ಬೆಂಗಳೂರು: ರಾಜ್ಯದ ಶೇ 25ರಷ್ಟಿರುವ ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳು ಎಂದರೆ ದಲಿತ ಸಮುದಾಯಗಳಿಗೆ ಅನ್ಯಾಯ ಆಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಎಸ್ಇಎಸ್ಪಿ, ಎಸ್ಟಿಪಿ 11 ಸಾವಿರ ಕೋಟಿ ಮೊತ್ತದ ದುರುಪಯೋಗ ಆಗಿದೆ. ಇದರ ಬಗ್ಗೆ ಸದನದಲ್ಲಿ ಚರ್ಚೆಗೆ ಅರ್ಧ ಗಂಟೆ ಕೊಡುವುದಾಗಿ ಹೇಳಿದ್ದರೂ ಅವಕಾಶ ನೀಡಿಲ್ಲ. ಗ್ಯಾರಂಟಿಗಳಿಗೆ ಎಸ್ಇಎಸ್ಪಿ, ಟಿಎಸ್ಪಿ ಹಣವನ್ನು ನೀಡಿದ್ದೀರಾ ಎಂಬ ಪ್ರಶ್ನೆಗೆ ಮೀಸಲು ಹಣದ ದುರುಪಯೋಗ ಆಗಲು ಬಿಡುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಸುತ್ತಿ ಬಳಸಿ ದುರುಪಯೋಗ ಆಗಲು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಸರಕಾರದಿಂದ ದಲಿತರಿಗೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ. ಕೂಲಿ ಕೆಲಸ ಮಾಡುವ ನಮ್ಮವರಿಗೆ ಶಕ್ತಿ ಯೋಜನೆಯಡಿ ಬಸ್ ಪ್ರಯಾಣದ ಪ್ರಯೋಜನ ಆಗುವುದಿಲ್ಲ. ನಮ್ಮ ಸರಕಾರವೇ ಹಿಂದೆ 75 ಯೂನಿಟ್ ವಿದ್ಯುತ್ ಕೊಟ್ಟಿತ್ತು. ನಮ್ಮವರಿಗೆ ಮನೆ ಆಧಾರ್ ಇಲ್ಲ; ಮನೆಯೂ ಇಲ್ಲ. ಖಾತೆಯೂ ಇಲ್ಲ. ನಾಲ್ಕು ಯೋಜನೆಗಾಗಿ 11,700 ಕೋಟಿಯನ್ನು ತೆಗೆದಿದ್ದೀರಿ. ಯಾವ ಜಾತಿ ಎಂದು ಕೇಳಿ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಜನಸಂಖ್ಯೆಗೆ ಆಧರಿಸಿ ಮೀಸಲು ನಿಧಿಯಿಂದ ಹಣವನ್ನು ವರ್ಗಾವಣೆ ಮಾಡಿದ್ದು, ಬೇರೆಯವರಿಗೆ ಇದು ಉಪಯೋಗ ಆಗಲಿದೆ. ಜನರಲ್ ಪೂಲ್ಗೆ ಹಾಕಿದ್ದು, ಬೇರೆಯವರಿಗೆ ಪ್ರಯೋಜನ ಸಿಗಲಿದೆ ಎಂದರು.
34 ಸಾವಿರ ಕೋಟಿಯಿಂದ 11 ಸಾವಿರ ಕೋಟಿ ತೆಗೆದರೆ 23 ಸಾವಿರ ಕೋಟಿ ಆಗಲಿದೆ. ಅದನ್ನಾದರೂ ಒಪ್ಪಿಕೊಳ್ಳಿ. ಇಲ್ಲವೇ ಹಣ ವಾಪಸ್ ಹಾಕಿ. ಮೂಗಿಗೆ ತುಪ್ಪ ಸವರದಿರಿ, ಮನೆ ಇಲ್ಲದ ದಲಿತರಿಗೆ ಮನೆ, ಭೂಮಿ ಕೊಡಿ. ಓದಿದವರಿಗೆ ಕೆಲಸ ಕೊಡಿ ಎಂದರು.
ನಮ್ಮ ಸರಕಾರ ಸಮಾಜಕಲ್ಯಾಣಕ್ಕೆ 4,604 ಕೋಟಿ ಕೊಟ್ಟಿದ್ದರೆ, ಈಗ ಕಾಂಗ್ರೆಸ್ನವರು 1,471 ಕೋಟಿ ಕೊಟ್ಟಿದ್ದಾರೆ. ನಾವು ಉನ್ನತ ಶಿಕ್ಷಣಕ್ಕೆ 202 ಕೋಟಿ ಕೊಟ್ಟರೆ ಇವರು ಕೇವಲ 10 ಕೋಟಿ ನೀಡಿದ್ದಾರೆ. ಮತ್ತೆ ದಲಿತರು ಉದ್ಧಾರ ಆಗುವುದು ಹೇಗೆ? ವಸತಿಗೆ 1492 ಕೋಟಿ, ಇವರು 798 ಕೋಟಿ ಕೊಟ್ಟಿದ್ದಾರೆ ಎಂದರು.
ಇದು ದಲಿತ ವಿರೋಧಿ ಸರಕಾರ. ದಲಿತ ಸಚಿವ ಮಹದೇವಪ್ಪ ಅವರು ದಲಿತರಿಗೇ ಮೋಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕೆ ನೇರ ಹೊಣೆ ಎಂದು ಆರೋಪಿಸಿದರು.
ಮೀಸಲು ನಿಧಿ ಹಣ ವಾಪಸ್ ಕೊಡುವವರೆಗೆ ಹೋರಾಟಗಳು, ಪಾದಯಾತ್ರೆಗಳನ್ನು ಸಂಘಟಿಸುತ್ತೇವೆ. ಸಣ್ಣ ವಿಷಯಕ್ಕೂ ಹೋರಾಟ ಮಾಡುತ್ತಿದ್ದ ದಲಿತ ಸಂಘಟನೆಗಳಲ್ಲಿ ಬಹುತೇಕ ಸಂಸ್ಥೆಗಳು ಸುಮ್ಮನಿವೆ. ಅವುಗಳ ಬಾಯಿ ಮುಚ್ಚಿಸುವ ಕೆಲಸವನ್ನು ಸರಕಾರ ಮಾಡಿದೆ ಎಂದರು.
ಮಹದೇವಪ್ಪ ಅವರಲ್ಲಿ ಡಾ.ಅಂಬೇಡ್ಕರ್ ಅವರ ರಕ್ತ ನಿಮ್ಮಲ್ಲಿ ಹರಿಯುತ್ತಿದ್ದರೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ ಎಂದು ಸವಾಲೆಸೆದರು.



