ವಿಧ್ವಂಸಕ ಕೃತ್ಯಕ್ಕೆ ಸಂಚು: ಜೈಲಿನ ವೈದ್ಯ, ಪೊಲೀಸ್ ಅಧಿಕಾರಿ ಸೇರಿ ಮೂವರ ಬಂಧನ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದಲೇ ಕರ್ನಾಟಕ ಸಹಿತ ದೇಶದ ಹಲವು ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಈ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಜೈಲಿನ ವೈದ್ಯ, ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ನಡೆಸಿದ್ದಾರೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರು ಮತ್ತು ಕೋಲಾರದ ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಿ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ.ನಾಗರಾಜ್, ನಗರ ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಚಾನ್‌ಪಾಷಾ ಮತ್ತು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಅಹ್ಮದ್‌ನ ತಾಯಿ ಅನೀಸ್ ಫಾತೀಮಾರನ್ನು ಬಂಧಿಸಲಾಗಿದೆ.
ದಾಳಿ ವೇಳೆ ಆರೋಪಿಗಳ ಮನೆಯಲ್ಲಿದ್ದ ಡಿಜಿಟಲ್ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್ ಐಎ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ನಾಗನಾಥಪುರದಲ್ಲಿರುವ ಡಾ.ನಾಗರಾಜ್ ಮನೆ, ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾನ್‌ಪಾಷಾ ವಾಸವಾಗಿರುವ ಸಿಎಆರ್ ಕ್ವಾಟ್ರಸ್, ಕೋಲಾರದಲ್ಲಿರುವ ಮನೆ, ಆರ್.ಟಿ. ನಗರದಲ್ಲಿರುವ ಜುನೈದ್ ಅಹ್ಮದ್ ಮನೆ, ವೈದ್ಯ ನಾಗರಾಜ್‌ಗೆ ಸಹಾಯಕಿಯಾಗಿದ್ದ ಪವಿತ್ರಾ ಎಂಬಾಕೆಯ ಮನೆ ಸೇರಿ 5 ಕಡೆ ದಾಳಿ ನಡೆಸಲಾಗಿದೆ.
ನಾಗರಾಜ್ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮನೋವೈದ್ಯನಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದ. ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಲ್‌ಇಟಿಯ ದಕ್ಷಿಣ ಭಾರತದ ಮುಖ್ಯಸ್ಥ ಟಿ. ನಾಸೀರ್ ಮತ್ತು ಇತರ ಕೈದಿಗಳಿಗೆ ಮೊಬೈಲ್‌ಗಳನ್ನು ಕಳ್ಳ ಸಾಗಣೆ ಮೂಲಕ ನೀಡುತ್ತಿದ್ದ.
ಈತನಿಗೆ ಆಕೆಯ ಸಹಾಯಕಿ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದಳು.
ಜುನೈದ್ ಅಹ್ಮದ್‌ನ ತಾಯಿ ಅನೀಸ್ ಫಾತೀಮಾ, ಜೈಲಿನಲ್ಲಿರುವ ಟಿ. ನಾಸೀರ್ ಎಲ್‌ಇಟಿಗೆ ಸಂಘಟನೆ ಮಾಡಲು ನಿಧಿ ಸಂಗ್ರಹ ಹಾಗೂ ಇತರ ವಿಷಯಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ವಿದೇಶದಲ್ಲಿರುವ ತನ್ನ ಮಗನಿಗೆ ನೀಡುತ್ತಿದ್ದಳು. ಅದರಂತೆ ಆತ ವಿಧ್ವಂಸಕ ಕೃತ್ಯಗಳಿಗೆ ಸಂಚು ಹಾಗೂ ಸಂಘಟನೆಗಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ಭಾಗಿಯಾಗುತ್ತಿದ್ದ ಎಂದು ಎನ್‌ಐಎ ತಿಳಿಸಿದೆ.
ಸಿಎಆರ್‌ನ ಪೊಲೀಸ್ ಅಧಿಕಾರಿ ಚಾನ್‌ಪಾಷಾ, 2022ರಿಂದ ಟಿ. ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದಾನೆ. ಪ್ರಕರಣ ಸಂಬಂಧ ಆಗಾಗ ಬೆಂಗಳೂರು, ಕೇರಳ ಹಾಗೂ ಇತರ ರಾಜ್ಯಗಳ ಕೋರ್ಟ್‌ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಚಿತವಾಗಿ ಟಿ. ನಾಸೀರ್‌ಗೂ ನೀಡುತ್ತಿದ್ದ. ಅದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದ ಎಂದು ಹೇಳಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಸ್ಪೋಟ ಪ್ರಕರಣ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೇರಳ ಮೂಲದ ಟಿ ನಾಸೀರ್ ಜೈಲಿನಲ್ಲಿದ್ದುಕೊಂಡೆ ವಿದ್ವಂಸಕ ಕೃತ್ಯಕ್ಕೆ ಸಂಚು ನಡೆಸಿದ್ದಾನೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಸೇರುವ ಮುಸ್ಲಿಂ ಯುವಕರನ್ನು ಧಾರ್ಮಿಕ ಪ್ರವಚನದ ಹೆಸರಿನಲ್ಲಿ ತನ್ನತ್ತ ಸೆಳೆದುಕೊಂಡು ಅವರಿಗೆ ಜಿಹಾದ್ ತರಬೇತಿ ನೀಡುತ್ತಿದ್ದ. ಅಲ್ಲದೆ ಜೈಲಿನಲ್ಲಿಯೇ ಬಾಂಬ್ ತಯಾರಿಕೆ ಗ್ರನೇಡ್ ತಯಾರಿಕೆ ಮತ್ತು ಅವುಗಳನ್ನು ಬಳಸುವ ಕುರಿತಾಗಿಯೂ ತರಬೇತಿ ನೀಡುತ್ತಿದ್ದ ಎಂದು ಹೇಳಲಾಗಿದೆ.
ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಗ್ರೆನೇಡ್, ಮದ್ದು ಗುಂಡುಗಳು, ಪಿಸ್ತೂಲ್, ಜೀವಂತ ಗುಂಡುಗಳನ್ನು ಸಂಗ್ರಹಿಸಿದ್ದ ಆರೋಪದ ಮೇರೆಗೆ ವಿವಿಧೆಡೆ 2023ರ ಜು. 18ರಂದು ದಾಳಿ ನಡೆಸಲಾಗಿತ್ತು. ಈ ವೇಳೆ ಸೈಯದ್ ಸುಹೈಲ್ ಖಾನ್ (24), ಕೊಡಿಗೇಹಳ್ಳಿಯ ನಿವಾಸಿ 4ನೇ ಆರೋಪಿ ಮಹಮದ್ ಉಮರ್ (29), 5ನೇ ಆರೋಪಿ ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್ (25), 6ನೇ ಆರೋಪಿ ಸೈಯದ್ ಮುದಾಸಿರ್ ಪಾಷಾ (28), ಮಹಮ್ಮದ್ ಫೈಸಲ್ (30) ನನ್ನು ಬಂಧಿಸಲಾಗಿತ್ತು ಇವರೆಲ್ಲರಿಗೂ ಟೀ ನಾಸೀರ್ ತರಬೇತಿ ನೀಡಿದ್ದ ಅಂಶ ಬೆಳಕಿಗೆ ಬಂದಿತ್ತು.




