ಬೈಕ್ ನಲ್ಲಿ ಓವರ್ ಟೇಕ್ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ: ಆತ್ಮಹತ್ಯೆಗೆ ಶರಣಾದ ಯುವಕ

4 years ago

ಕೋಲಾರ: ದಲಿತ ಎಂಬ ಕಾರಣಕ್ಕೆ ಮೇಲ್ಜಾತಿಯವರು ಒಟ್ಟಾಗಿ ತನ್ಮನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂದು ಮನ ನೊಂದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಮೇಲ್ಜಾತಿಯವರು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಇದರಿಂದ ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೇವಹಳ್ಳಿಯ ಉದಯ್ ಕಿರಣ್ ಮೃತ ಯುವಕನಾಗಿದ್ದು, ಆತನ ಮೇಲೆ ಜಾತಿ ದೌರ್ಜನ್ಯವೆಸಗಿದ ಆರೋಪದ ಮೇಲೆ ಪೆತಾಂಡ್ಲಹಳ್ಳಿ ಗ್ರಾಮದ ಮೇಲ್ಜಾತಿಯ ಜನಾಂಗಕ್ಕೆ ಸೇರಿದ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ ಹಾಗೂ ಮುನಿವೆಂಕಟಪ್ಪ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 34, 504, 306 ಮತ್ತು 323ರ ಅಡಿಯಡಿ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮುಳಬಾಗಿಲು ತಾಲ್ಲೂಕಿನ ಬೈರಕೂರು ಹೋಬಳಿಯ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗದ ರಾಜು ಬಿನ್ ಗೋಪಾಲಕೃಷ್ಣಪ್ಪ ಅವರ ದ್ವಿಚಕ್ರ ವಾಹನವನ್ನು ಬೇವಹಳ್ಳಿಯ ಉದಯ್ ಕಿರಣ್ ಮತ್ತು ನಾಗಾರಾಜು ಓವರ್ ಟೇಕ್ ಮಾಡಿದರು ಎಂದು ಆರೋಪಿಸಿ ಬೈರಕೂರಿನಲ್ಲಿ ಉದಯ್ ಕಿರಣ್ ವಾಹನವನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಿದ್ದರು ಎಂದು ಮೃತ ಯುವಕನ ಸೋದರ ಮಾವ ನಾಗರಾಜು ಆರೋಪಿಸಿದ್ದಾರೆ.

ಆ ನಂತರವೂ ಸಹ ಕಾಡೆನಹಳ್ಳಿಯಿಂದ ವಾಪಸ್ಸು ಬರುತ್ತಿದ್ದ ಉದಯ್ ಕಿರಣ್ ಮತ್ತು ನಾಗರಾಜರನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ಬಳಿ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ ಮತ್ತು ಮುನಿವೆಂಕಟಪ್ಪ ಅಡ್ಡಗಟ್ಟಿ, ಹೊಡೆದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಿತ್ತುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ದೌರ್ಜನ್ಯವೆಸಗಿರುತ್ತಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ವಾಹನ ಮತ್ತು ಮೊಬೈಲ್ ಕೇಳಲು ಹೋದ ಉದಯ್ ಕಿರಣ್ ನನ್ನು ಪೆತಾಂಡ್ಲಹಳ್ಳಿ ಗ್ರಾಮದ ರಚ್ಚೆ ಕಟ್ಟೆಯ ಮರಕ್ಕೆ ಕಟ್ಟಿ ಹಾಕಿ, ಹೊಡೆದು, ಜಾತಿ ನಿಂದನೆ ಮಾಡಿ ಅತಿ ಹೀನವಾಗಿ ಅವಮಾನಿಸುತ್ತಿದ್ದರು. ಈ ವಿಷಯ ತಿಳಿದ ನಾನು ರಾತ್ರಿ 8.30ರ ಸಮಯದಲ್ಲಿ ನಮ್ಮ ಗ್ರಾಮದ ಹಿರಿಯರನ್ನು ಕರೆದುಕೊಂಡು ಪೆತಾಂಡ್ಲಹಳ್ಳಿಗೆ ಹೋಗಿ ಮಾತಾಡಿ ಅವರನ್ನು ಬಿಡಿಸಿಕೊಂಡು ಬಂದಿದ್ದೆವು. ಆದರೆ ರಾತ್ರಿ 10 ಗಂಟೆ ಸುಮಾರಿಗೆ ಉದಯ್ ಕಿರಣ್ ಅವಮಾನ ತಾಳಲಾರದೆ ಮನನೊಂದು ತೋಟದ ಮನೆಯಲ್ಲಿನ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಆರೋಪಿಗಳು ಪದೇ ಪದೇ ಜಾತಿ ದೌರ್ಜನ್ಯವೆಸಗಿರುವುದೇ ಕಾರಣವಾಗಿದೆ ಎಂದು ಮೃತನ ಸೋದರ ಮಾವ ನಾಗರಾಜ್ ಆರೋಪಿಸಿದ್ದಾರೆ.

ಈ ವಿಚಾರ ನಂಗಲಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿ, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಯುತ ವಿಚಾರಣೆ ನಡೆಸಬೇಕೆಂದು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮುಳಬಾಗಿಲಿನ ಹೋರಾಟಗಾರರಾದ ಜೈಭೀಮ್ ಗಂಗಾಧರ್ ಎಚ್ಚರಿಕೆ ನೀಡಿದ್ದಾರೆ.

Leave a Reply