಬಂಧವಾಗಿ ನೋಡಿದ್ದರಿಂದ ಹೆಣ್ಣುಲೋಕದ ಒಳವಿನ್ಯಾಸಗಳನ್ನು ಬಹಳಷ್ಟು ಬರೆಹಗಾರರಿಗೆ ಗ್ರಹಿಸಲಾಗಲಿಲ್ಲ. ಹೀಗಾಗಿ, ಹೆಣ್ಣಿನ ಅಭಿವ್ಯಕ್ತಿಯ ಹಕ್ಕು, ಸ್ವಾತಂತ್ರ್ಯ ಹಾಗೂ ಹೊಣೆಗಾರಿಕೆಯ ಆಯಾಮಗಳು ಕೂಡ ಕನ್ನಡ ಕಥನ ಸಾಹಿತ್ಯದಲ್ಲಿ ತಲೆಯೆತ್ತಲೇ ಇಲ್ಲ ಎಂಬುದಾಗಿ ಹೇಳುತ್ತಾರೆ. ಆಧುನಿಕ ಕನ್ನಡ ಕಥನಗಳಲ್ಲಿ ಚಿತ್ರಣಗೊಂಡಿರುವ ಸ್ತ್ರೀಯರನ್ನು ಅಧ್ಯಯನ ಮಾಡುವ ಮೂಲಕ ಹೆಣ್ಣಿನ ನಿರ್ವಚನೆ ಮತ್ತು ಅದಕ್ಕಿರುವ ಸಾಮಾಜಿಕ, ಸಾಂಸ್ಕೃತಿಕ ನಂಟುಗಳನ್ನು ಗುರುತಿಸುವುದನ್ನು ಇಲ್ಲಿ ಕಾಣಬಹುದು. ಹೀಗೆ ಮಾಡುವಾಗ ಪುರುಷರ ಮತ್ತು ಮಹಿಳೆಯರ ಕಥನಗಳೆರಡನ್ನೂ ಪರಿಗಣಿಸಿದ್ದಾರೆ. ಹೆಣ್ಣನ್ನು ಅಸಮಾನ ನೆಲೆಯಲ್ಲಿ ನೋಡಿರುವುದು ಮತ್ತು ಅವಳ ಅಸ್ಮಿತೆ, ಶಕ್ತಿ ಸಾಧ್ಯತೆಯ ನೆಲೆಯಲ್ಲಿ ನೋಡಿರುವುದು ಎರಡನ್ನೂ ಗಮನಿಸುತ್ತಾ ಹೆಣ್ಣು ಲೋಕನೋಟವನ್ನು ಗ್ರಹಿಸುವ ಕ್ರಮವನ್ನು ಮುನ್ನೆಲೆಗೆ ತರುತ್ತಾರೆ. ಹೆಣ್ಣಿನ ಬಿಡುಗಡೆ ಎಂಬುದು ಕಾನೂನಿನ ಪರಿಭಾಷೆಗೆ ಸೀಮಿತವಾಗದೇ ಅದೊಂದು ಸಾಮಾಜಿಕ ಪ್ರಕ್ರಿಯೆಯಾಗುವ ಹಾದಿ ಇನ್ನೂ ದೂರದಲ್ಲೇ ಇದ್ದು ನಮ್ಮೆಲ್ಲ ಚಿಂತನೆಗಳು ಈ ಹಾದಿಯಲ್ಲೇ ಕ್ರಮಿಸಬೇಕಾದ ಜರೂರು ಇದೆ. ಇದಕ್ಕಾಗಿ ಜ್ಞಾನ ಮೀಮಾಂಸೆಗಳ ಸೂಕ್ತ ಬಳಕೆಯಷ್ಟೇ ಸಾಲದು, ವ್ಯಕ್ತಿಪ್ರಯತ್ನಗಳೂ ಅಗತ್ಯ. ಹೀಗಿಲ್ಲದೇ ಹೋದಲ್ಲಿ ಸಾರ್ವಜನಿಕ ಜೀವನದಲ್ಲಿ ಬಲವಂತವಾಗಿ ಬಿಂಬಿಸಿಕೊಂಡ ಸ್ತ್ರೀಪರ ಮುಖದಾಚೆಗೆ ಅಡಗಿ ಕುಳಿತಿರುವ ಕೊಳಕು ದರ್ಶನ ಬೇರೆ ಬೇರೆ ಸನ್ನಿವೇಶದಲ್ಲಿ ಆಗುತ್ತಲೇ ಇರುತ್ತದೆ. ಇದಲ್ಲದೆ, ಹೆಣ್ಣಿನ ಉದ್ಧಾರ ಸೂತ್ರವೆಂಬಂತೆ ಹೆಣೆದಿರುವ ಮೇಲ್ನೋಟದ ಸಹಾನುಭೂತಿಯ ಕೆಲವು ನಿಲುವುಗಳು ಎಷ್ಟು ಟೊಳ್ಳಾಗಿರುತ್ತದೆ ಎಂಬುದೂ ಕೆಲವೊಂದು ಆಯಕಟ್ಟಿನ ಸನ್ನಿವೇಶದಲ್ಲಿ ಬಾಯ್ದೆರೆದು ತೋರುತ್ತದೆ. ಸಾಹಿತ್ಯ ಕೃತಿಗಳು ಇವುಗಳನ್ನು ಉದರದಲ್ಲಿ ಹೊತ್ತಿದ್ದು ಇಂತಹ ಅಸಮಾನ, ಅಸಹನೆಯ ನೋಟಗಳನ್ನು ಮತ್ತೆ ಅದೇ ಅಸಮಾನ ಸಮಾಜದಲ್ಲಿ ಬೇರೂರಿಸುವುದಕ್ಕಾಗಿ ಟೂಲ್ ಗಳಾಗುವುದನ್ನು ನೋಡಬಹುದು. ಉದಾಹರಣೆಗೆ, ಗೃಹಭಂಗ ಕಾದಂಬರಿಯಲ್ಲಿ ಹೆಣ್ಣಿನ ಬವಣೆ ಮತ್ತು ಗಂಡಿನ ಬೇಜವಾಬ್ದಾರಿಗಳನ್ನು ಚಿತ್ರಿಸಿದ್ದ ಭೈರಪ್ಪನವರು ಇಲ್ಲಿ ಹೆಣ್ಣಿನ ಬಗೆಗೆ ಹೊಂದಿದ್ದ ಸಹಾನುಭೂತಿ ಪ್ರಾಮಾಣಿಕವಾದದ್ದೇ ಎಂದು ಅನುಮಾನಿಸುವಂತೆ ಅವರ ಕವಲು ಕಾದಂಬರಿಯಲ್ಲಿ ಹೆಣ್ಣಿನ ಚಿತ್ರಣವಿದೆ. ಎಲ್ಲಿಯ ತನಕ ಅವಳು ಗಂಡಿನ ಕೇಂದ್ರವನ್ನು ಪ್ರಶ್ನಿಸುವವಳಾಗುವುದಿಲ್ಲವೋ ಅಲ್ಲಿಯ ತನಕ ಅವಳೆಡೆಗೆ ಕರುಣೆಯ ನೋಟ ಹರಿಸುವವರೇ, ಅವಳು ಇಡೀ ಅಸಮಾನ ಸಾಮಾಜಿಕ ರಚನೆಯನ್ನು ಮುರಿದರೆ, ಮೀರಿದರೆ, ಸವಾಲಾದರೆ ಆಗ ಸಹಿಸದೇ ಕೇಡಿಯನ್ನಾಗಿಸುವ ಈ ವಿಕಾರಗಳನ್ನು ತಡೆಯುವುದೆಂತು ಎಂಬ ಪ್ರಶ್ನೆಗೆ ಉತ್ತರವೋ ಎಂಬಂತೆ ಮೇಟಿಯವರು, “ನಾವು ಇದುವರೆಗೆ ಮೇಲ್ವರ್ಗದವರಾಗಿ, ಗಂಡಸರಾಗಿ ಹಾಗೂ ಮನುಷ್ಯ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಲೇ ಬಂದಿರುತ್ತೇವೆ. ಈಗ ನಾವು ಅವುಗಳನ್ನು ವಿಸರ್ಜಿಸಿದ್ದೇವೆ, ಕ್ಷಮಿಸಿ ಎಂದು ಹೆಣ್ಣುಮಕ್ಕಳನ್ನು, ದಲಿತರನ್ನು ಹಾಗೂ ಒಟ್ಟಾರೆ ದಮನಿತ ವರ್ಗಗಳನ್ನು ಕೇಳುವ ಕಾಲ ಇದಾಗಿದೆ” ಎನ್ನುತ್ತಾರೆ. (ಪು:೧೦೧)

