ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ನಾಯಕರು ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದ್ದಾರೆ: ಸಿದ್ದರಾಮಯ್ಯ

3 years ago

#BJP #leaders #digging #emotional #issues #elections #Siddaramaiah

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ನಾಯಕರು ದೇಶದ ಹೆಸರು ಬದಲಾವಣೆಯಂತಹ ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.

ಈ ಮೂಲಕ ದೇಶದ ಹೆಸರು ರಿಪಬ್ಲಿಕ್ ಅಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ್ ಎಂದು ಕೇಂದ್ರ ಸರ್ಕಾರ ಮರು ನಾಮಕರಣ ಮಾಡಲಿದೆ ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಜಟಾಪಟಿಗೆ ವೇದಿಕೆಯಾಗಿದೆ. ಕೇಂದ್ರ ಸರ್ಕಾರದ ಕ್ರಮವನ್ನು ಬಿಜೆಪಿ ನಾಯಕರು ಬಲವಾಗಿ ಸಮರ್ಥಿಸಿ, ಟೀಕಾಕಾರರ ವಿರುದ್ಧ ವಾಗ್ಪ್ರಹಾರ ನಡೆಸಿದರೆ, ಇದೊಂದು ನಾಚಿಕೆಗೇಡಿನ ಕ್ರಮ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದೇಶದ ಸಂವಿಧಾನವನ್ನು 26 ನೇ ನವೆಂಬರ್ 1949 ರಂದು ಅಂಗೀಕಾರ ಮಾಡಿದ್ದಾರೆ. ಅಂದಿನಿಂದ ಭಾರತವನ್ನು ಇಂಡಿಯಾ ಎಂದೇ ಕರೆಯಲಾಗಿದೆ. ಈಗ ಬದಲಾವಣೆ ಮಾಡುವ ಅಗತ್ಯವೇನು ಎಂದು ಪ್ರಶ್ನಿಸಿದರು.

ಸಂವಿಧಾನದ ಪೀಠಿಕೆಯಲ್ಲಿಯೂ ಭಾರತದ ಪ್ರಜೆಗಳಾದ ನಾವು ಎಂದೇ ಹೇಳಿದ್ದೇವೆ ಈಗ ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಗೃಹ ಸಚಿವ ಡಾ: ಜಿ.ಪರಮೇಶ್ವರ್ ಅವರು ಹಿಂದೂ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ಧರ್ಮದಲ್ಲಿ ತಾರತಮ್ಯ ಮಾಡುವುದಿಲ್ಲ. ಹಿಂದೂ, ಇಸ್ಲಾಮ್, ಕ್ರೈಸ್ತ, ಸಿಖ್, ಭೌದ್ಧ,ಧರ್ಮದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ. ದೇಶದ ಜನರ ಜೀವನದಲ್ಲಿ ಬದಲಾವಣೆ ಆಗುವುದು ಮುಖ್ಯ ಎಂದು ಹೇಳಿದ್ದಾರೆ.

ದೇಶದ ಎಲ್ಲ ಜನರಿಗೂ ಅನ್ನ, ಉದ್ಯೋಗ, ಮನೆ ಸಿಕ್ಕರೆ ಅದನ್ನು ಬದಲಾವಣೆ ಎನ್ನಬಹುದು. ಕಳೆದ 9 ವರ್ಷಗಳಲ್ಲಿ ಜನರ ಆದಾಯ ದುಪಟ್ಟಾಯಿತೇ, 15 ಲಕ್ಷ ಹಣ ಬ್ಯಾಂಕ್ ಖಾತೆಗೆ ಬಂದಿದೆಯೇ? ಇಲ್ಲ. ಒಂದೇ ಒಂದು ಅಕ್ಕಿಕಾಳು ಕಡಿಮೆ ಕೊಟ್ಟರು ಬಿಡುವುದಿಲ್ಲ ಎಂದು ಬಿಜೆಪಿಯವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಅವರು ಕೊಟ್ಟ ಮಾತನ್ನು ಒಂದಾದರೂ ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಶ್ರೀಮಂತರು, ದೊಡ್ಡ ಉದ್ಯಮಿಗಳು ದೇಶಬಿಟ್ಟು ಹೋಗುತ್ತಿದ್ದಾರೆ. 12 ಲಕ್ಷ ಪಾಸ್ ಪೋರ್ಟ್ ಗಳನ್ನು ಸರ್ಕಾರದ ವಶಕ್ಕೆ ನೀಡಿ ಈ ದೇಶದ ಕೋಟ್ಯಾಧಿಪತಿಗಳು ಬೇರೆ ದೇಶದ ಪೌರತ್ವ ತೆಗೆದುಕೊಂಡಿದ್ದಾರೆ. ನಮ್ಮ ದೇಶದ ಹಣ ಹೊರಗಡೆ ಹೋಗುತ್ತಿದೆ. ಹೆಸರು ಬದಲಾವಣೆಯಿಂದ ಏನೂ ಲಾಭವಿಲ್ಲ. ನಮ್ಮ ಆಚಾರ- ವಿಚಾರ ಬದಲಾವಣೆಯಾಗಬೇಕು ಎಂದು ಪ್ರತಿಪಾದಿಸಿದರು.

ರಾವಣ, ಶೂರ್ಪನಖಿ: ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡ ಸುನಿಲ್ ಕುಮಾರ್, ಇಂಡಿಯಾ ಬದಲಿಗೆ ಭಾರತ್ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸುವವರು ತಮ್ಮ ಹೆಸರುಗಳನ್ನು ರಾವಣ, ದುಶಾಃಸನ, ಘಟೋತ್ಗಚ ಶೂರ್ಪನಖಿ, ಒಸಮಾ ಬಿನ್ ಲಾಡೆನ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದಲ್ಲವೇ ಎಂದು ಕೇಳಿದ್ದಾರೆ.

ದೇಶಕ್ಕೆ ಇಂಡಿಯಾ ಬದಲು ಭಾರತ ಎಂಬ ಹೆಸರನ್ನು ಇಟ್ಟಾಗ ಮೂಡುವ ಭಾವ, ಭಕುತಿಗಳೇ ಬೇರೆ ಎಂದು ಹೇಳಿದ್ದಾರೆ. ಸನಾತನ ಭಾರತ ವರ್ಷ ನಮ್ಮ ಮುಂದೆ ಸೃಷ್ಟಿಯಾಗುತ್ತದೆ. ಇದಕ್ಕಾಗಿಯೇ ಇರಬೇಕು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಬರೆದ ಕವಿಗಳು ಇಂಡಿಯಾ ಬದಲು ಭಾರತ ಎಂಬ ಶಬ್ದ ಪ್ರಯೋಗವನ್ನು ಒಲವಿನಿಂದ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Leave a Reply