ಅಧ್ಯಾಯ V – ಭಾರತದ ಲೆಕ್ಕ ನಿಯಂತ್ರಕ ಹಾಗೂ ಮಹಾ ಲೆಕ್ಕಪರಿಶೋಧಕ

5 months ago

148. ಭಾರತದ ಲೆಕ್ಕ ನಿಯಂತ್ರಕ-ಹಾಗೂ-ಮಹಾ ಲೆಕ್ಕಪರಿಶೋಧಕ:- (1) ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕ- ಹಾಗೂ – ಮಹಾ ಲೆಕ್ಕಪರಿಶೋಧಕ ಇರತಕ್ಕದ್ದು. ಅವನನ್ನು ರಾಷ್ಟ್ರಪತಿಯು ತಾನು ಸಹಿ ಮಾಡಿ ಮೊಹರು ಹಾಕಿದ ವಾರಂಟಿನ ಮೂಲಕ ನೇಮಕ ಮಾಡತಕ್ಕದ್ದು ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನನ್ನು ತೆಗೆದುಹಾಕಬಹುದಾದಂಥ ರೀತಿಯಲ್ಲಿ ಮತ್ತು ಅಂಥವೇ ಕಾರಣಗಳ ಮೇಲೆ ಮಾತ್ರ ಪದದಿಂದ ತೆಗೆದುಹಾಕತಕ್ಕದ್ದು.

(2) ಭಾರತದ ಲೆಕ್ಕ ನಿಯಂತ್ರಕ – ಹಾಗೂ – ಮಹಾ ಲೆಕ್ಕಪರಿಶೋಧಕನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು.

(3) ಲೆಕ್ಕ ನಿಯಂತ್ರಕ – ಹಾಗೂ – ಮಹಾ ಲೆಕ್ಕಪರಿಶೋಧಕನ ಸಂಬಳ ಮತ್ತು ಇತರ ಸೇವಾ ಷರತ್ತುಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ಅವು ಹಾಗೆ ನಿರ್ಧಾರವಾಗುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು:

ಪರಂತು. ಲೆಕ್ಕ ನಿಯಂತ್ರಕ – ಹಾಗೂ – ಮಹಾ ಲೆಕ್ಕಪರಿಶೋಧಕನ ನೇಮಕದ ತರುವಾಯ ಅವನ ಸಂಬಳವನ್ನಾಗಲಿ ಅಥವಾ ಗೈರು ಹಾಜರಿ ರಜೆ, ನಿವೃತ್ತಿ ವೇತನ ಅಥವಾ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂಥ ಅವನ ಹಕ್ಕುಗಳನ್ನಾಗಲಿ, ಅವನಿಗೆ ಅನನುಕೂಲವಾಗುವಂತೆ ವ್ಯತ್ಯಸ್ತಗೊಳಿಸತಕ್ಕದ್ದಲ್ಲ.

(4) ಲೆಕ್ಕ ನಿಯಂತ್ರಕ – ಹಾಗೂ – ಮಹಾ ಲೆಕ್ಕಪರಿಶೋಧಕನು ತನ್ನ ಪದಧಾರಣೆ ಮಾಡಿರುವುದು ನಿಂತು ಹೋದ ತರುವಾಯ ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿನ ಯಾವುದೇ ಪದಕ್ಕೆ ಮತ್ತೆ ಅರ್ಹನಾಗತಕ್ಕದ್ದಲ್ಲ.

(5) ಈ ಸಂವಿಧಾನದ ಮತ್ತು ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಸೇವಾ ಷರತ್ತುಗಳು ಮತ್ತು ಲೆಕ್ಕನಿಯಂತ್ರಕ ಹಾಗೂ ಮಹಾ ಲೆಕ್ಕಪರಿಶೋಧಕನ ಆಡಳಿತ ಅಧಿಕಾರಗಳು, ರಾಷ್ಟ್ರಪತಿಯು ಲೆಕ್ಕ ನಿಯಂತ್ರಕ ಹಾಗೂ ಮಹಾ ಲೆಕ್ಕಪರಿಶೋಧಕನೊಡನೆ ಸಮಾಲೋಚಿಸಿದ ಬಳಿಕ ರಚಿಸುವ ನಿಯಮಗಳ ಮೂಲಕ ಗೊತ್ತುಪಡಿಸಬಹುದಾದಂತೆ ಇರತಕ್ಕದ್ದು.

(6) ಲೆಕ್ಕ ನಿಯಂತ್ರಕ – ಹಾಗೂ – ಮಹಾ ಲೆಕ್ಕಪರಿಶೋಧಕನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಎಲ್ಲ ಸಂಬಳಗಳು, ಭತ್ಯೆಗಳು ಮತ್ತು ನಿವೃತ್ತಿ ವೇತನಗಳೂ ಸೇರಿ ಆ ಕಚೇರಿಯ ಆಡಳಿತ ವೆಚ್ಚಗಳನ್ನು ಭಾರತದ ಸಂಚಿತ ನಿಧಿಯ ಮೇಲೆ ಹೊರಿಸತಕ್ಕದ್ದು.

