ಡಿಟೆಕ್ಟಿವ್ ಸ್ಟೋರೀಸ್ (ಪತ್ತೆಯಾಗದ ರೋಚಕ ನಿಗೂಢ ಪ್ರಕರಣಗಳು)

2 years ago

ಆತ್ಮೀಯರೇ,

ಒಂದಷ್ಟು ವಿರಾಮದ ನಂತರ ಮತ್ತೊಂದು ಕೃತಿಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ತುಸು ವೃತ್ತಿ ಒತ್ತಡದ ಕಾರಣಕ್ಕೆ ಬರವಣಿಗೆಗೆ ನನ್ನನ್ನು ನಾನು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ‘ಸ್ವಾತಂತ್ರ್ಯಪೂರ್ವ ಶಿಕಾರಿ ಕಥೆಗಳು’ ಮತ್ತು ’ಆ 117 ದಿನಗಳು’ ಕೃತಿಗಳ ನಂತರ ಸುಮಾರು ಒಂದು ವರ್ಷದ ತರುವಾಯ ನನ್ನ ಹೊಸ ಪುಸ್ತಕ ‘ಡಿಟೆಕ್ಟಿವ್ ಸ್ಟೋರೀಸ್’ ನಿಮ್ಮ ಕೈಸೇರುತ್ತಿದೆ. ಕೃತಿಯಾಗುವುದಕ್ಕೂ ಮುನ್ನ ಆರಕ್ಷಕ ಲಹರಿ ಮಾಸಪತ್ರಿಕೆಯಲ್ಲಿ ಅಂಕಣವಾಗಿ ಇಲ್ಲಿನ ಕೆಲವೊಂದು ಬರಹಗಳು ಪ್ರಕಟವಾಗಿದ್ದವು. ಓದುಗರಿಂದ ಮೆಚ್ಚುಗೆಗೂ ಪಾತ್ರವಾಗಿದ್ದವು.

ಸಾಮಾನ್ಯವಾಗಿ ಡಿಟೆಕ್ಟಿವ್ ಕತೆಗಳು ಎಂದಾಕ್ಷಣ ಒಂದು ಕ್ರೈಮು, ಅದನ್ನು ಸುತ್ತುವರೆದ ರೋಚಕ ತನಿಖೆ, ಮೈನವಿರೇಳಿಸುವ ಥ್ರಿಲ್ಲಿಂಗ್ ಸನ್ನಿವೇಶಗಳನ್ನು ನಾವು ಕಲ್ಪಿಸಿಕೊಳ್ಳುತ್ತೇವೆ. ಅದು ನಿಜವೂ ಹೌದು. ಶೆರ್ಲಾಕ್ ಹೋಮ್ಸ್, ಜೇಮ್ಸ್ ಬಾಂಡ್ ಸರಣಿಗಳು ಮೈದಳಿದಿದ್ದೇ ಹೀಗೆ. ಇಲ್ಲಿರುವ ಪ್ರಕರಣಗಳೂ ಇದಕ್ಕೆ ಹೊರತಲ್ಲವಾದರೂ ಇವೆಲ್ಲ ನೈಜ ಘಟನೆಗಳಾಗಿರುವುದರಿಂದ ರೋಚಕತೆ, ಥ್ರಿಲಿಂಗ್‌ಗಿಂತ ಆಘಾತವನ್ನು ನಮಗೆ ತಂದೊಡ್ಡುತ್ತವೆ. ಮತ್ತೊಂದು ವಿಶೇಷವೆಂದರೆ ಈ ಯಾವ ಪ್ರಕರಣದ ತನಿಖೆಯೂ ತಾರ್ಕಿಕ ಅಂತ್ಯ ಕಂಡಿಲ್ಲ. ದಶಕಗಳ ಹಿಂದೆ ಘಟಿಸಿದ ಈ ಘಟನೆಗಳು ಇವತ್ತಿಗೂ ಜೀವಂತ!

