ಸಂವಿಧಾನವನ್ನು ನಿಧಾನವಾಗಿ ದುರ್ಬಲಗೊಳಿಸುವ ಸಂಚು ನಡೆಸಿದ್ದಾರೆ: ಸಿದ್ದರಾಮಯ್ಯ

4 months ago

ಬೆಂಗಳೂರು: ಸಂವಿಧಾನ ಬದಲಾವಣೆ ಸುಲಭದ ಕೆಲಸ ಅಲ್ಲ ಎಂದು ಅರ್ಥ ಮಾಡಿಕೊಂಡಿರುವವರು, ನಿಧಾನವಾಗಿ ಅದನ್ನು ದುರ್ಬಲಗೊಳಿಸುವ ಸಂಚು ನಡೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

77ನೇ ಗಣರಾಜ್ಯೋತ್ಸವದ ಸಂದರ್ಭ ದಲ್ಲಿ ತಮ ಸಂದೇಶ ನೀಡಿರುವ ಅವರು, ಸಂವಿಧಾನವನ್ನು ವಿರೋಧಿಸುತ್ತಿರುವವರು ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರು. ಅವರು ಬಡವರ, ರೈತರ, ಕಾರ್ಮಿಕರ, ದಲಿತರ, ಶೋಷಿತರ ಪರವಾದ ಕಾನೂನುಗಳು ಮತ್ತು ಕಾರ್ಯಕ್ರಮಗಳನ್ನು ವಿರೋಧಿಸುವವರು ಎನ್ನುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿದಾಗಲೂ ಅದನ್ನು ವಿರೋಧಿಸುವವರಿದ್ದರು. ಈಗಲೂ ಆಗಾಗ ಸಂವಿಧಾನವನ್ನು ಬದಲಾಯಿಸುವ, ಕಿತ್ತೊಗೆಯುವ ಕೂಗುಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ ಇದು ಸುಲಭದ ಕೆಲಸ ಅಲ್ಲ ಎಂದು ಎಚ್ಚರಿಕೆ ನೀಡಿದರು.

ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನವನ್ನು ಅಪ್ರಸ್ತುತ ಮಾಡುವ ಈ ಸಂಚಿನ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮನ್ನು ರಕ್ಷಿಸುತ್ತದೆ, ದೇಶ ಸುಭದ್ರವಾಗಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಗಣರಾಜ್ಯೋತ್ಸವದ ದಿನವಾದ ಇಂದು ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಲು ಎಲ್ಲರ ನಡುವೆ ಭ್ರಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಆಶಯವಾಗಿದೆ ಎಂದರು.

ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಪ್ರಜಾರಾಜ್ಯದ ಬೀಜಾಂಕುರವಾಗಿತ್ತು. ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ನೇತೃತ್ವದಲ್ಲಿ ನಡೆದಿದ್ದ ಶರಣ ಚಳವಳಿಯಿಂದ ಕೂಡಲ ಸಂಗಮದ ಅನುಭವ ಮಂಟಪ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿ ಸ್ವರೂಪದ್ದು. ಸಮಾಜದ ಅತ್ಯಂತ ಕೆಳಸ್ತರದ ಜನರೂ ಕೂಡಾ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತುಮ ಅಭಿಪ್ರಾಯ, ಅಹವಾಲುಗಳನ್ನು ವ್ಯಕ್ತಪಡಿಸುವ ಸಮಾನಾವಕಾಶ ಅನುಭವ ಮಂಟಪದಲ್ಲಿತ್ತು. ಅದು ನಾವಿಂದು ಅನುಭವಿಸುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು ಎಂದರು.

