ಕಾಂಗ್ರೆಸ್ ಗೆ ತಲೆನೋವಾದ ಕಲಬುರ್ಗಿ ಲೋಕಸಭಾ ಕ್ಷೇತ್ರ

2 years ago

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ನಿಧಾನವಾಗಿ ತೀವ್ರತೆ ಪಡೆದುಕೊಳ್ಳತೊಡಗಿದೆ. ಕಾಂಗ್ರೆಸ್ ಕನಿಷ್ಠ 20 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂಬ ನಿಟ್ಟಿನಲ್ಲಿ ತಂತ್ರಗಳನ್ನು ರೂಪಿಸತೊಡಗಿದೆ.

ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಅವರು ತವರು ರಾಜ್ಯದಿಂದ ಈ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯ ಕಾಂಗ್ರೆಸ್ ಸಂಸದರು ಆಯ್ಕೆಯಾಗಬೇಕು ಎಂಬ ನಿಟ್ಟಿನಲ್ಲಿ ರಣತಂತ್ರಗಳನ್ನು ಹೆಣೆಯಲಾಗುತ್ತಿದೆ. ಆದ್ದರಿಂದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲ ನಿಟ್ಟಿನಿದಂದ ಲೆಕ್ಕಾಚಾರಗಳನ್ನು ಮಾಡಲಾಗುತ್ತಿದೆ.

ಕಲಬುರಗಿ ಜಿಲ್ಲೆಯ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಸ್ವತಃ ತಾವೇ ಬೆಳೆಸಿದ ಉಮೇಶ್ ಜಾಧವ್ ಅವರ 95,452 ಮತಗಳ ಬೃಹತ್ ಅಂತರದಿಂದ ಸೋಲುಂಡಿದ್ದರು. ಆದರೆ ಅವರ ಅನುಭವ, ಪಕ್ಷನಿಷ್ಠೆ ಮೊದಲಾದವುಗಳನ್ನು ಪರಿಗಣಿಸಿ ಅವರನ್ನು ಪಕ್ಷ ರಾಜ್ಯಸಭೆಯ ಸದಸ್ಯರನ್ನಾಗಿಸಿತ್ತು. ಈ ಬಾರಿ ಅವರು ಮತ್ತೆ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ಸೋಲಿನ ಅಪವಾದದಿಂದ ಹೊರ ಬರಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ, ಹೈಕಮಾಂಡ್ ಅವರ ಸ್ಪರ್ಧೆಗೆ ಸಮ್ಮತಿಸಿಲ್ಲ ಎಂದು ವರದಿಯಾಗಿದೆ. ಎಐಸಿಸಿ ಅಧ್ಯಕ್ಷರಾಗಿರುವ ಅವರು ದೇಶಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಲಬುರ್ಗಿಯಿಂದ ಕಣಕ್ಕಿಳಿದಿದ್ದೆ ಆದಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಕ್ಷೇತ್ರದಲ್ಲೇ ವಿನಿಯೋಗಿಸಬೇಕು. ಹೀಗಾಗಿ ಖರ್ಗೆ ಅವರು ಚುನಾವಣೆ ಕಣಕ್ಕೆ ಇಳಿಯುವುದು ಬೇಡ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯ ಖರ್ಗೆ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ 2026 ರವರೆಗೆ ಇದೆ. ಈ ಹಿನ್ನೆಲೆಯಲ್ಲಿ ಅವರು ರಾಜ್ಯಸಭೆ ಸದಸ್ಯರಾಗಿ ಮುಂದುವರೆಯುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ. ಇದರ ನಡುವೆ ಖರ್ಗೆ ಅವರು ಅಥವಾ ಅವರ ಕುಟುಂಬ ಸದಸ್ಯರು ಈ ಕ್ಷೇತ್ರದಿಂದ ಕಣಕ್ಕಿಳಿಯುವುದು ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ.

ಇಂತಹ ಅಭಿಪ್ರಾಯ ಕೇಳುತ್ತಿರುವ ನಡುವೆ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸಲು ಕುಟುಂಬ ಸದಸ್ಯರು ಉತ್ಸುಕರಾಗಿದ್ದಾರೆ. ರಾಧಾಕೃಷ್ಣ ಅವರೂ ಕೂಡಾ ಈ ಕುರಿತು ಕಾರ್ಯಕರ್ತರ ಸಭೆ ನಡೆಸುತ್ತಿದ್ದು ಕ್ಷೇತ್ರದ ಹಲವೆಡೆ ಪ್ರವಾಸ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ನಾಯಕರು ರಾಧಾಕೃಷ್ಣ ಅವರ ಸ್ಪರ್ಧೆಗೆ ಒಲವು ಹೊಂದಿಲ್ಲ. ಅವರು ಕಣಕ್ಕಿಳಿದಿದ್ದೆ ಆದಲ್ಲಿ ಮತದಾರರ ಮೇಲೆ ಬೇರೆ ರೀತಿಯ ಪರಿಣಾಮ ಉಂಟಾಗಲಿದೆ. ಹೀಗಾಗಿ ಅದು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳತೊಡಗಿದ್ದಾರೆ. ಅಲ್ಲದೆ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸುವ ಕುರಿತು ಈಗಾಗಲೇ ಎರಡು ಬಾರಿ ಆಂತರಿಕ ಸಮೀಕ್ಷೆ ನಡೆಸಲಾಗಿದೆ. ಈ ಎರಡೂ ವರದಿಗಳು ಕೂಡ ಅವರಿಗೆ ಪೂರಕ ಮಾಹಿತಿ ನೀಡಿಲ್ಲ. ಹೀಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.

ಒಂದು ವೇಳೆ ಕಲಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರೆ ಅದು ಖರ್ಗೆ ಅವರ ಹಿನ್ನಡೆ ಎಂದು ಭಾವಿಸಬೇಕಾಗುತ್ತದೆ. ಹೀಗಾಗಿ ಇದೊಂದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಹೀಗಾಗಿ ಖರ್ಗೆ ಅವರನ್ನೇ ಕಣಕ್ಕಿಳಿಸಲು ಸ್ಥಳೀಯ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಖರ್ಗೆ ಅವರು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಇನ್ನೊಂದು ಮೂಲಗಳ ಪ್ರಕಾರ, ಸ್ವತಃ ಖರ್ಗೆ ಅವರೇ ರಾಧಾಕೃಷ್ಣ ಅವರ ಸ್ಪರ್ಧೆಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಅದು ಅನುಕೂಲಕರ ಅಲ್ಲ ಎಂಬ ವರದಿಗಳು ಅವರನ್ನು ತಲುಪಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಚಿಂತೆಯಲ್ಲಿ ಪಕ್ಷ ಮತ್ತು ನಾಯಕರು ಇದ್ದಾರೆ.

Leave a Reply