149. ಲೆಕ್ಕ ನಿಯಂತ್ರಕ ಹಾಗೂ ಮಹಾ ಲೆಕ್ಕ ಪರಿಶೋಧಕನ ಕರ್ತವ್ಯಗಳು ಮತ್ತು ಅಧಿಕಾರಗಳು:- ಲೆಕ್ಕ ನಿಯಂತ್ರಕ – ಹಾಗೂ ಮಹಾ ಲೆಕ್ಕ ಪರಿಶೋಧಕನು, ಒಕ್ಕೂಟದ ಮತ್ತು ರಾಜ್ಯಗಳ ಮತ್ತು ಇತರ ಯಾವುದೇ ಪ್ರಾಧಿಕಾರದ ಅಥವಾ ನಿಕಾಯದ ಲೆಕ್ಕಗಳ ಸಂಬಂಧದಲ್ಲಿ ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು ಮತ್ತು ಅಧಿಕಾರಗಳನ್ನು ಚಲಾಯಿಸತಕ್ಕದ್ದು ಹಾಗೂ ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ ಒಕ್ಕೂಟದ ಮತ್ತು ರಾಜ್ಯಗಳ ಲೆಕ್ಕಗಳ ಸಂಬಂಧದಲ್ಲಿ, ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಅನುಕ್ರಮವಾಗಿ ಡೊಮಿನಿಯನ್ ಆಫ್ ಇಂಡಿಯಾದ ಮತ್ತು ಪ್ರಾಂತಗಳ ಲೆಕ್ಕಗಳಿಗೆ ಸಂಬಂಧಿಸಿದಂತೆ ಭಾರತದ ಮಹಾ ಲೆಕ್ಕಪರಿಶೋಧಕನಿಗೆ ಪ್ರದಾನ ಮಾಡಿದ್ದಂಥ ಅಥವಾ ಅವನು ಚಲಾಯಿಸಬಹುದಾಗಿದ್ದಂಥ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು ಮತ್ತು ಅಧಿಕಾರಗಳನ್ನು ಚಲಾಯಿಸತಕ್ಕದ್ದು.

[150 ಒಕ್ಕೂಟದ ಮತ್ತು ರಾಜ್ಯಗಳ ಲೆಕ್ಕಗಳ ನಮೂನೆ:- ಭಾರತದ ಲೆಕ್ಕ ನಿಯಂತ್ರಕ ಹಾಗೂ ಮಹಾ ಲೆಕ್ಕ ಪರಿಶೋಧಕನ (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 27ನೇ ಪ್ರಕರಣದ ಮೂಲಕ 150ನೆಯ ಅನುಚ್ಛೇದಕ್ಕೆ ಬದಲಾಗಿ (1-4-1977 ರಿಂದ ಜಾರಿಗೆ ಬರುವಂತೆ) ಪ್ರತ್ರಾಯೋಜಿಸಲಾಗಿದೆ.) [ಸಲಹೆಯ ಮೇರೆಗೆ] (1978ನೆಯ ಇಸವಿಯ ಸಂವಿಧಾನ (ನಲವತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 22ನೇ ಪ್ರಕರಣದ ಮೂಲಕ “ಸಮಾಲೋಚಿಸಿದ ಬಳಿಕ” ಎಂಬ ಪದಗಳಿಗೆ ಬದಲಾಗಿ (20-6-79ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) ರಾಷ್ಟ್ರಪತಿಯು ನಿಯಮಿಸಬಹುದಾದಂಥ ನಮೂನೆಯಲ್ಲಿ ಒಕ್ಕೂಟದ ಮತ್ತು ರಾಜ್ಯಗಳ ಲೆಕ್ಕಗಳನ್ನು ಇಡತಕ್ಕದ್ದು.]

151.ಲೆಕ್ಕ ಪರಿಶೋಧನ ವರದಿಗಳು:- (1) ಒಕ್ಕೂಟದ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ ಭಾರತದ ಲೆಕ್ಕ ನಿಯಂತ್ರಕ – ಹಾಗೂ ಮಹಾ ಲೆಕ್ಕ ಪರಿಶೋಧಕನ ವರದಿಗಳನ್ನು ರಾಷ್ಟ್ರಪತಿಗೆ ಒಪ್ಪಿಸತಕ್ಕದ್ದು; ರಾಷ್ಟ್ರಪತಿಯು ಆ ವರದಿಗಳನ್ನು ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಇಡುವಂತೆ ಮಾಡತಕ್ಕದ್ದು.

(2) ಒಂದು ರಾಜ್ಯದ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ ಭಾರತದ ಲೆಕ್ಕ ನಿಯಂತ್ರಕ ಹಾಗೂ ಮಹಾ ಲೆಕ್ಕ ಪರಿಶೋಧಕನ ವರದಿಗಳನ್ನು ಆ ರಾಜ್ಯದ ರಾಜ್ಯಪಾಲನಿಗೆ (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೇ ಪ್ರಕರಣದ ಹಾಗೂ ಅನುಸೂಚಿಯ ಮೂಲಕ, “ಅಥವಾ ರಾಜಪ್ರಮುಖನಿಗೆ” ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.) ಒಪ್ಪಿಸತಕ್ಕದ್ದು ಮತ್ತು ಆ ರಾಜ್ಯದ ರಾಜ್ಯಪಾಲನು ಅವುಗಳನ್ನು ಆ ರಾಜ್ಯದ ವಿಧಾನಮಂಡಲದ ಮುಂದೆ ಇಡುವಂತೆ ಮಾಡತಕ್ಕದ್ದು.]

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 59-60

Leave a Reply