ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಿವುಡು, ಮಂಪರಿನಿಂದ ಕೂಡಿದೆ. ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚು ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂಬ ಸಚಿವರ ಹೇಳಿಕೆಯನ್ನು ಟೀಕಿಸಿ, ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದ ಮದ ನೆತ್ತಿಗೇರಿದೆ. ಸಚಿವರು ರಾಜ್ಯದ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವುದಾಗಿ ಕಂದಾಯ ಸಚಿವರು ಕೆಲದಿನಗಳ ಹಿಂದೆ ಹೇಳಿದ್ದಾರೆ. ಬಳಿಕ ಅದನ್ನು ಮುಂದೂಡಿದ್ದಾರೆ. ಸರ್ವೇ, ರಾಜ್ಯ ಪ್ರವಾಸದ ನೆಪ ಒಡ್ಡುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ನಿಮಗೆ ಸಮಯ ಸಿಗುತ್ತದೆ. ಹಾಗಿದ್ದರೆ ನಿಮ್ಮ ಆದ್ಯತೆ ಏನು? ಎಂದು ಕೇಳಿದರು.
ರಾಜ್ಯ ಸರಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವ ಕಳಕಳಿ, ಇಚ್ಛೆ ಇಲ್ಲ. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಬರಪೀಡಿತ ಪ್ರದೇಶ ಘೋಷಣೆ ಯಾವಾಗ? ನೀವಿಲ್ಲಿ ತಡ ಮಾಡುತ್ತೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪ್ರಾಮಾಣಿಕ ಕಳಕಳಿ ಸರಕಾರಕ್ಕೆ ಇಲ್ಲ. ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅತಿವೃಷ್ಟಿ ಆದಾಗ ಸಚಿವ ಸಂಪುಟ ರಚನೆ ಆಗಿರಲಿಲ್ಲ. ಆದರೂ ತಾವೇ ಸಮೀಕ್ಷೆ ನಡೆಸಿ ಮನೆ ಬಿದ್ದುದಕ್ಕೆ ಹೆಚ್ಚು ಹಣ ನೀಡಿದ್ದರು. ರಾಜ್ಯ ಸರಕಾರ ತಕ್ಷಣ ಬರಗಾಲ ಪೀಡಿತ ತಾಲ್ಲೂಕುಗಳನ್ನು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಲೋಡ್ ಶೆಡ್ಡಿಂಗ್ ನಿರಂತರವಾಗಿದೆ. ನನ್ನ ಕ್ಷೇತ್ರ ಶಿಕಾರಿಪುರದಲ್ಲಿ 40 ಸಾವಿರ ಪಂಪ್ಸೆಟ್ ಇವೆ. ನೀರು ಮೇಲೆತ್ತಿ ಹಾಯಿಸಲು ಒಂದೆರಡು ತಾಸು ಕೂಡ ಕರೆಂಟ್ ಸಿಗುತ್ತಿಲ್ಲ. 200 ಯೂನಿಟ್ ಕರೆಂಟ್ ಉಚಿತ ಎನ್ನುವ ಸರಕಾರ, ರೈತರಿಗೆ ಪಂಪ್ಸೆಟ್ಗಳಿಗೆ ವಿದ್ಯುತ್ ಕೊಡುತ್ತಿಲ್ಲ. ರೈತರ ಬಗ್ಗೆ ಇವರಿಗೆ ಕನಿಕರ, ಅನುಕಂಪ ಇಲ್ಲ. ಇದು ಖಂಡನೀಯ ಎಂದರು.



