ಆರ್ ಎಸ್ ಎಸ್ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶನ

10 months ago

ಬೆಂಗಳೂರು: ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ಆರ್. ಎಸ್.ಎಸ್. ನಾಯಕರೊಬ್ಬರ ಮನೆಗೆ ಪೊಲೀಸರು ಭೇಟಿ ನೀಡಿ ಫೋಟೋ ತೆಗೆಸಿಕೊಂಡು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಎಸ್ಪಿ ಅರುಣ್ ಅವರಿಗೆ  ಹೈಕೋರ್ಟ್ ನೊಟೀಸ್ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ಸೂಕ್ತ ದಾಖಲೆ ಸಲ್ಲಿಸುವಂತೆ ತಾಕೀತು ಮಾಡಿದೆ.

ಕಾನೂನು ಹೊರತಾಗಿ ಆರ್ ಎಸ್ಎಸ್ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಘಟನೆ ನಂತರ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು. ಹಿಂಸಾಚಾರ ತಡೆಗೆ ಪೊಲೀಸರು ವಿವಿಧ ಕ್ರಮ ಕೈಗೊಂಡಿದ್ದರು. ಆದರೆ, ಯಾವುದೇ ಪ್ರಕರಣದಲ್ಲಿ ಶಾಮೀಲಾಗಿರದ ಆರ್ ಎಸ್ಎಸ್ ಹಾಗೂ ಹಿಂದೂ ಮುಖಂಡರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಫೋಟೊ ತೆಗೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರ ಈ ನಡೆಗೆ ಸಂಘ ಪರಿವಾರ ಮತ್ತು ಬಿಜೆಪಿ ಹಾಗೂ ಬಿಜೆಪಿ ಬೆಂಬಲಿಗರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕರ್ನಾಟಕ ಪೊಲೀಸ್ ರಾಜ್ಯವಾಗುವತ್ತ ಸಾಗುತ್ತಿದೆಯಾ ಎಂದು ಹಿಂದುತ್ವ ಪರ ನಾಯಕರು ಪ್ರಶ್ನಿಸಿದ್ದರು.

ಈ ವಿಚಾರವಾಗಿ ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು ತಮ್ಮ ಅರ್ಜಿಯಲ್ಲಿ ಜೂನ್ 1 ರಂದು ನಮ್ಮ ಉಪ್ಪಿನಂಗಡಿ ಮನೆಗೆ ರಾತ್ರಿ ಬಂದಿದ್ದ ಪೊಲೀಸರು ಫೋಟೊ ತೆಗೆದು ಅಪ್ಲೋಡ್ ಮಾಡಿದ್ದರು. ನಮಗೆ ಹಿರಿಯ ಅಧಿಕಾರಿಗಳ ಆದೇಶವಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ದಾಖಲೆ ತೋರಿಸಿರಲಿಲ್ಲ ಎಂದಿದ್ದರು.

ಅಲ್ಲದೇ ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಯು.ಜಿ. ರಾಧಾ ಹೈಕೋರ್ಟ್ ಮೊರೆ ಹೋಗಿದ್ದರು.

ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದು, ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್‌ ದತ್ ಯಾದವ್ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿದರು.

Leave a Reply