ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಪ್ರತಿಭಟನೆ

5 years ago

ದಕ್ಷಿಣ ಕನ್ನಡ: ದ.ಕ.ಜಿಲ್ಲೆಯ ಖಾಸಗೀ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರ ಖಂಡಿಸಿ ಮಂಗಳೂರು ನಗರದಲ್ಲಿ CPIM, DYFI, JMS ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ಜಿಲ್ಲಾಡಳಿತ ಹಾಗೂ ಬಸ್ ಮಾಲಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ರು, ಕೊರೋನಾ ಸಂಕಷ್ಟದ ಕಾಲದಲ್ಲಿ ಜನತೆಯ ಬದುಕೇ ದುಸ್ತರವಾಗಿದ್ದು, ಇದೇ ಸಂದರ್ಭದಲ್ಲಿ ಬಸ್ ಪ್ರಯಾಣ ದರವನ್ನೂ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಬಾರಿ ಮಾಸ್ಕ್ ಹಾಕದ ಅಮಾಯಕ ಯುವಕನ ಮೇಲೆ ದಾಳಿ ನಡೆಸಿ, ತಾನು ಜನರ ಪರ ಎಂಬಂತೆ ಕಪಟ ನಾಟಕವಾಡಿದ ಜಿಲ್ಲಾಧಿಕಾರಿಗಳಿಗೆ, ಬಸ್ ಪ್ರಯಾಣ ದರ ಏರಿಕೆಯಿಂದ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತೆ ಎಂಬ ಕನಿಷ್ಠ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.

ಬಸ್ ಮಾಲಕರು 20% ಹೆಚ್ಚಳಕ್ಕೆ ಆಗ್ರಹಿಸಿದರೆ, ಜಿಲ್ಲಾಧಿಕಾರಿಗಳು 50%ಕ್ಕೂ ಅಧಿಕ ದರ ಏರಿಕೆಗೆ ಅನುಮತಿ ನೀಡಿರುವ ಮೂಲಕ ಬಸ್ ಮಾಲಕರ ಲಾಬಿಗೆ ದ.ಕ. ಜಿಲ್ಲಾಡಳಿತವು ಸಂಪೂರ್ಣ ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಬಸ್ ಪ್ರಯಾಣ ದರ ಏರಿಕೆ ಸಂಬಂಧಿಸಿ ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕಾದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲನ್ನು ಕೇಳದೆ ಕೇವಲ ಬಸ್ ಮಾಲಕರ ಪರವಾಗಿ ವರ್ತಿಸಿರುವುದು ಭಾರೀ ಸಂಶಯಕ್ಕೆಡೆಮಾಡಿದೆ ಎಂದು ಆರೋಪಿಸಿದರು.

DYFI ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಪ್ರತಿಯೊಂದು ಸಂದರ್ಭದಲ್ಲೂ ಸರಕಾರದ ಪರವಾಗಿ ತುತ್ತೂರಿ ಬಾರಿಸುವ ಬಸ್ ಮಾಲಕರು ಯಾವತ್ತಾದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯ ವಿರುದ್ದ ದ್ವನಿ ಎತ್ತಿದ್ದಾರೆಯೇ? ನೆರೆಯ ಕೇರಳ ರಾಜ್ಯ ಸರಕಾರವು ಖಾಸಗೀ ಬಸ್ ಮಾಲಕರಿಗೆ 4 ತಿಂಗಳು ತೆರಿಗೆ ವಿನಾಯಿತಿ ನೀಡಿದಂತೆ, ಕರ್ನಾಟಕ ರಾಜ್ಯ ಸರಕಾರವೂ ತಮಗೆ ನೀಡಬೇಕೆಂದು ಯಾಕೆ ಒತ್ತಾಯಿಸುತ್ತಿಲ್ಲ? ಅದನ್ನು ಬಿಟ್ಟು ಜನಸಾಮಾನ್ಯರ ಬದುಕಿಗೆ ಕೊಡಲಿಪೆಟ್ಟು ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕು, ಅಲ್ಲಿಯವರೆಗೆ ಏರಿಸಿದ ಪ್ರಯಾಣ ದರವನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ದಯಾನಂದ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಾಬು ದೇವಾಡಿಗ, JMS ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, DYFI ಜಿಲ್ಲಾ ನಾಯಕರಾದ ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಸಾಮಾಜಿಕ ಕಾರ್ಯಕರ್ತರಾದ ಜೆರಾಲ್ಡ್ ಟವರ್, ಅಶುಂತ ಡಿಸೋಜ, CITU ಮುಖಂಡರಾದ ಸಂತೋಷ್ ಆರ್.ಎಸ್, ನಾಗೇಶ್ ಕೋಟ್ಯಾನ್ ಮೊದಲಾದವರು ಭಾಗವಹಿಸಿದ್ದರು.

 ಪ್ರತಿಭಟನೆಯ ನೇತೃತ್ವವನ್ನು CPIM ಮಂಗಳೂರು ನಗರ ಮುಖಂಡರಾದ ದಿನೇಶ್ ಶೆಟ್ಟಿ, ಪ್ರದೀಪ್, ಮನೋಜ್, ಅಶೋಕ್ ಸಾಲ್ಯಾನ್, DYFI ನಾಯಕರಾದ  ನೌಶಾದ್ ಬೆಂಗರೆ, ಜಗದೀಶ್ ಬಜಾಲ್, JMS ಮುಖಂಡರಾದ ಜಯಲಕ್ಷ್ಮಿ, ಜೆಸಿಂತ ಡಿಸೋಜ ಮುಂತಾದವರು ವಹಿಸಿದ್ದರು.

Leave a Reply