ರಾಷ್ಟ್ರಕವಿ ಶ್ರೀ ಕುವೆಂಪು ವಿರಚಿತ ನಾಡಗೀತೆಯನ್ನು ರಾಜ್ಯ ಸರ್ಕಾರ, ಸಾಹಿತಿಗಳು ಮತ್ತು ಸುಗಮ ಸಂಗೀತಗಾರರ ನೇತೃತ್ವದ ಸಮಿತಿಯು ನೀಡಿದ ವರದಿ ಆಧಾರದಲ್ಲಿ ಶ್ರೀ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿದ ಶೈಲಿಯಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವಂತೆ ಆದೇಶ ನೀಡಿದೆ. ಸದರಿ ಆದೇಶದ ವಿರುದ್ಧವಾಗಿ, ಆದೇಶ ನೀಡುವ ಸರ್ಕಾರದ ಸಾಂವಿಧಾನಿಕ ಅಧಿಕಾರದ ಕುರಿತಾಗಿ ರಾಜ್ಯ ಹೈಕೋರ್ಟ್ ನಲ್ಲಿ ಸುಗಮ ಸಂಗೀತ ಗಾಯಕರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ವಿವಾದದ ಕುರಿತು ಒಂದಿಷ್ಟು ಹಳೆಯ ನೆನಪನ್ನು ತಮ್ಮೊಂದಿಗೆ ಹಂಚಿಕೊಳ್ಳೋಣ. ಮೊದಲಿಗೆ “ಜಯ ಭಾರತ ಜನನಿಯ ತನುಜಾತೆ” ಎಂಬ ಗೀತೆಯನ್ನು ಶ್ರೀ ಕುವೆಂಪು ಅವರು 20-30 ರ ಹರೆಯದಲ್ಲಿದ್ದಾಗ ರಚಿಸಿದ ಗೀತೆ. ಈ ಗೀತೆಯನ್ನು ನಾಡಗೀತೆಯನ್ನಾಗಿ ಆಯ್ಕೆ ಮಾಡುತ್ತಾರೆಂಬ ಒಂದು ಸಣ್ಣ ಆಲೋಚನೆಯೂ ಅಂದು ಅವರಿಗೆ ಇದ್ದಿರಲಿಲ್ಲ. ಅಖಂಡ ಕರ್ನಾಟಕ ರಚನೆಯಾದ ಅನೇಕ ವರ್ಷಗಳ ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಶ್ರೀ ಜಿ ನಾರಾಯಣ ಅವರ ನೇತೃತ್ವದಲ್ಲಿ ಮಾಧ್ವ ಪಂಥದ ಅನುಯಾಯಿಗಳು, ಹಿರಿಯ ಸಾಹಿತಿಗಳು, ಶ್ರೀ ಕುವೆಂಪು ಅವರನ್ನು ಭೇಟಿಯಾಗಿ ತಮ್ಮ ಈ ಗೀತೆಯು ನಾಡಗೀತೆಯಾಗಿ ಆಯ್ಕೆಯಾಗುವ ಸಂಭವವಿರುವುದರಿಂದ ಈ ಗೀತೆಯಲ್ಲಿ ಶಂಕರ ರಾಮಾನುಜ ಬಸವೇಶ್ವರರ ಕುರಿತು ಸಾಲುಗಳಿದ್ದು ಮಧ್ವರ ಹೆಸರನ್ನು ಸೇರಿಸಲು ಮನವಿ ಮಾಡುತ್ತಾರೆ. ನಿಯೋಗದ ಮನವಿಯನ್ನು ಶ್ರೀ ಕುವೆಂಪು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾಗಿ ತೇಜಸ್ವಿಯವರು ತಮ್ಮ ಅನೇಕ ಬರಹಗಳಲ್ಲಿ ಹೇಳಿಕೊಂಡಿದ್ದಾರೆ. ಮಧ್ವ ತತ್ವ ಸಿದ್ಧಾಂತದ ಕುರಿತಾಗಿ ಶ್ರೀ ಕುವೆಂಪು ಅವರು ಅನೇಕ ಕಡೆ ತಮ್ಮ ಅಸಮಾಧಾನವನ್ನು ತುಸು ಕಠಿಣ ಶಬ್ದಗಳಲ್ಲಿಯೇ ವ್ಯಕ್ತಪಡಿಸಿದ್ದನ್ನು ದಾಖಲೆಗಳನ್ನು ತಾವು ಓದಿರಬಹುದು ಅಥವಾ ಕೇಳಿರಬಹುದು.
