ಬೆಂಗಳೂರು: ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ, ನೌಕರರ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಬಿ.ಬಿ.ಎಂ.ಪಿ. ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಜಂಟಿ ಆಯುಕ್ತ ವೆಂಕಟಚಲಪತಿ ಭೇಟಿ ಮಾಡಿ ಸಮಗ್ರ ಮಾಹಿತಿ ಪಡೆದರು.
ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ಸಿ.ಎಸ್.ಷಡಕ್ಷರಿ ಅವರು ಮಾತನಾಡಿ, ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿ ಆತಂಕ ಮತ್ತು ಖಿನ್ನತೆಗೆ ಒಳಗಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸುಪ್ರಿಂಕೋರ್ಟ್ ಆದೇಶ ಪ್ರಕಾರ ಶಿಕ್ಷಕರು ಚುನಾವಣಾ ಕೆಲಸ ಮಾಡುವಂತಿಲ್ಲ. ಆದರು 2 ಲಕ್ಷ ಶಿಕ್ಷಕರು ಚುನಾವಣಾ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 2ಲಕ್ಷ 60 ಸಾವಿರ ಹುದ್ದೆ ಖಾಲಿ ಇವೆ. ಸಿಬ್ಬಂದಿ ಕೊರತೆಯಿಂದ ಎಲ್ಲರು ಒತ್ತಡದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಸರ್ಕಾರ ಈಗಲಾದರು ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದರು.
ಮತದಾರರ ದತ್ತಾಂಶ ಕಳವು ನಮ್ಮ ಬಿಬಿಎಂಪಿ ಸಿಬ್ಬಂದಿ ಅಥವಾ ಅಧಿಕಾರಿಗಳಿಂದ ಆಗುವುದಿಲ್ಲ. ಕೇಂದ್ರ ಚುನಾವಣೆ ಆಯೋಗದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಿಬ್ಬಂದಿ ಪಾತ್ರ ಇರುವುದಿಲ್ಲ. ಇನ್ನೂ, ಮತದಾರರ ಪಟ್ಟಿಯೂ ಆನ್ ಲೈನ್ ನಲ್ಲೇ ಲಭ್ಯವಿದೆ. ಇದನ್ನು ಯಾರು ಬೇಕಾದರೂ ನೋಡಬಹುದಾಗಿದೆ. ಹೀಗಿರುವಾಗ, ಯಾವುದೇ ಅಕ್ರಮ ಮಾಡಲು ಹೇಗೆ ಸಾಧ್ಯ ಎಂದರು.
ಎ.ಅಮೃತ್ ರಾಜ್ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ ಎಂದರು.
ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು ಸಿಇಒ ನಡೆಸುವ ತನಿಖೆಗೆ ಸಿದ್ದವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರುಗಳಾದ ರುದ್ರಪ್ಪ, ಮೋಹನ್ ಕುಮಾರ್, ಮಾಲತೇಶ್, ಕಾರ್ಯದರ್ಶಿ ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಚೇತನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.




