ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಷ್ಠಿತ `ಜಾಗತಿಕ ಹೂಡಿಕೆದಾರರ ಸಮಾವೇಶ’ಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ನಿರೀಕ್ಷೆಯೊಂದಿಗೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ತೆರೆ ಬಿದ್ದಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮೇಳದಲ್ಲಿ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣತರು ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಟ್ಟದ ನೀತಿ ನಿರೂಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಮಾವೇಶ ಬಂಡವಾಳ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ತಾಣ ಎನ್ನುವ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಗಣ್ಯಾತಿಗಣ್ಯರು ಮತ್ತು ರಾಜ್ಯ ಸಚಿವ ಸಂಪುಟದ ಹತ್ತಾರು ಸಚಿವರು ಹಾಜರಿದ್ದ ಸಮಾರೋಪ ಸಮಾರಂಭದಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್, 2025-30ರ ಅವಧಿಯವರೆಗಿನ ಪರಿಸರಸ್ನೇಹಿ ಸಾರಿಗೆ ನೀತಿಯನ್ನು ಬಿಡುಗಡೆಗೊಳಿಸಿದರು. ಜತೆಗೆ ಇದೇ ವೇದಿಕೆಯಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉದ್ಯಮ ಸಂಸ್ಥೆಗಳಿಗೆ `ವೆಂಚುರೈಸ್ ಚಾಲೆಂಜ್’ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಇದೇ ಪ್ರಥಮ ಬಾರಿಗೆ ಸಾಧಕ ಕಂಪನಿಗಳಿಗೆ `ಇನ್ವೆಸ್ಟ್ ಕರ್ನಾಟಕ’, ಎಸ್ಎಂಇ ಕನೆಕ್ಟ್, ವೆಂಚುರೈಸ್ ಚಾಲೆಂಜ್ ಪುರಸ್ಕಾರಗಳನ್ನು ಪ್ರದಾನ ಮಾಡಿದ್ದು, ಈ ಸಮಾವೇಶದ ವಿಶೇಷವಾಗಿತ್ತು.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೈಗಾರಿಕೆ ಸಚಿವ ಎಂ ಬಿ ಪಾಟೀಲ, ಮೂರು ವರ್ಷಗಳ ನಂತರ ನಡೆದ ಹೂಡಿಕೆದಾರರ ಸಮಾವೇಶ ಒಂದು ನಿರ್ಣಾಯಕ ಉದ್ದೇಶದೊಂದಿಗೆ ನಡೆದಿದೆ ಎಂದರು.
ನಾವು ಕೈಗಾರಿಕಾ ಬೆಳವಣಿಗೆಯ ಸಾಂಪ್ರದಾಯಿಕ ಮಾದರಿಗಳಿಂದ ಹೊರಬಂದು, ಆಧುನಿಕ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ಬೆಳೆಸಲು ಸಿದ್ಧವಾಗಿದ್ದೇವೆ ಎನ್ನುವ ನಮ್ಮ ಇಚ್ಛಾಶಕ್ತಿಯನ್ನು ತೋರಿದ್ದೇವೆ. ಇದಕ್ಕೆ ತಕ್ಕಂತೆ ನೂತನ ಕೈಗಾರಿಕಾ ನೀತಿ, ಪರಿಸರಸ್ನೇಹಿ ಸಾರಿಗೆ ನೀತಿ, ಎಐ ಆಧರಿತ ಏಕಗವಾಕ್ಷಿ ಪೋರ್ಟಲ್ ಮುಂತಾದವುಗಳನ್ನು ಹೂಡಿಕೆದಾರರಿಗೆ ಕೊಡುಗೆಯಾಗಿ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ, ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಸುಗಮ ಸಂಚಾರ ವ್ಯವಸ್ಥೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೀಳಲಿಗೆ ಮುಂತಾದ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸುವ 287 ಕಿ.ಮೀ. ಉದ್ದದ ವರ್ತುಲ ರೈಲು ಯೋಜನೆಗೆ ಡಿಪಿಆರ್ ಅಂತಿಮ ಹಂತದಲ್ಲಿದೆ. ದೇವನಹಳ್ಳಿಯಲ್ಲಿ ಮೆಗಾ ರೈಲ್ವೆ ಟರ್ಮಿನಲ್ ಕೂಡ ಅಸ್ತಿತ್ವಕ್ಕೆ ಬರಲಿದೆ. ಒಟ್ಟಾರೆ ರಾಜ್ಯದಲ್ಲಿ ರೈಲ್ವೆ ಜಾಲವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸಲಾಗುತ್ತಿದ್ದು, ಈ ವರ್ಷ 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಡಲಾಗಿದೆ. 2030ರ ವೇಳೆಗೆ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ ಆಗಲಿದೆ ಎಂದರು.
ರಾಜ್ಯದಲ್ಲಿ ಕೇಂದ್ರದ ಸಹಯೋಗದೊಂದಿಗೆ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಯು 2027ರ ಕೊನೆಯ ಹೊತ್ತಿಗೆ ಮುಗಿಯುವ ನಿಚ್ಚಳ ಲಕ್ಷಣಗಳು ಕಾಣುತ್ತಿವೆ. ಜಿಲ್ಲಾ ಕೇಂದ್ರಗಳ ಹೊರವಲಯದಲ್ಲಿ ಭೂಮಿ, ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಿದರೆ ಕೈಗಾರಿಕಾ ಬೆಳವಣಿಗೆ ಮೂರು ಪಟ್ಟು ಹೆಚ್ಚಾಗಲಿದೆ. ಉದ್ಯಮಿಗಳು ಕೋಲಾರ, ತುಮಕೂರು, ಚಾಮರಾಜನಗರ, ಮೈಸೂರು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕಗಳ ಕಡೆಗೂ ಹೋಗಿ, ಬಂಡವಾಳ ಹೂಡಬೇಕು. ರಾಜ್ಯ ಮತ್ತು ಕೇಂದ್ರಗಳು ರೂಪಿಸಿರುವ ಕೈಗಾರಿಕಾ ನೀತಿಗಳು ಇದಕ್ಕೆ ಪೂರಕವಾಗಿಯೇ ಇವೆ ಎಂದರು.




