ಮಂಗಳೂರು: ವಿಪರೀತ ಬೆಲೆ ಏರಿಕೆಯಿಂದ ತತ್ತರಿಸುವ ದೇಶದ ಕಾರ್ಮಿಕ ವರ್ಗಕ್ಕೆ ಬದುಕಲು ಯೋಗ್ಯವಾದ ಕನಿಷ್ಠ ಕೂಲಿಯನ್ನು ನೀಡದೆ ಸತಾಯಿಸುತ್ತಿರುವ ಕೇಂದ್ರ ಸರಕಾರ ಹೆಜ್ಜೆ ಹೆಜ್ಜೆಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು.
CITU ನೇತೃತ್ವದಲ್ಲಿ ಮಂಗಳೂರಿನ ವಾಮಂಜೂರು ಜಂಕ್ಷನ್ ನಲ್ಲಿ ಆಯೋಜಿಸಲಾದ ಗುರುಪುರ ವಲಯ ಮಟ್ಟದ ವಾಹನ ಪ್ರಚಾರ ಜಾಥಾ ಉದ್ಘಾಟಿಸಿ ಮಾತಾಡಿದ ಅವರು, ಕೇಂದ್ರ ಸರ್ಕಾರ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಮೂಲಕ ಅಂಬಾನಿ ಅದಾನಿಗಳ ಜೇಬು ತುಂಬಿಸುವ ಕೆಲಸವನ್ನು ಮಾಡುತ್ತಿದೆ. ದೇಶದ ಅಭಿವೃದ್ದಿಯಲ್ಲಿ ಆರ್ಥಿಕ ಚಕ್ರ ತಿರುಗುವಲ್ಲಿ ಪ್ರಧಾನ ಪಾತ್ರ ವಹಿಸುವ ದುಡಿಯುವ ಜನತೆಗೆ ಈ ದೇಶ ಸೇರಿದ್ದೇ ಹೊರತು ಅಂಬಾನಿ ಅದಾನಿಗಳ ಸೊತ್ತಲ್ಲ ಎಂದು ಕಿಡಿಕಾರಿದರು.
ಜಾಥಾದ ನೇತೃತ್ವ ವಹಿಸಿದ್ದ CITU ಜಿಲ್ಲಾ ಉಪಾಧ್ಯಕ್ಷ ನೋಣಯ್ಯಾ ಗೌಡ ಮಾತನಾಡಿ, ರೈತ ಕಾರ್ಮಿಕ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಚಳುವಳಿಯನ್ನು ಕಟ್ಟಬೇಕಾದ ಕಾರ್ಮಿಕ ವರ್ಗವನ್ನು ಜಾತಿ ಧರ್ಮದ ಆಧಾರದಲ್ಲಿ ವಿಭಜಿಸಲು ಆಳುವ ವರ್ಗಗಳು ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ದೇಶದ ಸ್ವಾತಂತ್ರ್ಯ ಹಾಗೂ ಜನರ ಬದುಕನ್ನು ರಕ್ಷಿಸುವ ಮೂಲಕ ಕಾರ್ಮಿಕ ವರ್ಗದ ಐಕ್ಯತೆಯನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ CITU ಜಿಲ್ಲಾ ನಾಯಕ ವಸಂತಿ ಕುಪ್ಪೆಪದವು, ಬಾಬು ಪೂಜಾರಿ, ಗಂಗಯ್ಯ ಅಮೀನ್, ಜಯಶೀಲ ವಾಮಂಜೂರು, ಅಶೋಕ ಬಂಗೇರ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್, ಪುಷ್ಪ, ರಾಧಾಕೃಷ್ಣ ಮುಂತಾದವರು ಉಪಸ್ಥಿತರಿದ್ದರು.




