ಕರ್ನಾಟಕ ರಾಜ್ಯದಲ್ಲಿ ಮತ್ತೆ ಜಾತಿ ಜನಗಣತಿಯ ಮರು ಸರ್ವೆ ಮಾಡಲು ತೀರ್ಮಾನಿಸಿದ್ದಾರೆ. ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇಂತಹ ಹಲವಾರು ಆಯೋಗಗಳು ರಚನೆಯಾಗಿ ಕಾಲಕಾಲಕ್ಕೆ ತನ್ನ ವರದಿಯನ್ನು ನೀಡಿರುತ್ತವೆ. ಆದರೆ ಬಹಳಷ್ಟು ಆಯೋಗದ ವರದಿಗಳು ಅನುಷ್ಠಾನವಾಗದೆ ಗೊಂದಲದ ಗೂಡಾಗಿ ಧೂಳು ಹಿಡಿದು ಕುಳಿತಿರುವಂತಹ ಉದಾಹರಣೆಗಳೇ ಹೆಚ್ಚಾಗಿವೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸ್ವಾತಂತ್ರ ಪೂರ್ವದಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗವನ್ನು ರಚಿಸಿ ಅದರ ವರದಿಯ ಮೇಲೆ ಮೀಸಲಾತಿಯನ್ನ ಕೊಡುವಂತಹ ಸಾಹಸವನ್ನು ಮಾಡಿದರು. ಆಗಲು ಸಹ ಇದಕ್ಕೆ ಸಾಕಷ್ಟು ವಿರೋಧ ಅವರೊಂದಿಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ವಲಯದಲ್ಲಿ ಬಂದಿತ್ತು. ಆದರೆ ಮಹಾರಾಜರು ಅವುಗಳನ್ನ ಲೆಕ್ಕಿಸದೆ ದಿಟ್ಟತನವನ್ನು ಪ್ರದರ್ಶಿಸಿದರು.
ಇದೇ ರೀತಿಯಲ್ಲಿ ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಮಂಡಲ್ ಆಯೋಗದ ರಚನೆಯಾಯಿತು. ಮಂಡಲ ಆಯೋಗದ ವರದಿಯು ಸಹ ಸಾಕಷ್ಟು ವರ್ಷಗಳ ಕಾಲ ಹೊರಬರದೆ ಕಪಾಟಿನಲ್ಲಿತ್ತು. ಸಾವಿರದ ಒಂಬೈನೂರ ಎಂಬತ್ತೊಂಬತ್ತರಲ್ಲಿ ಪ್ರಧಾನಿಗಳಾಗಿದ್ದ ವಿ.ಪಿ.ಸಿಂಗ್. ರವರು ಧೈರ್ಯ ಮಾಡಿ ಇದನ್ನು ಜಾರಿಗೊಳಿಸಿದರು. ಇದರ ಪರಿಣಾಮ ಅವರು ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.
ಕರ್ನಾಟಕ ರಾಜ್ಯದಲ್ಲಿ ಸನ್ಮಾನ್ಯ ದೇವರಾಜ್ ಅರಸು ಆವರು ಎಲ್ ಜಿ ಹಾವನೂರ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿ, ಅವರು ನೀಡಿದ ವರದಿಯನ್ನು ಸ್ವೀಕರಿಸಿ ಅದನ್ನು ಜಾರಿಗೆ ತಂದರು. ಈ ಸಂದರ್ಭದಲ್ಲಿ ಅವರು ಎದುರಿಸಿದಂತಹ ಸವಾಲುಗಳು ಸಾಕಷ್ಟು ಪ್ರಮಾಣದಲ್ಲಿತ್ತು. ಜೊತೆಗೆ ಇವರು ಎಲ್ಲಾ ಅಡೆತಡೆಗಳನ್ನು ಲೆಕ್ಕಿಸದೆ ದಿಟ್ಟತನದಿಂದ ಎಲ್ ಜಿ ಹಾವನೂರ್ ಅವರ ವರದಿಯನ್ನು ಜಾರಿಗೆ ತಂದರು. ಇದು ಭಾರತ ದೇಶದಲ್ಲಿಯೇ ಅತ್ಯಂತ ಅಚ್ಚುಕಟ್ಟಾದಂತಹ ವರದಿಯಾಗಿ ಇಂದಿಗೂ ಸಹ ದೇಶದಲ್ಲಿ ಹಾವನೂರು ವರದಿಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ.
ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವೆಂಕಟಸ್ವಾಮಿ ಆಯೋಗದ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗಲೇ ಇಲ್ಲ. ಅದೇ ರೀತಿ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಓ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯು ಸಹ ಜಾರಿಯಾಗಲೇ ಇಲ್ಲ.
