ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಕಾಲವಶರಾಗಿದ್ದಾರೆ. ಬೆಂಗಳೂರಿನ ನಾಗರ ಬಾವಿಯ ಯುನಿಟಿ ಲೈಫ್ ಆಸ್ಪತ್ರೆಯಲ್ಲಿ ಅವರು ಮುಂಜಾನೆ ನಿಧನರಾಗಿದ್ದಾರೆ.
ಬೆಳಗ್ಗೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವ ವೇಳೆ ಅವರಿ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ನಿಧನರಾಗಿದ್ದಾರೆ. ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಅವಧಿಯಿಂಧ ಇವರು ಮಾಧ್ಯಮ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಗುರುಲಿಂಗ ಸ್ವಾಮಿ ನಿಧನಕ್ಕೆ ಕಂಬನಿ ಮಿಡಿದಿರುವ ಸಿಎಂ ಬಸವರಾಜ ಬೊಮ್ಮಾಯಿ, ಆತ್ಮೀಯ ಕಿರಿಯ ಮಿತ್ರ, ಕಳೆದ ಹಲವಾರು ವರ್ಷಗಳಿಂದ ನನ್ನ ಜೊತೆ ಒಡನಾಟ ಹೊಂದಿ, ನನ್ನ ಮಾಧ್ಯಮ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಗುರುಲಿಂಗಸ್ವಾಮಿ ಹೊಳಿಮಠ ಅವರು ಇಂದು ಅಕಾಲಿಕ ನಿಧನರಾದ ವಿಷಯ ತಿಳಿದು ತೀವ್ರ ಆಘಾತ ಹಾಗೂ ದುಃಖಿತನಾಗಿದ್ದೇನೆ. ಒಬ್ಬ ದಕ್ಷ ಹಾಗೂ ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಲವು ಸಾಧನೆಗೈದು ಇನ್ನೂ ಹೆಚ್ಚಿನದನ್ನು ಸಾಧಿಸಲು ಹಂಬಲ ಹೊಂದಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕಂಬನಿ ಮಿಡಿದಿದ್ದು, ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾಗಿದ್ದ ಆತ್ಮೀಯ ಪತ್ರಕರ್ತ ಗುರುಲಿಂಗ ಸ್ವಾಮಿ ಹೋಳಿಮಠ ಅವರ ಅನಿರೀಕ್ಷಿತ ನಿಧನದಿಂದ ಆಘಾತಗೊಂಡಿದ್ದೇನೆ. ಒಂದೆರಡು ಬಾರಿ ನನ್ನನ್ನು ಸಂದರ್ಶಿಸಿದ್ದ ಗುರುಲಿಂಗ ಸ್ವಾಮಿಯವರ ವಿನಯವಂತಿಕೆ ನನಗೆ ಇಷ್ಟವಾಗಿತ್ತು. ಮೃತರ ಕುಟುಂಬದ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದಾರೆ.




