ಕಾಟೇರಾ ……ನಾನು ನೋಡಿದ ಸಿನೀಮಾ
ಪ್ರಜಾಪ್ರಭುತ್ವ ಮತ್ತು ಪುರೋಹಿತಶಾಹಿ ಪ್ರಭುತ್ವದ ನಡುವಣ ಸಂಘರ್ಷದ ಕಥೆಯಂತಿರುವ ಕಾಟೇರ ಕಥೆ ಒಂದು ಹಂತದಲ್ಲಿ ಪ್ರಜಾಪ್ರಭುತ್ವದ ಸಾಂವಿಧಾನಿಕ ಆಶಯವಾದ ಭೂಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಪುರೋಹಿತಶಾಹಿಗಳು ಹೇಗೆ ತಡೆಯೊಡ್ಡುತ್ತಾರೆನ್ನುವ ಸಂದೇಶವನ್ನು ಬಹು ಸೂಕ್ಷ್ಮವಾಗಿ ಎಳೆಎಳೆಯಾಗಿ ನಿರ್ದೇಶಕರು ಹೇಳಿದ್ದಾರೆ. ಕೆಲವು ಪ್ರಗತಿಪರ ಜಮೀನ್ದಾರಿಗಳು ಹೇಗೆ ಭೂಸುಧಾರಣಾ ಕಾಯ್ದೆಯಪರ ಒಲವಿತ್ತು ಎಂಬದನಿಯೂ ಇಲ್ಲಿ ಬಹುಮುಖ್ಯ… ಬಲಿ ಪದ್ಧತಿಗೆ ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಒಳ್ಳೆಯ ಸಂದೇಶ ನೀಡಿದೆ…
ಕುಲುಮೆಯ ಕಾವು ಎಷ್ಟು ಕಠೋರ ಎಂಬುದಕ್ಕೆ ಕಾಟೇರ ನೋಡಬೇಕು. ಪ್ರಭುತ್ವದ ದೊರೆಗಳಿಗೆ ಕಾನೂನುಗಳು ಮುಳುವಾದಾಗ ದೊರೆಗಳು ಹೇಗೆ ವ್ಯಾಘ್ರವಾಗುತ್ತಾ ತಮ್ಮ ಅಸ್ಥಿತ್ವದ ಉಳಿವಿಗಾಗಿ ಹೇಗೆ ತಿಣುಕಾಡುತ್ತವೆ ಎಂಬುದು ಕಾಟೇರ ಮುಂದಿಟ್ಟಿದೆ. ಕೆಲವೊಂದು ಅತಿಶಯೋಕ್ತಿ ದೃಶ್ಯಗಳಾಚೆ ಕಾಟೇರ ಹಲವು ವಾಸ್ತವಸತ್ಯಗಳನ್ನು ನಮ್ಮಮುಂದೆ ತೆರೆದಿಟ್ಟಿದೆ.
ಬಡವನ ಬೆವರಿನ ಮೇಲೆಯೇ ಸಿಂಹಾಸನ ಕಟ್ಟಿದ ಪ್ರಭುತ್ವಗಳು ತಮ್ಮ ಬುಡವೇ ಅಲ್ಲಾಡುವ ಸಮಯಬಂದಾಗ ತಮ್ಮ ಅಸ್ಥಿತ್ವದ ಉಳಿವಿಗಾಗಿ ಎಂಥಹ ಹೇಯಕೃತ್ಯಕ್ಕೂ ಜಗ್ಗುವುದಿಲ್ಲ ಎಂಬುದು ಕಾಟೇರಾ ಸಿನಿಮಾದ ಸಂದೇಶ… ಕುಲುಮೆ ಮಾಡುವ ಕೈ ಅಂತಹ ಪ್ರಭುತ್ವದ ವಿರುದ್ಧ ಎಷ್ಟು ಕಠೋರವಾಗಬಲ್ಲದು ಎಂಬುದಕ್ಕೆ ಕಾಟೇರಾ ನೋಡಲೇಬೇಕು.
“ಎಲ್ಲವನ್ನೂ ಕಿತ್ಕೋಬೇಡಿ ನಮಗೂ ಒಂದು ತುತ್ ಊಟಕೊಡಿ” ಎಂದು ಜಮೀನ್ದಾರನ ಎದುರು ಕಾಲಿಗೆಬಿದ್ದು ಬೇಡುವ ರೈತ
“ನಮ್ಮಮಕ್ಕಳನ್ನ ಓದ್ಸೋಕಾಗ್ದೇ ಕೆಳಗೇರಿಯವರನ್ ಓದ್ಸೋಕಾಗುತ್ತಾ” ಎಂದು ಸಾವಿರಾರು ವರ್ಷಗಳಿಂದ ಅಕ್ಷರ ವಂಚನೆಯನ್ನೆಸಗಿದ ದರ್ಪಿಷ್ಠ ಶಾನುಭೋಗರ ದುರಹಂಕಾರದ ಮಾತು
“ರೈತರ ಜಮೀನಿಗೆ ಹುಳ ಆಗ್ಬೇಡಿ ಎರೆಹುಳ ಆಗಿ” ಎಂದು ನಾಯಕ ಅಧಿಕಾರಿಗೆ ಹೇಳುವ ಮಾತುಗಳು
“ಪೂಜೆ, ಪುನಸ್ಕಾರ, ಹೋಮ ಹವನಗಳಿಂದ ದೊಡ್ಡವರಾಗುವುದಕ್ಕಿಂತ ಮಾನವೀಯತೆಯಿಂದ ದೊಡ್ಡವರಾಗಬೇಕು” ಎಂಬ ನಾಯಕ ಪುರೋಹಿತಶಾಹಿಗೆ ಕೊಡುವ ಉತ್ತರ…. ಇಂತಹ ಸಂಭಾಷಣೆಯ ಮಾತುಗಳು ಚಿತ್ರದುದ್ದಕ್ಕೂ ಸಭಿಕರನ್ನು ಚಿಂತನೆಗೆ ಹಚ್ಚುವಂತಿದೆ… ನಾಯಕ ದರ್ಶನ್ ಮಾಸ್ ಲೀಡರ್ ಆದ ಕಾರಣ ಆ ವರ್ಗದ ಪ್ರೇಕ್ಷಕರಿಗೆ ಮೂರು ಹೊಡೆದಾಟ ಬಿಟ್ಟರೆ ಇಡೀ ಸಿನಿಮಾ ನೋಡುಗರ ಆತ್ಮಸಾಕ್ಷಿಯನ್ನು ಕೆಣಕುವಂತಿದೆ… ನೀವು ಒಮ್ಮೆ ನೋಡಿ.
- ಮಂಜುನಾಥ್.ಬಿ ಹೊಳೆಹೊನ್ನೂರು