ಅಲ್ಲಿಗೆ ಆ ಪ್ರಯತ್ನ ನಿಲ್ಲಲಿಲ್ಲ. ಶ್ರೀ ಎಸ್ ಎಂ ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಪೇಜಾವರ ಮಠದ ವಿಶ್ವೇಶ್ವರ ತೀರ್ಥರ ಪ್ರಯತ್ನದಿಂದಾಗಿ ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಯಾಯಿತು ಎಂದು ಹೇಳಲಾಗುತ್ತಿದೆ. ಈ ಕುರಿತಾಗಿ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಸರಣಿ ಲೇಖನಗಳನ್ನು ಅಂದು ಪತ್ರಿಕೆಗಳಿಗೆ ಬರೆದಿರುತ್ತಾರೆ. ಕುವೆಂಪು ಅವರ ಬರಹಗಳ ಮೇಲೆ ಸ್ವಾಮ್ಯತೆಯನ್ನು ಹೊಂದಿದ್ದ ಪೂರ್ಣಚಂದ್ರ ತೇಜಸ್ವಿಯವರು ಈ ನಾಡಗೀತೆಯಲ್ಲಿ ಮಧ್ವರ ಹೆಸರನ್ನು ಸೇರಿಸಲು ಅಧಿಕೃತ ಅನುಮತಿಯನ್ನು ಅಥವಾ ನಿರಾಕರಣೆಯನ್ನು ಮಾಡಿರುವ ಪತ್ರ ವ್ಯವಹಾರ ಲಭ್ಯವಿಲ್ಲ.
ಇಲ್ಲಿಗೆ ಒಂದು ಹಂತ ಮುಕ್ತಾಯವಾಯಿತು. ರಾಜ್ಯ ಸರ್ಕಾರದ ಅಧಿಕೃತ ಸಮಾರಂಭಗಳಲ್ಲಿ ಸುಗಮ ಸಂಗೀತ ಗಾಯಕ ಮತ್ತು ಸಂಗೀತ ಸಂಯೋಜಕ ದಿವಂಗತ ಶ್ರೀ ಸಿ. ಅಶ್ವಥ್ ಅವರು ಸಂಯೋಜಿಸಿದ ರಾಗಶೈಲಿಯಲ್ಲಿ ನಾಡಗೀತೆಯನ್ನು ಹಾಡಲಾಗುತ್ತಿತ್ತು. ಈ ಗೀತೆಯು ಹಾಡುವ ಸಂದರ್ಭದಲ್ಲಿ ಗೌರವ ಸೂಚಿಸುವ ಸಲುವಾಗಿ ಎದ್ದು ನಿಲ್ಲುವ ಪರಿಪಾಠವೂ ಆರಂಭವಾಯಿತು. ಸದರಿ ಗೀತೆಯು ಅತ್ಯಂತ ದೀರ್ಘವಾಗಿರುವುದರಿಂದ ಕಾರ್ಯಕ್ರಮಕ್ಕೆ ಆಗಮಿಸಿರುವ ಸಭಿಕರಿಗೆ ಹೆಚ್ಚು ಸಮಯ ನಿಂತುಕೊಂಡಿರಲು ಸಾಧ್ಯವಿಲ್ಲವೆಂದು ಮತ್ತು ಸದರಿ ಗೀತೆಯೂ ಹೆಚ್ಚಿನ ಸಮಯ ಹಾಡಲು ತೆಗೆದುಕೊಳ್ಳುತ್ತಿರುವ ಕುರಿತು ಅಸಮಾಧಾನ ಮೂಡಲಾಗಿ, ರಾಜ್ಯ ಸರ್ಕಾರ ಈ ತಕರಾರನ್ನು ಪರಿಹರಿಸಲು ಸಾಹಿತಿಗಳು ಮತ್ತು ಸುಗಮ ಸಂಗೀತಗಾರರ ಸಮಿತಿಯನ್ನು ನೇಮಕ ಮಾಡಿತು. ಸದರೀ ಸಮಿತಿಯು ದಿವಂಗತ ಶ್ರೀ ಮೈಸೂರು ಅನಂತಸ್ವಾಮಿಯವರು ರಾಗ ಸಂಯೋಜಿಸಿದ ಶೈಲಿಯಲ್ಲಿ ನಾಡಗೀತೆಯನ್ನು ಹಾಡಲು ಸಲಹೆ ನೀಡಿತ್ತು. ಆದರೆ ಗಾಯಕರು ತಮಿಷ್ಟದ ಶೈಲಿಯಲ್ಲಿ ತಮ್ಮ ಕಾರ್ಯಕ್ರಮಗಳಲ್ಲಿ ಹಾಡಿಕೊಳ್ಳಲು ಯಾವುದೇ ರೀತಿಯ ನಿರ್ಬಂಧವನ್ನು ಸಲಹೆ ಮಾಡಲಿಲ್ಲ. ವರದಿಯ ಆಧಾರದಲ್ಲಿ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ.
ಸದರಿ ಆದೇಶದ ವಿರುದ್ಧ ಸಿ ಅಶ್ವಥ್ ಅವರ ಸಹ ಗಾಯಕರು, ಅವರ ಅಭಿಮಾನಿಗಳು, ಸುಗಮ ಸಾಹಿತ್ಯ ಸಂಸ್ಥೆಯವರು ಈ ಕುರಿತಾಗಿ ಹೈಕೋರ್ಟಿನಲ್ಲಿ ವ್ಯಾಜ್ಯವನ್ನು ಹೂಡಿರುತ್ತಾರೆ. ಮೈಸೂರು ಅನಂತ ಸ್ವಾಮಿಯವರ ಶೈಲಿಯನ್ನೇ ಮುಂದುವರಿಸಬೇಕೆಂದು ಮತ್ತೊಂದು ಗುಂಪಿನವರು ವಾದ ನಡೆಸುತ್ತಿದ್ದಾರೆ. ತಮ್ಮ ಪರ ವಾದಿಸಲು ಎರಡೂ ಗುಂಪಿನವರು ರಾಜ್ಯದ ಹೆಸರಾಂತ ವಕೀಲರನ್ನು ನೇಮಿಸಿಕೊಂಡಿದ್ದಾರೆ.
ರಾಗ ಸಂಯೋಜನೆಯ ಶೈಲಿಯ ಕುರಿತಂತೆ ರಾಜ್ಯದ ಹೈಕೋರ್ಟಿನಲ್ಲಿ ವ್ಯಾಜ್ಯ ನಡೆಸುತ್ತಿರುವುದು ಏನನ್ನು ಸೂಚಿಸುತ್ತದೆ? ಇಬ್ಬರು ಮಹಾನ್ ಗಾಯಕರ ಅಭಿಮಾನಿಗಳು ತಮ್ಮ ತಮ್ಮ ಗುರುವಿನ ಶೈಲಿಯನ್ನು ಅನುಸರಿಸಬೇಕೆಂದು ನಡೆಸುತ್ತಿರುವ ಗುದ್ದಾಟವಷ್ಟೆ; ಇನ್ನೇನು ಅಲ್ಲ. ಲಕ್ಷಾಂತರ ವ್ಯಾಜ್ಯಗಳು ರಾಜ್ಯದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇದ್ದು, ಹತ್ತು ಹಲವು ಕಾರಣಗಳಿಂದ ಪಕ್ಷಗಾರರು ಮತ್ತು ಸಾರ್ವಜನಿಕರ ನೋವು ಮತ್ತು ಕಣ್ಣೀರಿಗೆ ಕಾರಣವಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ರಾಜ್ಯ ಹೈಕೋರ್ಟಿನ ಸಮಯವನ್ನು ವ್ಯರ್ಥ ಮಾಡಿಸುತ್ತಿರುವುದು ಎಷ್ಟು ಸರಿ ಎಂಬುದನ್ನು ಇಬ್ಬರೂ ಪಕ್ಷಗಾರರು ಅರ್ಥ ಮಾಡಿಕೊಳ್ಳಬೇಕಿದೆ.
ರಾಷ್ಟ್ರಗೀತೆಯು ದೇಶಾದ್ಯಂತ ನಿಗದಿಪಡಿಸಿದ ಶೈಲಿಯಲ್ಲಿ ಹಾಡಲ್ಪಡುತ್ತಿರುವುದು ನಮಗೆಲ್ಲ ತಿಳಿದಿದೆ. ನಾಳೆ ಒಂದೊಂದು ರಾಜ್ಯದವರು, ಒಂದೊಂದು ಜಿಲ್ಲೆಯವರು, ಒಂದೊಂದು ಬುಡಕಟ್ಟು, ಜನಪದರು, ಶಾಸ್ತ್ರೀಯ ಸಂಗೀತಗಾರರು ತಮ್ಮದೇ ಶೈಲಿಯ ರಾಗ ಸಂಯೋಜನೆ ಮಾಡಿ ಹಾಡಲು ಶುರು ಮಾಡಿದರೆ ಏನಾಗಬಹುದು ಯೋಚಿಸಿ ನೋಡಿ. ರಾಷ್ಟ್ರಗೀತೆ, ರಾಷ್ಟ್ರಧ್ವಜ ಇವುಗಳೆಲ್ಲವೂ ರಾಷ್ಟ್ರದ ಜನರನ್ನು ವಿವಿಧತೆಯಲ್ಲಿ ಏಕತೆಯ ಪ್ರಜ್ಞೆ ಮೂಡಿಸುವ ಮತ್ತು ಸಾಮರಸ್ಯವನ್ನು ಸಾರುವ ಸಾಧನಗಳು. ಅಂತೆಯೇ ಶ್ರೀ ಕುವೆಂಪು ರಚಿಸಿರುವ ನಾಡಗೀತೆಯೂ ಸಹ ನಾಡಿನ ಹಿರಿಮೆ ಗರಿಮೆ ಸಾರುವ ಮತ್ತು ನಾಡಿನ ಜನರಲ್ಲಿ ನಾಡು ಮತ್ತು ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ. ನಾಡಗೀತೆಯ ಮೇಲೆ ಹಕ್ಕು ಸ್ವಾಮ್ಯ ಹೊಂದಿರುವ ಶ್ರೀ ಕುವೆಂಪು ಅವರ ಕುಟುಂಬ ವರ್ಗ ಈ ವಿವಾದದಿಂದ ಅಂತರವನ್ನು ಕಾಯ್ದುಕೊಂಡಿರುವುದು ಪ್ರಶಂಸನೀಯ.
ಆದ್ದರಿಂದ ವಿವಾದವನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗಿರುವ ಸಿ ಅಶ್ವತ್ ಅವರ ಸಹ ಗಾಯಕರು ಮತ್ತು ಅಭಿಮಾನಿಗಳು ವಿವಾದವನ್ನು ವಾಪಸ್ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರವು ಸಾಹಿತಿಗಳು ಮತ್ತು ಸುಗಮ ಸಂಗೀತಗಾರರ ನೇತೃತ್ವದ ವರದಿ ಆಧಾರದ ಮೇಲೆ ನೀಡಿರುವ ಆದೇಶವನ್ನು ಪಾಲಿಸಬೇಕು. ಶ್ರೀ ಕುವೆಂಪು ಅವರ ಮತ್ತೊಂದು ಗೀತೆ ಉಳುವ ಯೋಗಿಯ ನೋಡಲ್ಲಿ ಎಂಬ ಶೀರ್ಷಿಕೆಯಡಿಯಲ್ಲಿ ರೈತ ಗೀತೆ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡು ಸಿ ಅಶ್ವತ್ ಅವರ ರಾಗ ಸಂಯೋಜನೆಯಲ್ಲಿ / ಶೈಲಿಯಲ್ಲಿ ಹಾಡಲಾಗುತ್ತಿದೆಯಲ್ಲವೇ?
ನ್ಯಾಯಾಲಯದ ಅಮೂಲ್ಯ ಸಮಯ ಮತ್ತು ಅನಗತ್ಯ ವೆಚ್ಚವನ್ನು ಉಳಿಸಲೋಸುಗ ಸದರೀ ವಿವಾದವನ್ನು ಮುಂದುವರಿಸದಂತೆ ಪಕ್ಷಗಾರರಿಗೆ ಮಾನ್ಯ ಘನ ಉಚ್ಛ ನ್ಯಾಯಾಲಯ ಸಲಹೆ / ನಿರ್ದೇಶನ ನೀಡಬೇಕೆಂದು ಈ ಮೂಲಕ ಪ್ರಾರ್ಥನೆ.
- ಜಿ ಟಿ ನರೇಂದ್ರ ಕುಮಾರ್, ವಕೀಲರು ಮತ್ತು ಕಾನೂನು ಸಲಹೆಗಾರರು ಬೆಂಗಳೂರು




