ಬೆಂಗಳೂರು: ಅಸಹಜ ಸಾವುಗಳ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಧರ್ಮಸ್ಥಳದಲ್ಲಿ ತಾವು ಕೆಲಸ ಮಾಡುತ್ತಿದ್ದ ವೇಳೆ ನೂರಾರು ಮೃತದೇಹಗಳನ್ನು ಹೂತು ಹಾಕಿದ್ದೆ ಎಂದು ಬುರುಡೆ ಸಮೇತ ಪೊಲೀಸರ ಮುಂದೆ ಹಾಜರಾಗಿದ್ದ ದೂರುದಾರ ಚಿನ್ನಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ದೇಶಾದ್ಯಂತ ಗಮನ ಸೆಳೆದ ಈ ಪ್ರಕರಣದಲ್ಲಿ ಅನಾಮಿಕ ದೂರುದಾರನಾಗಿ ಗುರುತಿಸಿಕೊಂಡಿದ್ದ ಚಿನ್ನಯ್ಯ ಎಂಬ ವ್ಯಕ್ತಿಯನ್ನೇ ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಥಮ ಆರೋಪಿ ಯನ್ನಾಗಿ ಮಾಡಿದೆ. ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಈತ ನ್ಯಾಯಾಲಯಕ್ಕೆ ತಂದಿರುವ ತಲೆಬುರುಡೆಯ ವಿಚಾರದಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ. ತಲೆಬುರುಡೆಯನ್ನು ತೆಗೆದ ಜಾಗದ ಮಹಜರು ಪ್ರಕ್ರಿಯೆ ಇನ್ನೂ ಮಾಡಲು ಸಾಧ್ಯವಾಗಿಲ್ಲ. ಈತ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಇಡೀ ವ್ಯವಸ್ಥೆಯನ್ನು ಗೊಂದಲಕ್ಕೆ ಸಿಲುಕಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈತ ನ್ಯಾಯಾಧೀಶರ ಮುಂದೆ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದು, ಈ ಹೇಳಿಕೆ ವೇಳೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಆತ ಇದೀಗ ಎಸ್.ಐ.ಟಿಗೆ ಹೇಳಿಕೆ ನೀಡಿದ್ದಾನೆ. ಅಲ್ಲದೆ ಈತನ ಹೊಸ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದೀಗ ಪ್ರಕರಣದಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣ 39/25ರಲ್ಲಿ ಹೊಸದಾಗಿ ಹಲವು ಸೆಕ್ಷನ್ ಗಳನ್ನು ಸೇರಿಸಲಾಗಿದೆ. ಈಗ ದಾಖಲಾಗಿರುವ ಹೊಸ ಪ್ರಕರಣಗಳ ಬಗ್ಗೆ ನ್ಯಾಯಾಲಯದಿಂದ ಮಾಹಿತಿಗಳು ಲಭ್ಯವಾಗುತ್ತಿಲ್ಲವಾದರೂ ಲಭ್ಯ ಮಾಹಿತಿಗಳಂತೆ ಇದೀಗ ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನ ವಿರುದ್ದ BNS 336 (ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಭಯಭೀತಗೊಳಿಸುವುದು), 230 (ಸಾರ್ವಜನಿಕ ಸೇವಕರಿಗೆ ತಪ್ಪು ಮಾಹಿತಿ ನೀಡುವುದು), 231 (ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಪಡಿಸುವುದು), 229 (ಸುಳ್ಳು ಸಾಕ್ಷ್ಯ ನೀಡುವುದು), 227 (ಸಾರ್ವಜನಿಕ ಶಾಂತಿ ಕದಡುವುದು), 228 (ನ್ಯಾಯಾಲಯಕ್ಕೆ ಅಪಮಾನ ಮಾಡುವುದು), 240 (ತಪ್ಪು ಮಾಹಿತಿ ನೀಡಿ ತನಿಖೆ ದಿಕ್ಕು ತಪ್ಪಿಸುವುದು), 236 (ಪಿತೂರಿ), 233 (ತಪ್ಪಾಗಿ ಜನರನ್ನು ಪ್ರೇರೇಪಿಸುವುದು) ಮತ್ತು 248 (ಸುಳ್ಳು ದೂರು ನೀಡಿ ಸಮಯ ಹಾಳುಮಾಡುವುದು) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ಮಹೇಶ್ ಶೆಟ್ಟಿ ಮನೆಯಲ್ಲಿದ್ದ ಚಿನ್ನಯ್ಯನಿಗೆ ಸೇರಿದ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಚಿನ್ನಯ್ಯನ ವಿರುದ್ದ ದಾಖಲಾಗಿರುವ ಪ್ರಕರಣಗಳ ಬಗ್ಗೆ ಹಾಗೂ ಈತ ಹೊಸದಾಗಿ ನಿಡಿರುವ ಹೇಳಿಕೆಗಳನ್ನು ನ್ಯಾಯಾಲಯ ಗೌಪ್ಯವಾಗಿ ಇರಿಸಿದೆ. ಈತನ ವಿರುದ್ದ ಪ್ರಕರಣ ದಾಖಲಾಗಿದ್ದರೂ ಈತನಿಗೆ ನೀಡಲಾಗಿರುವ ಸಾಕ್ಷಿ ಸಂರಕ್ಷಣೆ ಇನ್ನೂ ಮುಂದುವರಿದಿದ್ದು, ಈ ಕಾರಣದಿಂದಾಗಿ ಮಾಹಿತಿಗಳನ್ನು ಬಹಿರಂಗ ಪಡಿಸಲಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಈ ಪ್ರಕರಣದ ಮಾಹಿತಿಗಳನ್ನು ಗೌಪ್ಯವಾಗಿಡುವಂತೆ ಮನವಿ ಮಾಡಿದ್ದು, ನ್ಯಾಯಾಲಯ ಇದಕ್ಕೆ ಒಪ್ಪಿ ಗೆ ನೀಡಿದೆ.
ದೂರು ಸಲ್ಲಿಕೆ: ಈ ನಡುವೆ ಸೌಜನ್ಯಾ ತಾಯಿ ಕುಸುಮಾ ಅವರು ಎಸ್ ಐಟಿ ಕಚೇರಿಗೆ ಆಗಮಿಸಿ, ಚಿನ್ನಯ್ಯನ ವಿರುದ್ಧ ದೂರು ಕೊಟ್ಟಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ಚಿನ್ನಯ್ಯನ ವಿರುದ್ಧ ತನಿಖೆ ಮಾಡುವಂತೆ ಕುಸುಮಾ ದೂರಿನಲ್ಲಿ ಕೇಳಿಕೊಂಡಿದ್ದಾರೆ.
ಸೌಜನ್ಯಾ ಹೆಣವನ್ನು ತೆಗೆದುಕೊಂಡು ಹೋಗಿರುವುದು ನೋಡಿದ್ದಾಗಿ ಚಿನ್ನಯ್ಯ ಹೇಳಿದ್ದರು.
ಇದನ್ನು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವ ಸೌಜನ್ಯ ಅವರ ತಾಯಿ ಧರ್ಮಸ್ಥಳದಲ್ಲಿ ಚಿನ್ನಯ್ಯ ಕೆಲಸ ಮಾಡುವ ವೇಳೆಯಲ್ಲಿ 2012ರಲ್ಲಿ ಸೌಜನ್ಯ ಹತ್ಯೆ ಹಾಗೂ ಅತ್ಯಾಚಾರ ಆಗಿತ್ತು. ಆಕೆಯ ಹೆಣ ಹೊತ್ತುಕೊಂಡು ಹೋಗುವುದನ್ನು ನಾನು ನೋಡಿದ್ದೆ ಎಂದು ಚಿನ್ನಯ್ಯ ಯೂಟ್ಯೂಬ್ ಸಂದರ್ಶನಕ್ಕೆ ಹೇಳಿದ್ದರು. ಹೀಗಾಗಿ ಪ್ರಕರಣದಲ್ಲಿ ಆತನನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಮನವಿಯಲ್ಲಿ ಹೇಳಿದ್ದಾರೆ.
ಆದರೆ ದೂರು ಸ್ವೀಕರಿಸಲು ನಿರಾಕರಿಸಿರುವ ಎಸ್‌ಐಟಿ ಅಧಿಕಾರಿಗಳು ನಾವು ಸೂಚಿಸಿದ ಬಳಿಕ ಬಂದು ದೂರು ನೀಡುವಂತೆ ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.




