ಧರ್ಮಸ್ಥಳ ನಿಗೂಢ ಸಾವು ಪ್ರಕರಣಗಳು
ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ವ್ಯಕ್ತಿ
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ವಿದ್ಯಾರ್ಥಿನಿ ಸೌಜನ್ಯ ಅವರ ನಿಗೂಢ ಸಾವಿನ ಕುರಿತಂತೆ ವಿಸ್ತೃತ ತನಿಖೆಗೆ ಆಗ್ರಹಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಧರ್ಮಸ್ಥಳ ಗ್ರಾಮದಲ್ಲಿ ನೂರಕ್ಕೂ ಅಧಿಕ ಶವಗಳನ್ನು ಹೂತುಹಾಕಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಮ್ಮ ವಕೀಲರ ಮೂಲಕ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ದೂರು ಸಲ್ಲಿಸಿರುವ ವ್ಯಕ್ತಿಯ ರಕ್ಷಣೆಯ ದೃಷ್ಟಿಯಿಂದ ಆತನ ವಿವರಗಳನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಬಹಿರಂಗಪಡಿಸಿಲ್ಲ.
ವಕೀಲರಾದ ಓಜಸ್ವಿ ಗೌಡ, ಸಚಿನ್ ದೇಶಪಾಂಡೆ ಅವರ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದ ಈ ವ್ಯಕ್ತಿ, ಗುರುತು ಪತ್ತೆಯಾಗದಂತೆ ತಲೆಯಿಂದ ಕಾಲಿನವರೆಗೆ ಕಪ್ಪು ಬಣ್ಣದ ಮುಸುಕು ಧರಿಸಿದ್ದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ನಂತರ ಈ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೇಳಿಕೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದ ದೂರುದಾರರ ದೂರನ್ನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 183ರ ಅಡಿಯಲ್ಲಿ ನ್ಯಾಯಾಲಯ ದಾಖಲಿಸಿಕೊಂಡಿದೆ ಎಂದು ವಕೀಲ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಧರ್ಮಸ್ಥಳದಲ್ಲಿ ನಾನು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಈ ಅವಧಿಯಲ್ಲಿ ನನಗೆ ಜೀವಬೆದರಿಕೆ ಒಡ್ಡಿ, ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಕೆಲವು ಮೃತ ದೇಹಗಳನ್ನು ನೇತ್ರಾವತಿ ನದಿ ದಂಡೆಯಲ್ಲಿ ಹೂತು ಹಾಕಿದ್ದೇನೆ. ಅನೇಕ ಮೃತ ದೇಹಗಳಿಗೆ ಅಗ್ನಿಸ್ಪರ್ಶ ಮಾಡಿದ್ದೇನೆ, ಕೆಲವೊಂದು ದೇಹಗಳನ್ನು ಹರಿಯುವ ನದಿಯಲ್ಲಿ ಎಸೆದಿದ್ದೇನೆ. ಈ ಮೂಲಕ ಹಲವಾರು ಮೃತದೇಹಗಳ ವಿಲೇವಾರಿ ಮಾಡಿದ್ದು, ಈ ಬಗ್ಗೆ ಪಾಪಪ್ರಜ್ಞೆ ಕಾಡುತ್ತಿದೆ. ನನಗೆ ಹಾಗೂ ನನ್ನ ಕುಟುಂಬದವರಿಗೆ ಕಾನೂನಾತ್ಮಕ ರಕ್ಷಣೆ ದೊರೆತರೆ ಕೃತ್ಯ ನಡೆಸಿದವರ ಮಾಹಿತಿ ಹಾಗೂ ನಾನು ಮೃತದೇಹ ವಿಲೇವಾರಿ ಮಾಡಿದ ಸ್ಥಳಗಳನ್ನು ತಿಳಿಸಲು ಸಿದ್ಧನಿದ್ದೇನೆ” ಎಂದು ಆ ವ್ಯಕ್ತಿ ಜುಲೈ 3ರಂದು ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಮೃತಪಟ್ಟವರಲ್ಲಿ ಬಹುತೇಕರು ಬಾಲಕಿಯರಾಗಿದ್ದಾರೆ. ಅನೇಕ ಮೃತ ದೇಹಗಳಿಗೆ ಮೈ ಮೇಲೆ ಬಟ್ಟೆ ಇರುತ್ತಿರಲಿಲ್ಲ. ಕೆಲವು ಮೃತ ದೇಹಗಳಿಗೆ ಇರಿದ ಗಾಯಗಳಾಗಿದ್ದರೆ, ಮತ್ತೆ ಕೆಲವು ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಈ ಬಗ್ಗೆ ಅಂದು ನಾನು ಪ್ರಶ್ನೆ ಮಾಡಿದಾಗ ಅವರು ನನಗೆ ಜೀವ ಬೆದರಿಕೆ ಒಡ್ಡಿದ್ದರು. ನನಗಿಂತ ಮೊದಲು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈ ಮೃತ ದೇಹಗಳನ್ನು ವಿಲೇವಾರಿ ಮಾಡಲು ಒಪ್ಪದೇ ಇದ್ದಾಗ ಆತನನ್ನು ಕಳುಹಿಸಬೇಕಾದ ಜಾಗಕ್ಕೆ ಕಳುಹಿಸಿದ್ದೇವೆ. ನೀನು ಆ ಜಾಗಕ್ಕೆ ಹೋಗಬೇಕು ಎಂದಾದರೆ ನಿನಗನ್ನಿಸಿದಂತೆ ಮಾಡು. ಇಲ್ಲವಾದರೆ ನಾವು ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿದ್ದರು” ದೂರಿದ್ದಾರೆ.
“ಕೆಲವು ದಿನಗಳ ಕಾಲ ಮೃತದೇಗಳನ್ನು ವಿಲೇವಾರಿ ಮಾಡಿದ ನಂತರ ನಾನು ಪ್ರಾಣಭಯದಿಂದ ಬೇರೊಂದು ಊರಿಗೆ ಓಡಿ ಹೋದೆ. ಈಗ ಅಲ್ಲಿ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂಬ ಕಾರಣಕ್ಕೆ ಈಗ ದೂರು ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ತಮ್ಮೊಂದಿಗೆ ಅಸ್ತಿಪಂಜರದ ತಲೆ ಬುರುಡೆಯೊಂದನ್ನು ಹಿಡಿದು ವಕೀಲರ ಜೊತೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದು, ದೂರು ನೀಡಿದ ವ್ಯಕ್ತಿ ಶವಗಳನ್ನು ಹೂತು ಹಾಕಿದ್ದಾರೆ ಎಂದು ಹೇಳಲಾದ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ಕೂಡ ನಡೆಸಿದ್ದಾರೆ.




