ಇರ್ಫಾನ್ ಹಬೀಬ್ ಎಂಬ ನೈಜ ಇತಿಹಾಸಕಾರರ ಕುರಿತು

3 years ago

About real life historian Irfan Habib

ಪ್ರೊ. ಇರ್ಫಾನ್ ಹಬೀಬ್ ನಮ್ಮ ನಡುವಿನ ಖ್ಯಾತ ಇತಿಹಾಸಕಾರ. ಅವರು ರಚಿಸಿರುವ ಮಧ್ಯಕಾಲೀನ ಭಾರತದ ಇತಿಹಾಸ ಕುರಿತ ಟೆಕ್ನಾಲಜಿ ಇನ್ ಮೆಡಿವೆಲ್ ಇಂಡಿಯಾ ಕೃತಿಯು ಭಾರತದಲ್ಲಿನ ಹದಿನಾರನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗೆ ಭಾರತದ ಮುಸ್ಲಿಂ ಸಮುದಾಯವು ಗ್ರಾಮೀಣ ಬದುಕು ಹಾಗೂ ಹಿಂದೂ ಧರ್ಮದ ಒಂದು ಭಾಗವಾಗಿ ಬದುಕುತ್ತಾ ಕುಸುರಿ ಕಲೆಗಳಲ್ಲಿ ಮತ್ತು ಸಂಗೀತ ಹಾಗೂ ವಾದ್ಯಗಳ ಕ್ಷೇತ್ರದಲ್ಲಿ ನೀಡಿರುವ ಅಪೂರ್ವ ಕೊಡುಗೆಗಳನ್ನು ವಿಶ್ಲೇಷಿಸುತ್ತದೆ. ಧರ್ಮದ ಹೆಸರಿನಲ್ಲಿ ಇಂದು ದೇಶಭಕ್ತರು ಕೈಯಲ್ಲಿ ಹಿಡಿದಿರುವ ಚಾಕು, ಚೂರಿ ಇವುಗಳನ್ನು ಅನ್ವೇಷಿಸಿ ಅಭಿವೃದ್ಧಿಪಡಿಸಿದವರು ಇದೇ ಮುಸ್ಲಿಂ ಕರಕುಶಲಗಾರರು.

ಇರ್ಫಾನ್ ಹಬೀಬ್ ರವರ ”ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ” ಎಂಬ ಮಾಲಿಕೆಯ ಕೆಲವು ಕೃತಿಗಳನ್ನು ತಿರುವು ಹಾಕುತ್ತಿದ್ದೆ. ಭಾರತದ ಬಲಪಂಥೀಯ ಚಿಂತನೆಗಳಿಂದ ರೂಪುಗೊಂಡಿರುವ ಇತಿಹಾಸಕ್ಕೆ ಪರ್ಯಾಯವಾಗಿ ಇತಿಹಾಸವನ್ನು ವಾಸ್ತವಿಕ ಹಾಗೂ ಗಟ್ಟಿಯಾದ ಪುರಾವೆಗಳ ನೆಲೆಯಲ್ಲಿ ಭಾರತ ಚರಿತ್ರೆಯನ್ನು ಕಟ್ಟಿಕೊಡುತ್ತಿರುವ ರೋಮಿಲಾ ಥಾಪರ್, ಕೆ. ಅಯ್ಯಪ್ಪ ಫಣೀಕರ್ ಹಾಗೂ ಇರ್ಫಾನ್ ಹಬೀಬ್ ಅವರ ಕೃತಿಗಳ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವ.

ಇರ್ಫಾನ್ ಹಬೀಬ್ ಅವರ ಇಂಡಿಯನ್ ಎಕಾನಮಿ 1858-1914 ಎಂಬ ಕೃತಿಯು ಭಾರತದ ಪಾರಂಪರಿಕ ಕೃಷಿ ಹಾಗೂ ಗ್ರಾಮೀಣ ಗುಡಿ ಕೈಗಾರಿಕೆಗಳ ಬಗ್ಗೆಯೂ ಸಹ ಅನೇಕ ಒಳನೋಟಗಳನ್ನು ನೀಡುತ್ತದೆ. ಆ ಕೃತಿಯಲ್ಲಿನ ಕೃಷಿ ಕುರಿತಂತೆ ಒಂದು ಅಧ್ಯಾಯವಿದ್ದು ಅದರಲ್ಲಿ 1893 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶನದ ಮೇರೆಗೆ ಭಾರತಕ್ಕೆ ಬೇಟಿ ನೀಡಿದ ರಸಾಯನಶಾಸ್ತ್ರದ ವಿಜ್ಞಾನಿ ಜೆ.ಎ. ವೋಕರ್ ಎಂಬಾತ ಬರೆದ ಟಿಪ್ಪಣಿಯನ್ನು ಇರ್ಫಾನ್ ಹಬೀಬ್ ದಾಖಲಿಸಿದ್ದಾರೆ. ವೋಕರ್ ಭಾರತದ ಕೃಷಿ ಕುರಿತು ಬರೆದ ಮಾತುಗಳಿವು.