ಈಗ ಕಾಂತರಾಜ್ ಅರಸು ವರದಿ, ತದನಂತರ ಜಯಪ್ರಕಾಶ ಹೆಗಡೆ ವರದಿಯಾಗಿ ಬದಲಾಗಿ ಅದನ್ನು ರಾಜ್ಯ ಸರ್ಕಾರ ಸ್ವೀಕರಿಸಿ, ಮತ್ತೆ 10 ವರ್ಷದ ಹಳೆಯ ಅಂಕಿಅಂಶ ಎಂಬುದನ್ನು ಪ್ರಮುಖವಾದ ಕಾರಣವನ್ನಾಗಿಸಿಕೊಂಡು ಮರು ಸರ್ವೆಗೆ ಮುಂದಾಗಿದ್ದಾರೆ.
ಒಟ್ಟಾರೆಯಾಗಿ ಹಿಂದುಳಿದ ವರ್ಗಗಳ ಮತ್ತು ದಲಿತರ ವಿಚಾರಗಳಲ್ಲಿ ಮಂಡನೆಯಾಗುವ ವರದಿಗಳು ಅಷ್ಟು ಸುಲಭವಾಗಿ ಜಾರಿಗೆ ಬರಲು ಆಗುವುದಿಲ್ಲ. ಈ ದೇಶದಲ್ಲಿ ಎಲ್ಲರಿಗೂ ಎಲ್ಲರ ಮೇಲೆ ಪ್ರೀತಿ. ಆದರೆ ತಮ್ಮ ತಮ್ಮ ಪಾಲಿನ ಮೇಲೆ ಮಾತ್ರ ವಿಶೇಷವಾದ ಆಸಕ್ತಿ ಇರುವುದರಿಂದ ಸಮಾನತೆಯ ವಿಚಾರದಲ್ಲಿ ಬಹಳಷ್ಟು ಮಂದಿಯಲ್ಲಿ ಉದಾರತೆಯ ಭಾವನೆ ಕಂಡುಬರದ ಕಾರಣದಿಂದ ಇಂತಹ ವರದಿಗಳ ಮಂಡನೆ ಅನುಷ್ಠಾನದಲ್ಲಿನ ಗೊಂದಲ ಮುಂದುವರೆದು ಘೋಷಣೆಗಳಿಗೆ ಮಾತ್ರ ಸೀಮಿತವಾಗಿ ಉಳಿದುಕೊಂಡಿರುತ್ತದೆ.
ಪ್ರತಿಯೊಂದು ಜಾತಿಗೂ ಅಭಿವೃದ್ಧಿ ನಿಗಮಗಳಿವೆ. ಮತ್ತು ಸಹಕಾರಿ ಇಲಾಖೆಗಳಿಂದ ಮಾನ್ಯತೆ ಪಡೆದ ಜಾತಿಯ ಸಂಘಗಳಿವೆ. ರಾಜ್ಯ ಸರ್ಕಾರ ತಮ್ಮ ತಮ್ಮ ಪಂಗಡದವರ ಜಾತಿಯ ಸಮೀಕ್ಷೆಯನ್ನು ನಡೆಸಿ ಮಾಹಿತಿಯನ್ನು ನೀಡಲು ಇವರುಗಳಿಗೆ ಸಂಪೂರ್ಣವಾಗಿ ಅಧಿಕಾರವನ್ನು ನೀಡಿ, ಅವರೇ ತಮ್ಮ ತಮ್ಮ ಜಾತಿಯ ಒಟ್ಟು ಜನಸಂಖ್ಯೆಯ ಅಂಕಿ ಅಂಶವನ್ನು ಕೊಡುವ ವ್ಯವಸ್ಥೆಯನ್ನ ಮಾಡಿದರೆ ಗೊಂದಲಗಳು ನಿರ್ಮಾಣವಾಗುವುದಿಲ್ಲ. ಏಕೆಂದರೆ ಅವರು ಕೊಡುವ ಅಂಕಿಅಂಶಗಳಿಗೆ ಅವರುಗಳೆ ಜವಾಬ್ದಾರರಾಗಿರುತ್ತಾರೆ. ಅಂಕಿಅಂಶಗಳು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಬೇಕು.
ಈಗ ನಡೆಸುವ ಸಮೀಕ್ಷೆ ಕೇವಲ ಜಾತಿಯ ಸಮೀಕ್ಷೆ ಆಗಿರದೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಒಳಗೊಂಡ ವೈಜ್ಞಾನಿಕ ಸಮೀಕ್ಷೆ ಆಗಿರಲಿ. ಇದರಿಂದ ಸಾಕಷ್ಟು ಸಂಗತಿಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಿರುತ್ತದೆ.
ಆಯೋಗಗಳು ನೀಡುವ ವರದಿಗಳನ್ನು ಅನುಷ್ಠಾನ ಮಾಡಲು ಸಂವಿಧಾನದಲ್ಲಿ ಅವಕಾಶಗಳು ಇರುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಿ. ಮೀಸಲಾತಿಯ ಪ್ರಮಾಣದಲ್ಲಿ ನಿರ್ಧಾರ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲದ ಮೇಲೆ ವರದಿಗಳ ಅನುಷ್ಠಾನಕ್ಕಾಗಿ ಮತ್ತೆ ಕೇಂದ್ರ ಸರ್ಕಾರದ ಅನುಮತಿಗೆ ಕಾಯಬೇಕಾಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು



