ಸಾಮಾಜಿಕ ನ್ಯಾಯದ ಹರಿಕಾರ ವಿ.ಪಿ.ಸಿಂಗ್

4 years ago

25 ಜೂನ್ 1931ರಂದು ಜನಿಸಿದ್ದ ಮಾಜಿ ಪ್ರಧಾನಿ, ಸಾಮಾಜಿಕ ನ್ಯಾಯದ ಹರಿಕಾರ ವಿ.ಪಿ.ಸಿಂಗ್ ಅವರು 27 ನವೆಂಬರ್ 2008ರಂದು ನಿಧನರಾದರು.

ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದಾಗ ದಶಕಗಳ ಕಾಲ ಧೂಳು ಹಿಡಿದು ಮೂಲೆ ಸೇರಿದ್ದ ‘ಮಂಡಲ್ ಆಯೋಗ’ದ ಶಿಫಾರಸನ್ನು ಜಾರಿ ಮಾಡುವ ಮೂಲಕ ಹಿಂದುಳಿದ ಜಾತಿಗಳಿಗೆ (OBC) ಶೇ.27ರಷ್ಟು ಮೀಸಲಾತಿ ಕಲ್ಪಿಸಿದರು. ಆ ಮೂಲಕ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂಬೇಡ್ಕರ್ ಮೀಸಲಾತಿ ಮೂಲಕ ಮಾಡಿದ ಸಾಮಾಜಿಕ ನ್ಯಾಯದ ಕ್ರಾಂತಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ದರು.

ವಿ.ಪಿ.ಸಿಂಗ್ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಹಲವು ವಿಷಯಗಳಲ್ಲಿ ಹೋಲುತ್ತಾರೆ. ಸಿಂಗ್ ಮತ್ತು ಅರಸರು ಹಿಂದುಳಿದ ಜಾತಿಗಳಲ್ಲಿ ಹುಟ್ಟದಿದ್ದರೂ ರಾಜಕೀಯ ನಾಯಕರುಗಳಾಗಿ ಹಿಂದುಳಿದ ಜಾತಿಗಳ ಏಳಿಗೆಗಾಗಿ ಶ್ರಮಿಸಿದರು. ಆದರೆ ಅದಕ್ಕಾಗಿ ಈ ಇಬ್ಬರೂ ಬಹಳ ದೊಡ್ಡ ಬೆಲೆಯನ್ನು ತೆತ್ತರು. ತಮ್ಮ ರಾಜಕೀಯ ಜೀವನವನ್ನೆ ಅಂತ್ಯಗೊಳಿಸಿಕೊಂಡರು.

ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದರ ವಿರುದ್ಧ ಈ ದೇಶದ ಮೇಲ್ಜಾತಿಗಳು ನಡೆಸಿದ ಹೋರಾಟದ ಪಿತೂರಿಗೆ ವಿ.ಪಿ.ಸಿಂಗ್ ಬಲಿಯಾದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮ‌ೂಲಕ ಮೇಲ್ಜಾತಿಗಳ ಪ್ರಾಬಲ್ಯಕ್ಕೆ ಪೆಟ್ಟು ಕೊಟ್ಟಿದ್ದನ್ನು, ಸಾಮಾಜಿಕ ಚಲನೆಗೆ ಚಾಲನೆ ಕೊಟ್ಟಿದ್ದನ್ನು ವರ್ಣಾಶ್ರಮ ಧರ್ಮವನ್ನು ಪಾಲಿಸುವ ಮೇಲು ಜಾತಿಗಳು ಸಹಿಸಲಿಲ್ಲ. ಅದಕ್ಕಾಗಿಯೇ ಮೇಲುಜಾತಿಯ ಜನ ವ್ಯವಸ್ಥಿತವಾಗಿ ವಿ.ಪಿ.ಸಿಂಗರನ್ನು ಜನರ ಕಣ್ಣಲ್ಲಿ ದೇಶದ ಅತ್ಯಂತ ಕೆಟ್ಟ ಪ್ರಧಾನಿಯೆನ್ನುವಂತೆ ಚಿತ್ರಿಸಿದರು, ಗೇಲಿ ಮಾಡಿದರು. ಮೇಲ್ಜಾತಿಯ ರಾಜಕಾರಣಿಗಳು, ಮಾಧ್ಯಮಗಳು ಸಿಂಗ್ ಅವರನ್ನು ವ್ಯವಸ್ಥಿತ ಸಂಚು ಮಾಡಿ ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದವು. ಸಂಘಪರಿವಾರ ಮಂಡಲ್ ಆಯೋಗದ ಶಿಪಾರಸ್ಸುಗಳನ್ನು ಜಾರಿ ಮಾಡುವುದರ ವಿರುದ್ಧ ಕಮಂಡಲ ಚಳುವಳಿ ಪ್ರಾರಂಭಿಸಿ ‘ರಾಮ ಜನ್ಮಭೂಮಿ’ ವಿವಾದದ ಮೂಲಕ ದೇಶದಲ್ಲಿ ಕೋಮುದ್ವೇಷ ಹರಡುವಲ್ಲಿ ಯಶಸ್ವಿಯಾಯಿತು.

ಅದರೆ ವಿ.ಪಿ.ಸಿಂಗ್ ಯಾವ ಹಿಂದುಳಿದ ಸಮುದಾಯಗಳನ್ನು ಕೈಹಿಡಿದು ಮೇಲೆತ್ತಲು ಪ್ರಯತ್ನಿಸಿದರೊ ಅದೇ ಹಿಂದುಳಿದ ವರ್ಗಗಳು ಸಿಂಗ್‌ರನ್ನು ಕೈಬಿಟ್ಟವು ಎನ್ನುವುದು ಈ ದೇಶದ ದೊಡ್ಡ ದುರಂತಗಳಲ್ಲೊಂದು. ಮೇಲ್ಜಾತಿಯ ಮಾಧ್ಯಮಗಳು ಸೃಷ್ಟಿಸಿದ ಮಾಯಾಜಾಲಕ್ಕೆ ಸಿಕ್ಕಿ ಹಿಂದುಳಿದ ವರ್ಗದ ಯುವಕರು ಮಂಡಲ್ ವಿರೋಧಿ ಚಳುವಳಿಯ ಭಾಗವಾಗಿ ವಿ.ಪಿ.ಸಿಂಗರ ವಿರುದ್ಧವೇ ಹೋರಾಟ ಮಾಡಿದರು. ಮೇಲ್ಜಾತಿಗಳು ವಿ.ಪಿ.ಸಿಂಗರನ್ನು ಕೈಬಿಟ್ಟ ಮೇಲೆ ಹಿಂದುಳಿದ ವರ್ಗಗಳಿಗೆ ಸೇರಿದ ರಾಜಕಾರಣಿಗಳು ವಿ.ಪಿ.ಸಿಂಗ್‌ರನ್ನು ಹಿಂದುಳಿದ ವರ್ಗಗಳ ನಾಯಕ ಎಂದು ಒಪ್ಪಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಮೇಲ್ಜಾತಿಗೆ ಸೇರಿದ ವಿ.ಪಿ.ಸಿಂಗ್ ಕೈಗೆ ನಾಯಕತ್ವ ಸಿಕ್ಕರೆ ತಮ್ಮ ಅಸ್ತಿತ್ವಕ್ಕೆ ಪೆಟ್ಟು ಬೀಳಬಹುದು ಎನ್ನುವ ಆತಂಕ ಹಿಂದುಳಿದ ಜಾತಿಗಳ ರಾಜಕೀಯ ನಾಯಕರನ್ನು ಕಾಡಿರಬಹುದು. ಅಷ್ಟು ದೊಡ್ಡ ಕ್ರಾಂತಿಗೆ ಕಾರಣರಾದ ಸಿಂಗ್ ಕೊನೆಗೆ ತಮ್ಮ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲಾಗದೆ ರಾಜಕೀಯದಿಂದಲೆ ನಿವೃತ್ತರಾಗಬೇಕಾಯಿತು.

ಈ ದೇಶದ ಮೇಲ್ಜಾತಿಗಳು ಮೀಸಲಾತಿಯನ್ನು ನೆಪವಾಗಿಟ್ಟುಕೊಂಡು ದಲಿತರ ವಿರುದ್ಧ ಹಿಂದುಳಿದ ಜಾತಿಗಳನ್ನು ನಿರಂತರವಾಗಿ ಎತ್ತಿಕಟ್ಟುತ್ತಾ ಬಂದಿವೆ. ಹಾಗಾಗಿಯೇ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಕ್ಕಿ ಮೂವತ್ತು ವರ್ಷಗಳ ಮೇಲಾಗಿದ್ದರೂ ಇವತ್ತಿಗೂ ಕೇವಲ SC/STಗಳಿಗೆ ಮಾತ್ರ ಮೀಸಲಾತಿ ಇದೆ ಅಂತಲೆ ನಂಬಿಕೊಂಡು ತಳಸಮುದಾಯಗಳ ಮೇಲೆ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು ಅಸಹನೆ, ದ್ವೇಷ ಬೆಳೆಸಿಕೊಂಡಿರುತ್ತಾರೆ. ಈ ಅಸಹನೆಗೆ ಜಾತಿ ಪದ್ಧತಿ ಸೃಷ್ಟಿಸಿರುವ ಶ್ರೇಣೀಕರಣದ ಮೇಲು-ಕೀಳಿನ ಮನಸ್ಥಿತಿ ಕೂಡ ಕಾರಣ. ಮೀಸಲಾತಿಯ ಮೂಲಕ ಹಿಂದುಳಿದ ಜಾತಿಗಳಿಗೆ ಸಿಕ್ಕಿರುವ ಸಾಮಾಜಿಕ ನ್ಯಾಯದ ಹಕ್ಕಿನ‌ ಬಗ್ಗೆ ಆ ಜಾತಿಗಳಲ್ಲಿ ಇವತ್ತಿಗೂ ಅರಿವು ಮೂಡಿದಂತಿಲ್ಲ. ಹಿಂದುಳಿದ ಜಾತಿಗಳಿಗೆ ತಮಗೆ ಸಿಕ್ಕಿರುವ 27% ಮೀಸಲಾತಿಯ ಬಗ್ಗೆ ನಿಜವಾಗಿಯೂ ಅರಿವಿದ್ದಿದ್ದರೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಮೀಸಲಾತಿಯ ಮೂಲ ಉದ್ದೇಶವನ್ನೆ ಗೇಲಿ ಮಾಡುವ ಸಂದರ್ಭ ಈ ದೇಶದಲ್ಲಿ ಸೃಷ್ಟಿಯಾಗುತ್ತಿರಲಿಲ್ಲ. EWS ಅಡಿಯಲ್ಲಿ ಮೇಲುಜಾತಿಗಳಿಗೆ 10% ಮೀಸಲಾತಿ ಕೊಟ್ಟಾಗ ಈಗಾಗಲೇ ಮೀಸಲಾತಿ ಅಡಿಯಲ್ಲಿ ಇರುವ ಹಿಂದುಳಿದ ಜಾತಿಗಳ ಜನ ತಮಗೆ ಹೊಸದಾಗಿ ಮೀಸಲಾತಿ ಸಿಕ್ಕಿತು ಅನ್ನುವ ಭ್ರಮೆಯಲ್ಲಿ ಸಂಭ್ರಮಿಸಿಬಿಟ್ಟರು! ಇದಕ್ಕಿಂತ ದೊಡ್ಡ ದುರಂತ ಇನ್ನೊಂದು ಇದೆಯೇ?