“ಅತ್ಯಂತ ಪ್ರಾಚೀನ ಉಪಕರಣಗಳು ಹಾಗೂ ಕೃಷಿ ತಂತ್ರಗಾರಿಕೆಯು ಭಾರತದಲ್ಲಿ ಉಳಿದಿರುವುದಕ್ಕೆ ಅನೇಕ ಸಕಾರಣಗಳಿವೆ. ಇಲ್ಲಿನ ರೈತರ ಸಾಂಪ್ರಾದಾಯಕವಾದ ದೇಶಿ ಜ್ಞಾನ ಮತ್ತು ಅವರು ಉಪಯೋಗಿಸುವ ಅತ್ಯಂತ ಸರಳ ಹಾಗೂ ಹಗುರವಾದ ನೇಗಿಲು, ಗುದ್ದಲಿ, ಸಲಿಕೆಗಳು ಅತ್ಯಂತ ಪರಿಣಾಮಕಾರಿ ಸಲಕರಣೆಗಳಾಗಿವೆ. ಇಲ್ಲಿನ ಮಿಶ್ರ ಬೆಳೆ ಪದ್ಧತಿ ಮತ್ತು ಬೆಳೆಗಳ ಆವರ್ತನೆಯ ಪದ್ಧತಿ ನಿಜಕ್ಕೂ ಜಗತ್ತಿಗೆ ಮಾದರಿಯಾಗುವಂತಹವು. ಬೆಳೆಗಳ ನಡುವೆ ಬೆಳೆಯುವ ಕಳೆಯನ್ನು ಬೇರು ಸಮೇತ ಕಿತ್ತೊಗೆಯುವ ಅವರ ದೈಹಿಕ ಶ್ರಮ ಮತ್ತು ರೈತರು ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡಿರುವ ಮರದ ನೇಗಿಲುಗಳು ಅಚ್ಚರಿ ಮೂಡಿಸುತ್ತವೆ. ಈ ನೇಗಿಲುಗಳು ಫಲವತ್ತಾದ ಭೂಮಿಯ ಮೇಲ್ಪದರನ್ನು ಮಗುಚಿ ಹಾಕುವಲ್ಲಿ ಪರಿಣಾಮಕಾರಿಯಾಗಿವೆ. ಇಲ್ಲಿನ ಬೀಜ ಬಿತ್ತನೆಯ ಕ್ರಮ ಹಾಗೂ ವಿನಿಮಯ ಪದ್ಧತಿಯು ವಿಸ್ಮಯಕಾರಿಯಾಗಿದ್ದು ಜೊತೆಗೆ ದಕ್ಷತೆಯಿಂದ ಕೂಡಿದೆ.”

ಸುಮಾರು 130 ವರ್ಷಗಳ ಹಿಂದೆ ಭಾರತದಲ್ಲಿ ಸ್ವಾವಲಂಬಿಯಾಗಿದ್ದ ಬೇಸಾಯದ ಕ್ರಮವನ್ನು ಬ್ರಿಟೀಷ್ ವಿಜ್ಞಾನಿ ಈ ರೀತಿ ಬಣ್ಣಿಸುತ್ತಾ, ಬ್ರಿಟೀಷ್ ಸರ್ಕಾರದ ಒತ್ತಡದ ಮೇರೆಗೆ ಭಾರತದ ರೈತರು ನೀಲಿ ಬೆಳೆ ಮತ್ತು ಎಣ್ಣೆಯ ಬೇಳೆಕಾಳುಗಳ ಬೆಳೆ ತೆಗೆಯಲು ಹೊರಟು ತಮ್ಮ ಸಾಂಪ್ರದಾಯಿಕ ಕೃಷಿಯ ಪದ್ಧತಿಯನ್ನು ಕಳೆದುಕೊಂಡರು ಎನ್ನುತ್ತಾ ಭಾರತದ ಕೃಷಿ ಲೋಕದ ಅವನತಿಯ ಅಧ್ಯಾಯವನ್ನು ನಿಖರವಾಗಿ ಗುರುತಿಸಿದ್ದಾನೆ.

ನನಗೆ ವಾಟ್ಸ್ ಅಪ್ ಮೂಲಕ ಬರುವ ಯಾವುದೇ ವೀಡಿಯೋ ದೃಶ್ಯಗಳನ್ನು ನಾನು ನೋಡುವುದಿಲ್ಲ. ದಿನಕ್ಕೆ ನಲವತ್ತರಿಂದ ಐವತ್ತು ದೃಶ್ಯಗಳನ್ನು ಗೆಳೆಯರು ಕಳಿಸಿರುತ್ತಾರೆ. ಅವುಗಳನ್ನು ಬಂದ ತಕ್ಷಣ ನೇರವಾಗಿ ಡಿಲಿಟ್ ಮಾಡುತ್ತೇನೆ. ಅವುಗಳನ್ನು ನೋಡಲು ದಿನವೊಂದಕ್ಕೆ ಕನಿಷ್ಠ ಎರಡು ಗಂಟೆ ಸಮಯವನ್ನು ಮೀಸಡಲಿಡಬೇಕು. ಅದರ ಬದಲಾಗಿ ನನ್ನ ಸಂಗ್ರಹದಲ್ಲಿರುವ ಯಾವುದಾದರೂ ಕೃತಿಯನ್ನು ಎತ್ತಿಕೊಂಡು ಓದಿದರೆ, ಕನಿಷ್ಠ ನನ್ನ ತಲೆಯೊಳಗಿರುವ ಒಂದಿಷ್ಟು ಗೊಬ್ಬರವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಕಾರಣದಿಂದಲೇ ಓದು ಮತ್ತು ಏಕಾಂತ ಇತ್ತಿಚಿನ ದಿನಗಳಲ್ಲಿ ನನ್ನ ನೆಚ್ಚಿನ ಹವ್ಯಾಸವಾಗಿದೆ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply