ರಾಜ್ಯಾದ್ಯಂತ ‘ಓದುವ ಬೆಳಕು’ ಅಭಿಯಾನ: ಪ್ರಿಯಾಂಕ್ ಖರ್ಗೆ

3 years ago

#Statewide #ReadingLight #Campaign #PriyankKharge

ಬೆಂಗಳೂರು: ಮಕ್ಕಳಲ್ಲಿ ಓದುವ ಅಭಿರುಚಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಾದ್ಯಂತ ‘ಓದುವ ಬೆಳಕು’ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ.

ಈ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದಕ್ಕಾಗಿ ಪಂಚಾಯತಿ ಮಟ್ಟದಲ್ಲಿ ಗ್ರಂಥಾಲಯಗಳನ್ನು ಗ್ರಾಮೀಣ ಅರಿವು ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಇದರಿಂದ ಗ್ರಂಥಾಲಯಗಳ ನವೀಕರಣ, ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಓದುವ ಬೆಳಕುʼ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಹಲವಾರು ಅಭಿಯಾನಗಳ ಮೂಲಕ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಯನ್ನು ಆಯೋಜಿಸುವ ಮೂಲಕ ಗ್ರಂಥಾಲಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಗ್ರಂಥಾಲಯಕ್ಕೆ ಭೇಟಿ ನೀಡುವ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಉತ್ತೇಜಿಸಲು 2023ರ ಸೆಪ್ಟೆಂಬರ್ ನಲ್ಲಿ ʼನಾನು ಓದುವ ಪುಸ್ತಕʼ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳ ಹೆಸರನ್ನು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರದರ್ಶಿಸಲಾಗುವುದು. ಗ್ರಂಥಾಲಯಕ್ಕೆ ಭೇಟಿ ನೀಡುವ ಮಕ್ಕಳು ಪುಸ್ತಕವನ್ನು ಓದಲು ಗ್ರಂಥಾಲಯ ಮೇಲ್ವಿಚಾರಕರು ಪ್ರೋತ್ಸಾಹಿಸುತ್ತಾರೆ. ಮಕ್ಕಳು ಪುಸ್ತಕವನ್ನು ಓದಿ ಮುಗಿಸಿದ ನಂತರ ತಾವು ಓದಿದ ಪುಸ್ತಕಗಳ ಬಗ್ಗೆ ಸೂಚನೆಗಳಂತೆ ಮಾಹಿತಿ ಒದಗಿಸಬೇಕು. ಮಕ್ಕಳು ಓದಿದ ಪುಸ್ತಕಗಳ ಸಂಖ್ಯೆಯನ್ನು ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು. ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಪುಸ್ತಕಗಳನ್ನು ಓದಿದ ಮಕ್ಕಳ ಹೆಸರುಗಳನ್ನು ತಿಂಗಳ ಕೊನೆಯ ದಿನದಂದು ಘೋಷಿಸಲಾಗುವುದು ಎಂದು ವಿವರಿಸಿದರು.

Leave a Reply