ಕಾರವಾರ: ಕೊರೊನಾ ಮೂರನೆ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಸರ್ಕಾರದ ಪ್ರಾಥಮಿಕ ಕೆಲಸವಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಕೇರಳ ಗಡಿಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಕೊವಿಡ್ ಪರೀಕ್ಷಾ ನೆಗೆಟಿವ್ ವರದಿ ಬಂದವರನ್ನು ಹಾಗೂ ಎರಡೂ ಡೋಸ್ ಲಸಿಕೆ ಪಡೆದವರನ್ನು ಮಾತ್ರ ಗಡಿ ಒಳಗೆ ಬಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈಗಾಗಲೇ ನಾವು ಸಾಕಷ್ಟು ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ರಾಜ್ಯದಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ, ಇದು ಮತ್ತೆ ಮರುಕಳಿಸದಂತೆ ತಡೆಯಬೇಕಾದ ಹೊಣೆ ರಾಜ್ಯ ಸರ್ಕಾರದ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ನಿರ್ವಹಣೆ ಬಿಟ್ಟು ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗುವುದಕ್ಕೆ ನಮ್ಮ ತಕರಾರಿಲ್ಲ, ಆದರೆ ಪದೇ ಪದೇ ಹೋಗುವ ಅಗತ್ಯವೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಲ್ಲವೇ? ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದಾರೆ. ಬಿಜೆಪಿಯ ಒಬ್ಬ ಶಾಸಕನೂ ತನ್ನ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಇವರಿಗೆ ಜನರ ಜೀವಕ್ಕಿಂತ ಮಂತ್ರಿಯಾಗುವುದು ಮುಖ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಲಾಕ್ ಡೌನ್ ಬಡವರ ಬದುಕು ಕಸಿಯುತ್ತದೆ. ಲಾಕ್ ಡೌನ್ ಹೇರುವಂತ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಳೆದೆರಡು ದಿನಗಳಿಂದ ಸೋಂಕಿನ ಪ್ರಮಾಣ 2,000 ಸಮೀಪದಲ್ಲಿದೆ. ಇದು 2,000 ದ ಗಡಿ ದಾಟಿದರೆ ಮೂರನೆ ಅಲೆ ಶುರುವಾಗಿದೆ ಎಂದರ್ಥ. ಹಾಗಾಗಿ ಈಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುಸಂಸ್ಕೃತರು, ಸಂಭಾವಿತರ ಪಕ್ಷ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಬಿಜೆಪಿಯಲ್ಲಿ ಒಬ್ಬರಾದ ಮೇಲೆ ಒಬ್ಬರು ತಮ್ಮ ಮಾನಹಾನಿಯಾಗುವಂತ ವೀಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿಯ ಅಸಲಿಯತ್ತು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.