ಇತಿಹಾಸದುದ್ದಕ್ಕೂ ಚಿಂತನೆಗಳು ಹುಟ್ಟಿಕೊಂಡಂತೆಯೇ ಅವುಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಕ್ರಿಯೆ ನಡೆದಂತೆಯೇ ಅವುಗಳನ್ನು ಪ್ರಶ್ನಿಸುವ, ನಿರಾಕರಿಸುವ ಕ್ರಿಯೆಗಳೂ ನಡೆದಿವೆ. ಈ ಕ್ರಿಯೆಗಳ ಸ್ವರೂಪದಲ್ಲಿ ವ್ಯತ್ಯಾಸಗಳಿರಬಹುದು. ೧. ಅದನ್ನು ತಾನು ಒಪ್ಪದಿರುವುದು ಮಾತ್ರವಲ್ಲ, ಇತರರೂ ಒಪ್ಪದಂತೆ ಒತ್ತಾಯಿಸುವುದು. ಹಾಗೆ ಮಾಡುವಾಗ ಆಕ್ರಾಮಕವಾಗುವುದು. ಇದಕ್ಕೆ ಅಧಿಕಾರ ರಾಜಕಾರಣದ ಗುರಿ ಇರುತ್ತದೆ. ೨. ತಾನು ಒಪ್ಪುವುದಿಲ್ಲ, ಅದರೊಳಗಣ ಕೊರತೆ, ಮುಖ್ಯವಾಗಿ ಅಮಾನುಷ ತಳಹದಿಯವಾಗಿದ್ದಲ್ಲಿ ತಿರಸ್ಕರಿಸಿ, ಬದಲಿ ಚಿಂತನೆಯನ್ನು ಪ್ರಸ್ತುತಗೊಳಿಸುವುದು. ಇದು ಆಕ್ರಾಮಕವಾಗಿರುವುದಿಲ್ಲ. ತಿಳಿವಿನ ದಾರಿಯಾಗಿರುತ್ತದೆ. ಇದಕ್ಕೆ ಜನ ಸಮೂಹದ ಬದುಕನ್ನು ಹಸನುಗೊಳಿಸುವ ಗುರಿ ಇರುತ್ತದೆ. ಈ ಎರಡು ಬಗೆಗಳು ಚರಿತ್ರೆಯುದ್ದಕ್ಕೂ ಚಲಾವಣೆಯಲ್ಲಿರುತ್ತಾ ಕೆಲವೊಮ್ಮೆ ಮೊದಲನೆಯದು ಮೇಲುಗೈ ಸಾಧಿಸುತ್ತಾ, ಮನುಕುಲವನ್ನು ಬಾಧಿಸುತ್ತಲೇ ಇರುತ್ತದೆ. ಮಾತ್ರವಲ್ಲ, ಅರಿವಿನ ದಾರಿಗಳನ್ನು ಅಡಗಿಸುತ್ತಲೇ ಇರುತ್ತದೆ. ಒಂದು ರೀತಿಯಲ್ಲಿ ಸಬಾಲ್ಟ್ರನ್ ಅಧ್ಯಯನ ಈ ಅರಿವಿನ ದಾರಿಯನ್ನು ಅಗೆಯುವ ಕೆಲಸ ಮಾಡುತ್ತಿರುತ್ತದೆ. ಅಗೆಯುವ ಕೆಲಸ ಯಾಕೆಂದರೆ, ಅರಿವಿನ ಬೀಜಗಳು ನಮ್ಮ ನಮ್ಮ ನೆಲದಲ್ಲೇ ಹುದುಗಿದ್ದು, ಅದನ್ನು ಕಾಣುವ ಕಣ್ಣುಗಳನ್ನೇ ನಾವು ಕಳೆದುಕೊಂಡಿರುತ್ತೇವೆ. ಅದಕ್ಕಾಗಿ ಇನ್ನೆಲ್ಲಿನದೋ ಹತಾರುಗಳನ್ನು ಆಮದು ಮಾಡಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಇಂತಹ ಬೀಜಗಳು ನಮ್ಮದೇ ನೆಲದ ಹಾಡು ಹಸೆಗಳಲ್ಲೋ, ಆಚರಣೆಗಳಲ್ಲೋ, ಕಥನಗಳಲ್ಲೋ ರೂಪ ಬದಲಿಸಿಕೊಂಡು ಇರುವುದನ್ನೂ ನಾವು ಗುರುತಿಸಿರುವುದಿಲ್ಲ. ಯಾಕೆಂದರೆ ಇವೆಲ್ಲವೂ ಮೌನವಾಗಿಸಲಾದ ಚಿಂತನೆಗಳೇ ಆಗಿರುತ್ತವೆ. ಮೇಟಿಯವರು ಸಬಾಲ್ಟ್ರನ್ ಅಧ್ಯಯನದ ಅವಶ್ಯಕತೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ. ಈ ಕೃತಿಯಲ್ಲಿ ಇದಕ್ಕೆ ನೇರವಾಗಿ ಸಂಬಂಧಿಸಿದ ನಾಲ್ಕು ಲೇಖನಗಳಿವೆ. ಗಾಯತ್ರಿ ಸ್ಪಿವಾಕ್ ಚಕ್ರವರ್ತಿಯರ ‘ಕ್ಯಾನ್ ದ ಸಬಾಲ್ಟ್ರನ್ ಸ್ಪೀಕ್?’ ಅವರ ನೆಚ್ಚಿನ ಬರಹಗಳಲ್ಲೊಂದು. ಅದನ್ನು ವಿಸ್ತಾರವಾಗಿ ಇಲ್ಲಿ ಚರ್ಚಿಸಿದ್ದಾರೆ. “ತಳಸಮುದಾಯಗಳ ನೆಲೆಯಿಂದ ಚಿಂತನೆ: ಹಾಗೆಂದರೇನು?” ಎನ್ನುವುದು ಮಹತ್ವದ ಲೇಖನ. ಈ ಲೇಖನದಲ್ಲಿ ಮೌಖಿಕ ಕಥನಗಳ ಚರ್ಚೆ ಮಾಡುತ್ತಾ, ಮೌಖಿಕ ಮಹಾಕಥನಗಳ ನಾಯಕರು ಅಯೋನಿಜರಾಗಿ ಜನ್ಮತಾಳಿದವರು ಎಂಬ ನಂಬಿಕೆಯನ್ನು ಪ್ರಸ್ತಾಪಿಸುತ್ತಾರೆ. ಹಾಗೂ ಅದನ್ನೊಂದು ಸಾಂಸ್ಕೃತಿಕ ಹೆಚ್ಚುಗಾರಿಕೆಯನ್ನಾಗಿ ಬಿಂಬಿಸಲಾಗುತ್ತದೆ ಎನ್ನುವುದನ್ನೂ ಹೇಳುತ್ತಾರೆ. ಈ ಅಯೋನಿಜ ಕಲ್ಪನೆಯೇ ರೋಮಾಂಚಕವಾದುದು. ಇಡೀ ತರತಮದ, ಶ್ರೇಣೀಕರಣದ ವ್ಯವಸ್ಥೆಯನ್ನೇ ಇದು ಎಷ್ಟು ಅದ್ಭುತವಾಗಿ ಕೆಡವಿಹಾಕುತ್ತದೆ ಎನ್ನಿಸುತ್ತದೆ. ಹುಟ್ಟಿನ ಮೂಲಕ ನಿರ್ಧರಿಸುವ ಪ್ರಮೇಯವನ್ನೇ ಇದು ಕಿತ್ತುಕೊಂಡು ಬಿಡುತ್ತದೆ. ಮೌಖಿಕ ಕಾವ್ಯಗಳ ಇಂತಹ ಇನ್ನೆಷ್ಟು ಕಣ್ಣು ತೆರೆಸುವ ಕಣ್ನೋಟಗಳು ಇವೆಯೋ ಅರಿಯಬೇಕಿದೆ.

ಎಲ್ಲ ನಿಜ. ಆದರೆ ಏನನ್ನೇ ತಿಳಿಯಬೇಕೆಂದರೂ ಅದರ ತಿಳುವಳಿಕೆಯು ಸ್ಪಷ್ಟಗೊಂಡಿರಬೇಕು. ಈ ಕೃತಿ ಆ ಕುರಿತಾಗಿಯೂ ಗಮನ ಹರಿಸುತ್ತದೆ. ಅಂಬೇಡ್ಕರ್ ರನ್ನು ತಿಳಿಯಲು ಒಂದು ಸಾಮಾನ್ಯ ಅಂದಾಜಿನ ಓದು ಸಾಲುವುದಿಲ್ಲ. ಆದರೆ ನಮ್ಮಲ್ಲಿ ಹಲವು ವಿಷಯಗಳ ಕುರಿತು ಈ ‘ಅಂದಾಜಿನ’ ಓದೇ ಮುಂಚೂಣಿಯಲ್ಲಿರುವುದು. ಇದು ಕೇವಲ ನಿರ್ಲಕ್ಷಿಸಬಹುದಾದ ಸಾಮಾನ್ಯ ಸಂಗತಿ ಖಂಡಿತಾ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯ ಕುರಿತು ಈ ಕೃತಿ ಹೆಚ್ಚಿನ ಗಮನ ಹರಿಸುತ್ತದೆ. ನಾವು ಸಾಧಾರಣವಾಗಿ ಬಳಸುತ್ತಲೇ ಇರುವ ರಾಷ್ಟ್ರ, ರಾಷ್ಟ್ರೀಯತೆ, ಶ್ರೇಣೀಕರಣ ಮೊದಲಾದವುಗಳು ಕೇವಲ ಪದಗಳಾಗಿರುವುದಿಲ್ಲ. ಅದು ಪ್ರತಿನಿಧಿಸುವ ಸಂಗತಿಯ ಕುರಿತು ಖಚಿತ ತಿಳುವಳಿಕೆಯಿಲ್ಲದಾಗ ಅದು ಕೇವಲ ಭಾವನಾತ್ಮಕ ಆವೇಶದ ಸಂಗತಿಯಾಗಿ, ಪರಿಕರಗಳಾಗಿ ಪರಿವರ್ತನೆ ಆಗುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳ ವಿಶ್ಲೇಷಣೆ ಕನ್ನಡದ ಅವಶ್ಯಕತೆಯೂ ಹೌದು. ಕನ್ನಡಕ್ಕೆ ಸ್ವಲ್ಪ ಅಪರಿಚಿತವಾಗಿರುವ ರೂಪಾವಳಿ ಮತ್ತು ಪರಕೀಯತೆಯ ಕುರಿತ ಟಿಪ್ಪಣಿಗಳು ಕೂಡ ಇಲ್ಲಿವೆ.

