ಚೇತನ್ ಅಹಿಂಸಾ ಕಾಟೇರದಂತಹ ಚಿತ್ರ ಮಾಡಬೇಕು

2 years ago

ಆ ದಿನಗಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದು ಯಶಸ್ವಿಯಾದ ನಟ ಚೇತನ್ ಆನಂತರ ಮೈನಾ, ಸೂರ್ಯಕಾಂತಿ ಮತ್ತು ಅತೀರಥ ಚಿತ್ರಗಳ ಮೂಲಕ ಯಶಸ್ವಿ ನಾಯಕನಟರಾಗಿ ಹೆಸರು ಮಾಡಿದರು.

ಈಗ ಸಾಮಾಜಿಕ ಚಳವಳಿಯಲ್ಲಿ ಬಹಳ ಸಕ್ರಿಯೆರಾಗಿರುವ ಚೇತನ್ ಆಗಾಗ ತಮ್ಮ ವಿವಾದಿತ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಬಹಳ ಮುಖ್ಯವಾಗಿ ದಲಿತ ಬಹುಜನ ಚಳವಳಿಯಲ್ಲಿ ತುಂಬಾ ಸಕ್ರಿಯರಾಗಿರುವ ಚೇತನ್ ಈಗ ಬಹುಜನ ಚಳವಳಿಯ ಡಾರ್ಲಿಂಗ್ ಆಗಿದ್ದಾರೆ. ದಲಿತ ಬಹುಜನರೆಲ್ಲರೂ ಇವರ ಅಭಿಮಾನಿಗಳಾಗಿದ್ದಾರೆ. ಸದಾ ಸಾಮಾಜಿಕ ನ್ಯಾಯ, ಸಮಾನತೆ, ಜಾತಿವಿನಾಶ, ಅಂಬೇಡ್ಕರ್ ವಿಚಾರಧಾರೆ, ಪೆರಿಯಾರ್ ವಿಚಾರಧಾರೆಗಳ ಕುರಿತು ರಾಜ್ಯದ ಮೂಲೆಮೂಲೆಯಲ್ಲೂಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಬಿಝಿಯಾಗಿಯೇ ಇರುತ್ತಾರೆ. ಬಹಳ ಸಂತೋಷ.

ಚೇತನ್ ಆಗರ್ಭ ಶ್ರೀಮಂತರು ಜೊತೆಗೆ ಅದ್ಬುತ ಕಲಾವಿದ. ಅದಲ್ಲದೆ ಸ್ಪರದ್ರೂಪಿ. ಇಂತಹ ಚೇತನ್ ಯಾಕೆ ತಮ್ಮ ಸಾಮಾಜಿಕ ಚಳವಳಿಯನ್ನೇ ಚಲನಚಿತ್ರಗಳಲ್ಲಿ ಅಳವಡಿಸಿಕೊಂಡು ಕಾಟೇರದಂತಹ ಚಿತ್ರ ಮಾಡಬಾರದು?

ನಾಡಿನಾದ್ಯಂತ ಅಸಂಖ್ಯಾತ ದಲಿತ ಅಭಿಮಾನಿಗಳನ್ನು ಹೊಂದಿರುವ ಅವರು ತಮಿಳಿನ ಜೈಭೀಮ್, ಸರ್ಪಟ್ಟ, ಅಸುರನ್, ಕರ್ಣನ್ ತರದ ಚಿತ್ರಗಳನ್ನು ನಿರ್ಮಿಸಿ ನಟಿಸಿದರೆ ಖಂಡಿತವಾಗಿ ಸೂಪರ್ ಡೂಪರ್ ಹಿಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಈಗ ಕಾಟೇರ ಜನಮೆಚ್ಚುಗೆ ಗಳಿಸಿರುವುದು ನಮ್ಮ ಜನರ ಸಮಸ್ಯೆಯನ್ನು ಬಿಂಬಿಸಿರುವ ಕಾರಣಕ್ಕೆ. ಈ ಸಾಧ್ಯತೆಯನ್ನು ಚೇತನ್ ಮಾಡಿದರೆ ಇದಕ್ಕಿಂತ ದೊಡ್ಡ ಸಕ್ಸಸ್ ಕಾಣಬಹುದು. ಈಗ ಕಾಲ ಪಕ್ವವಾಗಿದೆ. ಅಭಿಮಾನಿಗಳೂ ಬಹಳ ಕಾತರದಿಂದ ಕಾದಿದ್ದಾರೆ. ದಯವಿಟ್ಟು ತಮ್ಮ ಸಾಮಾಜಿಕ ಬದ್ಧತೆಯನ್ನು ಚೇತನ್ ಈಗ ಮೆರೆಯಬೇಕಿದೆ.

ಚಳವಳಿಗಳ ಗಾಳಿಗಂಧವೇ ತಿಳಿಯದ ದರ್ಶನ್ ತರದವರೇ ಈಗ ಬಹುಜನರ ವಿಷಯವಿಟ್ಟುಕೊಂಡು ಸಿನಿಮಾ ಮಾಡಿರುವಾಗ, ಸದಾ ಚಳವಳಿಯಲ್ಲೇ ಸಕ್ರಿಯರಾಗಿರುವ ಚೇತನ್ ಏಕೆ ಮಾಡಬಾರದು? ಚೇತನ್ ದಯಮಾಡಿ ಇಂತಹ ಒಂದು ಚಿತ್ರ ಮಾಡಲೇಬೇಕು. ಅಭಿಮಾನಿಗಳ ಕೋರಿಕೆಯನ್ನು ಪರಿಗಣಿಸಬೇಕು. ಇದನ್ನು ಚೇತನ್ ತರದ ನಾಯಕರಿಂದಲ್ಲದೆ ಬೇರೆ ಯಾರಿಂದ ನಿರೀಕ್ಷಿಸಲು ಸಾಧ್ಯ? ಎಲ್ಲಾ ಚೇತನ್ ಅಭಿಮಾನಿಗಳೂ ಒತ್ತಾಯಿಸೋಣ…

  • ನಾಗರಾಜ್ ಹೆತ್ತೂರು, ಸಂಪಾದಕರು, ಭೀಮವಿಜಯ ದಿನಪತ್ರಿಕೆ, ಹಾಸನ

Leave a Reply