ಕಲ್ಲಿದ್ದಲು ಸರಬರಾಜಿಗೆ ಮಹತ್ವ ಹೆಜ್ಜೆ!

5 years ago

ದೆಹಲಿ: ಕಲ್ಲಿದ್ದಲು ಕೊರತೆ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಸೋಮವಾರ 1.77 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ಸರಬರಾಜುಮಾಡಲಾಗಿದೆ. ಕಳೆದ ವರ್ಷ ಇದೇ ದಿನ 1.48 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಮಾತ್ರ ಸರಬರಾಜಾಗಿತ್ತು ಎಂದು ವರದಿಯಾಗಿದೆ.

ದೇಶದಲ್ಲಿ ಸದ್ಯಕ್ಕೆ ಕೋಲಾಹಲ ಮೂಡಿಸಿದ್ದ ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ಪೂರೈಕೆ ಸಮಸ್ಯೆಗೆ ಈ ಮೂಲಕ ಪರಿಹಾರ ಸಿಗುವ ನಿರೀಕ್ಷೆ ಇದೆ. ಕಲ್ಲಿದ್ದಲು ಕೊರತೆ ದೆಹಲಿ, ತಮಿಳುನಾಡು, ರಾಜಸ್ಥಾನ, ಪಂಜಾಬ್, ಕರ್ನಾಟಕ ರಾಜ್ಯಗಳಲ್ಲಿ ವಿದ್ಯುತ್ ಕೊರತೆಗೆ ನಾಂದಿ ಹಾಡಬಹುದು ಎಂದು ವಿಶ್ಲೇಷಿಸಲಾಗಿತ್ತು.

ಈ ಮಧ್ಯೆ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದ್ದು, ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಲು ದಿನದ 24 ಗಂಟೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಕಲ್ಲಿದ್ದಲಿನ ಅಭಾವವನ್ನು ತುರ್ತುಪರಿಸ್ಥಿತಿ ಎಂದು ರಾಷ್ಟ್ರೀಯ ಸಾಗಣೆದಾರರು ಘೋಷಿಸಿದ್ದು, 24 ಗಂಟೆ ಕಲ್ಲಿದ್ದಲು ಸಾಗಣೆಗೆ ಕಂಟ್ರೋಲ್ ರೂಂ ತೆರೆಯಲಾಗಿದೆ ಎಂದು ರೈಲ್ವೆ ಎಲ್ಲ ವಲಯಗಳ ಪ್ರಧಾನ ಮುಖ್ಯ ಕಾರ್ಯನಿರ್ವಾಹಕರಿಗೆ ಸೂಚಿಸಲಾಗಿದೆ.

ಪ್ರತಿದಿನದ ಬೇಡಿಕೆ 500 ರೇಕ್ಸ್ಗೆ ತಲುಪಿದರೂ, ಸಾಗಣೆದಾರರು ಸಮಸ್ಯೆಯಿಲ್ಲದೆ ಪೂರೈಸುತ್ತಾರೆ. ದೇಶದ ಪೂರ್ವ ಭಾಗದ ಕಲ್ಲಿದ್ದಲು ವಲಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ವರ್ಗಾವಣೆಯಾಗುತ್ತಿದೆ. ಪೂರ್ವ ಮಧ್ಯ ರೈಲ್ವೆ ವಲಯದ ರೈಲುಗಳು ಕಲ್ಲಿದ್ದಲು ಪೂರೈಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶಾದ್ಯಂತ ಕಲ್ಲಿದ್ದಲು ಅಗತ್ಯ ಇರುವ ರಾಜ್ಯಗಳಿಗೆ ಪೂರ್ಣಪ್ರಮಾಣದಲ್ಲಿ ಪೂರೈಸುವ ಮೂಲಕ ವಿದ್ಯುತ್ ಕೊರತೆ ನೀಗಿಸಲು ಸಿದ್ಧರಿದ್ದೇವೆ ಎಂದು ರೈಲ್ವೆ ರಾಷ್ಟ್ರೀಯ ಸಾಗಣೆದಾರರು ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವಾಲಯಕ್ಕೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ಪರಿಸ್ಥಿತಿ ಒಂದೆರಡು ದಿನಗಳಲ್ಲಿ ಪರಿಹಾರವಾಗದು. ಆದರೆ ಕಲ್ಲಿದ್ದಲು ಸಾಗಣೆಗೆ ಸರ್ವರೀತಿಯಿಂದ ಸನ್ನದ್ಧರಾಗಿದ್ದೇವೆ. ಕಲ್ಲಿದ್ದಲು ಲೋಡಿಂಗ್, ಅನ್ಲೋಡಿಂಗ್ ಸೇರಿ ಎಲ್ಲ ರೀತಿಯ ಮೇಲ್ವಿಚಾರಣೆಯನ್ನೂ ಸಮರ್ಥವಾಗಿ ನಿರ್ವಹಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Leave a Reply