ಪ್ರಶಾಂತ ಸಾಗರದ ನಟ್ಟನಡುವೆ ಅನಾಥವಾಗಿ ನಿಂತಿದ್ದ ಹಡಗೊಂದರ ಸಿಬ್ಬಂದಿ, ಪ್ರಯಾಣಿಕರು ಏನಾದರು? ಪುಟ್ಟ ವಿಮಾನದಲ್ಲಿ ಜಗತ್ತನ್ನೇ ಸುತ್ತಿಬರುವ ಆಸೆಹೊತ್ತು ಹೊರಟ ಆ ಇಬ್ಬರು ಆಗಸದ ನಡುವೆಯೇ ಕಣ್ಮರೆಯಾದದ್ದು ಹೇಗೆ? ಒಂದು ಶಹರವನ್ನೆ ಬೆಚ್ಚಿಬೀಳಿಸಿದ್ದ ಆ ಅನಾಮಿಕ ಪತ್ರಗಳನ್ನು ಬರೆಯುತ್ತಿದ್ದ ವ್ಯಕ್ತಿ ಯಾರು? ಸಾಗರದೀಪದ ಆ ಮೂವರು ಸೆಂಟ್ರಿಗಳು ಸುಳಿವಿಲ್ಲದಂತೆ ಅದೃಶ್ಯವಾಗಲು ಕಾರಣವೇನು? ಮರದ ಪೊಟರೆಯೊಂದರಲ್ಲಿ ಆಕಸ್ಮಿಕವಾಗಿ ಸಿಕ್ಕ ಆ ನಿಗೂಢ ಹೆಣ್ಮಗಳ ಅಸ್ಥಿಪಂಜರದ ಹಿನ್ನೆಲೆ ಏನು? ಆಕೆಯನ್ನು ಕೊಂದವರು ಯಾರು? ಸತ್ತವಳ ಆತ್ಮ ಗೆಳತಿಯ ಮೈಮೇಲೆ ಬಂದು ಕೊಲೆಗಾರನನ್ನು ಹಿಡಿದಿಟ್ಟುಕೊಟ್ಟದ್ದು ದಿಟವೇ ಅಥವಾ ಗೆಳತಿ ಮಾಡಿದ ನಾಟಕವೇ? ಕೋಡ್‌ವರ್ಡ್ ಮೂಲಕ ಕೊಲೆ ಮಾಡುತ್ತಿದ್ದ ಆ ಸರಣಿ ಹಂತಕನ ಉದ್ದೇಶ ಏನಾಗಿತ್ತು?…. ಇಂತಹ ಇನ್ನೂ ನಿಗೂಢ ರೋಚಕ ಪ್ರಕರಣಗಳ ಕಥನ ಈ ಕೃತಿಯಲ್ಲಿದೆ.

ಇದಕ್ಕೆ ಮುನ್ನುಡಿಯನ್ನು ಬರೆದು, ಬಿಡುಗಡೆಯನ್ನೂ ಮಾಡಿದ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರು “ಕನ್ನಡವನ್ನು ಓದಬಲ್ಲ ಪ್ರತಿ ಪೊಲೀಸ್ ಸಿಬ್ಬಂದಿಯ ಸಂಗ್ರಹದಲ್ಲಿ ಇರಲೇಬೇಕಾದ ಕೃತಿ ಇದು” ಎಂದು ಹೇಳಿದ ಮಾತು, ಈ ಕೃತಿಗೆ ಸಿಕ್ಕ ಅತಿದೊಡ್ಡ ಬಹುಮಾನ ಎಂದುಕೊಳ್ಳುತ್ತೇನೆ. ಬಿ.ಕೆ.ಶಿವರಾಂ ಅವರು ವೃತ್ತಿಯಲ್ಲಿದ್ದಾಗ ಖಡಕ್ ಪೊಲೀಸ್ ಆಫೀಸರ್ ಅಂತ ಗುರುತಿಸಿಕೊಂಡದ್ದು ಎಷ್ಟು ಸತ್ಯವೋ, ಅವರೊಳಗೊಬ್ಬ ಅದ್ಭುತ ಕಥೆಗಾರ ಉಸಿರಾಡುತ್ತಿರುವುದೂ ಅಷ್ಟೇ ಸತ್ಯ. ವೃತ್ತಿ ಬದುಕಿನ ಅನುಭವಗಳನ್ನು ಅವರಿಗಿಂತಲೂ ರಂಜನೀಯವಾಗಿ, ಕಣ್ಣಿಗೆ ಕಟ್ಟುವಂತೆ, ಮಾನವೀಯ ಮೌಲ್ಯಗಳ ಆಯಾಮವನ್ನು ಬೆರೆಸಿ ಹೇಳಬಲ್ಲ ಮತ್ತೋರ್ವ ಪೊಲೀಸ್ ವ್ಯಕ್ತಿಯನ್ನು ನಾನು ಕಂಡಿಲ್ಲ. ಅವರ ‘ಪೊಲೀಸ್ ಕಂಡ ಕಥೆಗಳು’ ಕೃತಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದೇ ಇದಕ್ಕೆ ಸಾಕ್ಷಿ. ಅಂತವರೇ ಈ ನನ್ನ ಕೃತಿಯ ಹಸ್ತಪ್ರತಿಯನ್ನು ಎರಡೆರಡು ಬಾರಿ ಓದಿದೆ, ಅಷ್ಟು ಕೌತುಕದಿಂದ ಓದಿಸಿಕೊಂಡು ಹೋಗುತ್ತೆ ಎಂದು ಮುನ್ನುಡಿಯ ಮಾತುಗಳಲ್ಲಿ ಬರೆದುಕೊಂಡಿದ್ದಾರೆ. ನನ್ನ ಪುಟ್ಟ ಪ್ರಯತ್ನಕ್ಕೆ ಇದಕ್ಕಿಂತ ಸಾರ್ಥಕ್ಯ ಬೇಕೆ?

