ಮಂಗಳೂರು: ಕ್ವಿಟ್ ಇಂಡಿಯಾ ಚಳುವಳಿಯ ಸವಿನೆನಪಿನಲ್ಲಿ ರೈತ ಕಾರ್ಮಿಕರ ಜೊತೆಯಲ್ಲಿ ಬೃಹತ್ ಹೋರಾಟವು ಆಗಸ್ಟ್ 9 ರಂದು ದೇಶಾದ್ಯಂತ ನಡೆಯಲಿದೆ. ಅದರ ಪ್ರಚಾರಾಂದೋಲನದ ಭಾಗವಾಗಿ ಮಂಗಳೂರಿನಲ್ಲಿ CITU ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ CITU ದ.ಕ. ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ದೇಶವನ್ನಾಳುವ ನರೇಂದ್ರ ಮೋದಿ ಸರಕಾರ ಪ್ರತೀ ಹೆಜ್ಜೆಯಲ್ಲಿಯೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶಗೊಳಿಸಿದೆ ಎಂದು ಆರೋಪಿಸಿದರು.
ಜನತೆಯ ಹಿತ ಕಾಪಾಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಧಾರೆ ಎರೆದು ಕೊಡುತ್ತಿದೆ. ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಹೊರಟ ಕೇಂದ್ರ ಸರಕಾರ ದೇಶದ ಕ್ರಷಿರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
CITU ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಅಂದು ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ದೇಶದ ಸಂಪತ್ತನ್ನು ದೋಚಿದ ಬ್ರಿಟೀಷರ ವಿರುದ್ದ ದೇಶದ ಜನತೆ ಧೀರ ಹೋರಾಟ ನಡೆಸಿದರೆ, ಇಂದು ನಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿರುವ ನೂರಾರು ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ದೇಶದ ರೈತ ಕಾರ್ಮಿಕರು ಒಂದಾಗಿ ಪ್ರಬಲ ಚಳುವಳಿ ರೂಪಿಸಬೇಕಾಗಿದೆ ಎಂದರು.
ಪಾದಯಾತ್ರೆಯಲ್ಲಿ CITU ಜಿಲ್ಲಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಜಯಲಕ್ಷ್ಮಿ, ಸಂತೋಷ್ ಆರ್.ಎಸ್, ಅಶೋಕ್ ಸಾಲ್ಯಾನ್, ಕೃಷ್ಣ ತಣ್ಣೀರುಬಾವಿ, ಅನ್ವರ್ ಶೇಕ್ ಮುಂತಾದವರು ಭಾಗಹಿಸಿದ್ದರು.