ಆ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ವರ್ಗಗಳು ಅಂದರೆ ಶೂದ್ರರು, ಮಹಿಳೆಯರು ಮತ್ತು ಅಸ್ಪಶ್ಯರು ಸಂಪತ್ತನ್ನು ಹೊಂದುವ, ಜ್ಞಾನವನ್ನು ಗಳಿಸುವ, ಘನತೆಯಿಂದ ಬದುಕುವ ಹಕ್ಕಿನಿಂದ ವಂಚಿತರಾಗಿದ್ದರು. ಈ ಮನುಷ್ಯವಿರೋಧಿ ಅಲಿಖಿತ ಸಂವಿಧಾನವನ್ನು ತಿರಸ್ಕರಿಸಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಹೊಸದೊಂದು ಸಂವಿಧಾನವನ್ನು ಭಾರತಕ್ಕೆ ನೀಡಿದರು. ಭಾರತದಲ್ಲಿ ಆಧುನಿಕ ಹಾಗೂ ಪ್ರಜಾಪ್ರಭುತ್ವವಾದಿ ರಾಷ್ಟ್ರಪ್ರಭುತ್ವದ ಹುಟ್ಟಿನೊಂದಿಗೆ ಈ ಬಗೆಯ ತಡೆಗೋಡೆಗಳನ್ನು ಮುರಿಯುವ ಪ್ರಯತ್ನ ಪ್ರಾರಂಭವಾಯಿತು ಎಂದರು.

ಯಾರು ಯಾವ ಸಾಮಾಜಿಕ ಮೂಲದಿಂದಲೇ ಬಂದಿರಲಿ, ಅಭಿವೃದ್ಧಿಯ ಹಾಗೂ ಪ್ರಗತಿಯ ಫಲ ಎಲ್ಲರಿಗೂ ಸೇರಬೇಕು ಎಂಬುದು ಸಂವಿಧಾನದಲ್ಲಿ ಸೂಚಿತವಾದ ಸರ್ವರನ್ನೂ ಒಳಗೊಳ್ಳುವ ಸಾಮಾಜಿಕ ಮರುರಚನೆಯ ನಿರ್ಣಯವಾಗಿದೆ. ಭಾರತ ಒಂದು ರಾಷ್ಟ್ರವಾಗಿ ಬೆಳೆಯಬೇಕಾದರೆ, ಸಾಮಾಜಿಕ ಸಂಘರ್ಷಗಳಿಂದ ಹೊರಬರಬೇಕಾದರೆ ಈ ಸಮಾಜದ ಪುರಾತನ ಕಾಲದ ಶ್ರೇಣಿಕೃತ ವ್ಯವಸ್ಥೆಗಳನ್ನು ಒಡೆದು ಸಮಾಜದ ಪುನರ್‌ ರಚನೆ ಮಾಡಲೇಬೇಕಾಗುತ್ತದೆ ಎಂದರು.

ನಾಗರಿಕನೊಬ್ಬನ ಸ್ಥಾನಮಾನ ಆತನ ಸತ್ವ-ಸಾಧನೆಗಳಿಂದ ನಿರ್ಣಯವಾಗಬೇಕೇ ಹೊರತು, ಆತನ ಹುಟ್ಟು ಇಲ್ಲವೇ ಪುರಾತನ ಕಾಲದಿಂದ ಬಂದ ಸಾಮಾಜಿಕ ಮೂಲಗಳಿಂದ ಅಲ್ಲ ಎಂಬುದನ್ನು ಪ್ರತಿಪಾದಿಸುವ ನಾಗರಿಕ ಸಮಾಜದ ನಿರ್ಮಾಣ ನಮ ಸಂವಿಧಾನದ ಮೂಲ ಆಶಯವಾಗಿದೆ ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸುವಾಗ ಮುಂದಿನ ದಿನಗಳಲ್ಲಿ ದೇಶವನ್ನು ಆಳುವವರಿಗೆ ಎರಡು ಮುಖ್ಯವಾದ ಜವಾಬ್ದಾರಿಗಳನ್ನು ಒತ್ತು ಕೊಟ್ಟು ಹೇಳಿದ್ದರು. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ರಕ್ಷಣೆ, ಆ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತಾ ಹೋಗುವುದು ಎಂದು ವಿವರಿಸಿದ್ದಾರೆ ಎಂದರು.

Leave a Reply