ಸದಾ ರಾಜಕೀಯ ಅಧಿಕಾರದ ಸುತ್ತಲೇ ಗಿರಕಿ ಹೊಡೆಯುವ ಹಿಂದುಳಿದ ಜಾತಿಗಳ ರಾಜಕಾರಣಿಗಳು ಕೇವಲ ರಾಜಕೀಯ ಅಧಿಕಾರವನ್ನು ಪಡೆಯುವುದನ್ನೆ ಗುರಿಯಾಗಿಸಿಕೊಂಡು ಸಾಮಾಜಿಕ ಚಳುವಳಿಯ ಅಗತ್ಯವನ್ನೆ ಮರೆತು ಹೋಗಿದ್ದಾರೆ. ಹಾಗಾಗಿಯೇ ಶೂದ್ರ ಸಮುದಾಯಗಳ ಯುವಕರು ಸಂಘಪರಿವಾರದ ಕಾಲಾಳುಗಳಾಗಿ ಬದಲಾಗಿದ್ದಾರೆ. ಹಿಂದುಳಿದ ಜಾತಿಗಳ ಯುವಕರು ಹಿಂದುತ್ವದ ಕಡೆಗೆ ಆಕರ್ಷಿತರಾಗಲು ಇರುವ ಪ್ರಮುಖ ಕಾರಣಗಳಲ್ಲಿ ಮೀಸಲಾತಿಯ ಕುರಿತ ತಪ್ಪು ಕಲ್ಪನೆ ಕೂಡ ಒಂದು. ಈ ಯುವಕರು ತಮಗೆ ಅರಿವಿಲ್ಲದೆಯೆ ಮೀಸಲಾತಿ ವಿರೋಧಿಗಳಾಗಿದ್ದಾರೆ. ತಮ್ಮ ವಿರುದ್ದ ತಾವೇ ಹಿಂದುತ್ವದ ಅಜೆಂಡಾವನ್ನು ಜಾರಿಗೊಳಿಸಿಕೊಳ್ಳುತ್ತಿದ್ದಾರೆ. ಇನ್ನು ಮೇಲಾದರೂ ಹಿಂದುಳಿದ ಜಾತಿಗಳ ರಾಜಕಾರಣಿಗಳು ಮತ್ತು ಬುದ್ದಿಜೀವಿಗಳು ವಿ.ಪಿ.ಸಿಂಗ್ ಅಂತವರ ಬಗ್ಗೆ, ಮಂಡಲ್ ಚಳುವಳಿಯ ಮಹತ್ವದ ಬಗ್ಗೆ ಅರಿವು ಮೂಡಿಸಿ ವಿ.ಪಿ.ಸಿಂಗ್ ಅಂತವರಿಗೆ ಇತಿಹಾಸ ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಮುಂದಾಗಬೇಕು. ಆಗ ಮಾತ್ರ ಹಿಂದುಳಿದ ವರ್ಗಗಳು ಮೇಲ್ಜಾತಿಗಳ ಸಂಚಿಗೆ ಬಲಿಯಾಗುವುದನ್ನು, ತಳಸಮುದಾಯಗಳನ್ನು ದ್ವೇಷಿಸುವುದನ್ನು ತಡೆಯಬಹುದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿ ನಿಜವಾದ ‘ಬಹುಜನ’ ರಾಜಕಾರಣವನ್ನು ಕಟ್ಟಬಹುದು.

ವಿ.ಪಿ.ಸಿಂಗರ ಬಗ್ಗೆ ಮರೆಯಬಾರದ ಇನ್ನೊಂದು ವಿಷಯ ಅಂಬೇಡ್ಕರ್ ಅವರ ಭಾವಚಿತ್ರ ಪಾರ್ಲಿಮೆಂಟ್‌ ಭವನಕ್ಕೆ ಬರುವುದಕ್ಕೆ, ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮರಾಠಿಯಿಂದ ದೇಶದ ಬೇರೆ ಭಾಷೆಗಳಲ್ಲಿ ದೊರೆಯುವುದಕ್ಕೆ ಕಾರಣರಾದವರು ಇದೆ ವಿ.ಪಿ.ಸಿಂಗ್.

ಈ ದೇಶದ ತಳಸಮುದಾಯಗಳ ಏಳಿಗೆಗೆ ಶ್ರಮಿಸಿದ ಈ ‘ಸಾಮಾಜಿಕ ನ್ಯಾಯ’ದ ಹರಿಕಾರನನ್ನು ಈ ದೇಶದ ಹಿಂದುಳಿದ ವರ್ಗಗಳು ಮರತೇ ಹೋಗಿವೆ.

ಜಡ್ಡುಗಟ್ಟಿರುವ ಈ ದೇಶದಲ್ಲಿ ಮಹತ್ವದ ಸಾಮಾಜಿಕ ಚಲನೆಗೆ ಕಾರಣರಾದವರ ಬಗ್ಗೆ ನಾವು ಇಷ್ಟು ಕೃತಘ್ನರಾಗಬಾರದು.

ವಿ.ಪಿ.ಸಿಂಗರಿಗೆ ನಮಸ್ಕಾರ

  • ವಿ.ಎಲ್.ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರ

Leave a Reply