ಕನ್ನಡ ಸಾಹಿತ್ಯಲೋಕದ ಒಂದು ವೈವಿಧ್ಯಮಯ ಪ್ರಾಕಾರಕ್ಕೆ ಹೆಜ್ಜೆ ಇರಿಸಿದ್ದೇನೆ. ಬದುಕಾಗಲಿ, ಸಾಹಿತ್ಯವಾಗಿ, ಸಂಸ್ಕೃತಿಯಾಗಲಿ ವೈವಿಧ್ಯತೆ ಇದ್ದಾಗಲೆ ಅಲ್ಲಿ ಜೀವಂತಿಕೆ ಮತ್ತು ಚಲನಶೀಲತೆ ಉಳಿದುಕೊಳ್ಳಲು ಸಾಧ್ಯ. ‘ಏಕ’ ಎನ್ನುವುದು ಜಡತ್ವವನ್ನು ತರುತ್ತದೆ. ಜಡತ್ವ ನಮ್ಮ ಜೀವನಪ್ರೀತಿಯನ್ನು ಕೊಂದುಹಾಕುತ್ತದೆ. ಈ ನಿಟ್ಟಿನಲ್ಲಿ ತೇಜಸ್ವಿ ಮತ್ತು ಲಂಕೇಶ್ ಅವರು ನನಗೆ ಯಾವತ್ತೂ ಪ್ರೇರಣೆ. ಅವರ ನೆನೆಕೆಯೊಂದಿಗೆ ಈ ಕೃತಿಯನ್ನು ನಿಮ್ಮ ಕೈಗಿಡುತ್ತಿದ್ದೇನೆ.

ಸಂಚಲನ ಪ್ರಕಾಶನದ ರೀಟಾ ರೀನಿಯವರು ಬಹಳ ಮುತುವರ್ಜಿಯಿಂದ ಈ ಕೃತಿಯನ್ನು ಮುದ್ರಿಸಿ, ಹೊರತಂದಿದ್ದಾರೆ. ಕನ್ನಡಿಗರಲ್ಲಿ ಓದಿನ ಅಭಿರುಚಿ ಕಣ್ಮರೆಯಾಗುತ್ತಿದೆ ಎಂಬ ಅಭಿಪ್ರಾಯವನ್ನು ಸುಳ್ಳು ಮಾಡುವಂತೆ ಈ ಹಿಂದಿನ ನನ್ನ ಎರಡು ಕೃತಿಗಳನ್ನು ನೀವೆಲ್ಲ ಅದ್ಭುತವಾಗಿ ಸ್ವೀಕರಿಸಿದ್ದೀರಿ. ಈ ಕೃತಿಗೂ ಅದೇ ಪ್ರೋತ್ಸಾಹ ನೀಡುತ್ತೀರಿ ಎಂಬ ವಿಶ್ವಾಸವಿದೆ. ದಯವಿಟ್ಟು ಪುಸ್ತಕವನ್ನು ಓದಿ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ.

ಕೃತಿಯ ಹೆಸರು: ಡಿಟೆಕ್ಟಿವ್ ಸ್ಟೋರೀಸ್ (ಪತ್ತೆಯಾಗದ ರೋಚಕ ನಿಗೂಢ ಪ್ರಕರಣಗಳು)
ಪ್ರಕಾಶನ: ಸಂಚಲನ
ಮುಖಬೆಲೆ: ರೂ. 180
ಪ್ರತಿಗಳಿಗಾಗಿ ಸಂಪರ್ಕಿಸಿ: 9448545959

ಧನ್ಯವಾದಗಳೊಂದಿಗೆ

  • ಗಿರೀಶ್ ತಾಳಿಕಟ್ಟೆ, ಬರಹಗಾರರು

Leave a Reply