ಯಾವುದೇ ಚಿಂತನೆ ದಮನಿತರ ‘ಪರ’ ಮಾತಾಡಿದರೆ ಸಾಕಾಗುವುದಿಲ್ಲ. ಬದಲಿಗೆ ಅವರಿಗೆ ತೋರುವ ಬಿಡುಗಡೆಯ ದಿಕ್ಕಿಗೊಂದು ಖಚಿತತೆ ಹಾಗೂ ಸರಿದಾರಿ ಇರಬೇಕು. ಇಲ್ಲವಾದಲ್ಲಿ ಅದು ಇನ್ನೊಂದು ವಿನಾಶಕ್ಕೆ ತೋರಿದ ಉತ್ಸಾಹವಷ್ಟೇ ಆಗಿ ಉಳಿಯುತ್ತದೆ. ಮತ್ತದನ್ನು ಸರಿಮಾಡಲು ಅಥವಾ ಸರಿ ದಾರಿ ತಿಳಿದು ಪಯಣಿಸಲು ಶತಮಾನಗಳೇ ಬೇಕಾಗುತ್ತದೆ. ಈ ಕಾರಣಕ್ಕಾಗಿ ನ್ಯಾಯ ಒದಗಿಸುವುದು ಎಂದರೆ ಅಧಿಕಾರ ಕೇಂದ್ರಗಳನ್ನು ಬದಲಿಸುವುದಲ್ಲ. ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಗೆ ಒಳಪಡುವುದು. ಇಲ್ಲದಿದ್ದಲ್ಲಿ ದಮನಿತರು ನವಶೋಷಕರಾಗಿ ಬದಲಾಗುವುದಷ್ಟೇ ಸಂಭವಿಸಬಹುದು. ಇಂತಹ ಹುಂಬ ದಾರಿ ಹಿಡಿದ ಇಡೀ ಸಮುದಾಯ, ಸಮಾಜ, ರಾಷ್ಟ್ರವನ್ನು ಕುರಿತು ಎಷ್ಟೇ ಭಾವುಕವಾಗಿ ಮಾತಾಡಿದರೂ ಸರಿಪಡಿಸಲಾಗುವುದಿಲ್ಲ. ಇದು ಇನ್ನಾರೋ ಸಮಯಸಾಧಕರಿಗೆ ರತ್ನಗಂಬಳಿ ಹಾಸಿದಂತೆ ಆಗಬಹುದು. ಅದು ಹೆಣ್ಣಿನ ರೂಪದಲ್ಲೋ, ದಮನಿತರ ರೂಪವನ್ನೋ ಧರಿಸಿನಿಂತ ಮಾತ್ರಕ್ಕೆ ಬದಲಾವಣೆಗಳು ಆಗುವುದಿಲ್ಲ ಎಂಬ ಎಚ್ಚರ ನಮಗೆ ಸದಾ ಇರಬೇಕಿರುತ್ತದೆ. ಈ ದೃಷ್ಟಿಯಿಂದ ನಮ್ಮ ಓದಿನ ಸೈದ್ಧಾಂತಿಕೆಯ ಸರಿನೋಟದ ಕಡೆಗೆ ನಮ್ಮ ಗಮನವನ್ನು ಈ ಕೃತಿ ಸೆಳೆಯುತ್ತಿರುವುದು ಕೃತಿಯ ಹೆಚ್ಚುಗಾರಿಕೆ ಮಾತ್ರವಲ್ಲ, ಈ ಕಾಲದ ಅವಶ್ಯಕತೆ ಕೂಡ ಹೌದು.
– ಸಬಿತಾ ಬನ್ನಾಡಿ




