ಮಾರ್ಚ 2022ರ ವೇಳೆಗೆ ಭಾರತದ ವಿದೇಶಿ ಸಾಲ 49.68 ಲಕ್ಷ ಕೋಟಿ. ಇದು ಭಾರತದ ಅಂತರಿಕ ಉತ್ಪಾದನೆ (ಜಿಡಿಪಿ) ಶೇ.21ರಷ್ಟು. 2023ರ ಮಾರ್ಚ್ ಒಳಗೆ ಇನ್ನೂ 7 ಲಕ್ಷ ಕೋಟಿ ಸಾಲ ಮಾಡುವ ಅಂದಾಜು ಮಾಡಲಾಗಿದೆ.
ಹಿಂದಿನ ವರ್ಷ 2021ರ ಮಾರ್ಚ್ ವೇಳೆಗೆ ಭಾರತದ ವಿದೇಶಿ ಸಾಲದ ಮೊತ್ತ 45.84 ಲಕ್ಷ ಕೋಟಿಯಷ್ಟಿತ್ತು. ಕಳೆದ ಒಂದು ವರ್ಷದಲ್ಲಿ 3.84 ಲಕ್ಷ ಕೋಟಿ ಹೆಚ್ಚುವರಿಯಾಗಿ ಸಾಲ ಮಾಡಿದೆ.
ಜೂನ್ 2022ರ ವೇಳೆಗೆ ವಿದೇಶಿ ವಿನಿಮಯ ಮೀಸಲು ನಿಧಿ 48 ಲಕ್ಷ ಕೋಟಿಯಿದೆ. ವಿದೇಶಿ ಸಾಲದ ಮೊತ್ತ ಅಪದ್ಧನಕ್ಕಿಂತ 1.68 ಲಕ್ಷ ಕೋಟಿ ಜಾಸ್ತಿಯಿದೆ. ಮುಂದಿನ ಒಂಬತ್ತು ತಿಂಗಳ ಒಳಗೆ ವಿದೇಶಿ ಸಾಲದ ಶೇ. 40 ಪ್ರಮಾಣದಷ್ಟು ಅಂದರೆ 21.36 ಲಕ್ಷ ಕೋಟಿ ಮೊತ್ತವನ್ನು ತೀರಿಸಬೇಕಾಗಿದೆ
ಅಂದರೆ ಅಪದ್ಧನದಲ್ಲಿ ಶೇ. 44ರಷ್ಟು ಮೊತ್ತ ಕಡಿಮೆಯಾಗುತ್ತದೆ. (ಈ ಅಂಕಿಅಂಶಗಳು ಆರ್ ಬಿಐ ಅಂತರ್ಜಾಲದಲ್ಲಿ ಲಭ್ಯ) ಆದರೆ ಸರಕಾರದ ವಕ್ತಾರರು ‘ವಿದೇಶಿ ಸಾಲದಲ್ಲಿ ದೀರ್ಘಾವಧಿ ಸಾಲದ ಪ್ರಮಾಣ ಹೆಚ್ಚಿರುವುದರಿಂದ ‘ ಇದು ಅಂತಹ ಗಂಭೀರ ಸಮಸ್ಯೆಯಲ್ಲ ಅಂತ ಹೇಳುತ್ತಾರೆ. ಆದರೆ ಆದಾಯದ ಮೂಲ ಕರಗುತ್ತಿದೆ. ಇದನ್ನು ಸರಿದೂಗಿಸಲು ಪರೋಕ್ಷ ತೆರಿಗೆ ಹೆಚ್ಚಿಸುತ್ತಿದ್ದಾರೆ. ಇದರ ಹೊರೆ ನೇರವಾಗಿ ಜನ ಸಾಮಾನ್ಯರ ಮೇಲೆ ಬೀಳುತ್ತದೆ. ಬಡತನದ ಪ್ರಮಾಣ ಶೇ.66ರಷ್ಟಿದೆ. ಸರಕಾರದ ನೀತಿಯ ಕಾರಣದಿಂದಾಗಿ ಇಲ್ಲಿನ ಬಡತನ ಮತ್ತು ಹಸಿವಿನ ಸ್ವರೂಪದ ಒಂದು ಉದಾಹರಣೆ.
‘ವಿಜ್ಞಾನ ಪರಿಸರ ಕೇಂದ್ರ’ ( ಸಿಎಸ್ ಸಿ) ವರದಿಯ ಅನುಸಾರ ಶೇ. 71ರಷ್ಟು ಪ್ರಮಾಣದ ಜನಸಂಖ್ಯೆಗೆ ‘ಆರೋಗ್ಯ ಡಯಟ್’ ಪಡೆಯಲು ಸಾಧ್ಯವಾಗುತ್ತಿಲ್ಲ. ದುರ್ಬಲ ಡಯಟ್ ನಿಂದಾಗಿ ಉಂಟಾದ ಕಾಯಿಲೆಗಳ ಕಾರಣದಿಂದ ಪ್ರತಿ ವರ್ಷ 17 ಲಕ್ಷ ಜನ ಸಾಯುತ್ತಿದ್ದಾರೆ.
ಪೌಷ್ಟಿಕ ಆಹಾರಕ್ಕಾಗಿ 6 ವರ್ಷಕ್ಕಿಂತ ಕೆಳಗಿನ ಸುಮಾರು 7.9 ಕೋಟಿ ಮಕ್ಕಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕೆಂದು ಸುತ್ತೋಲೆ ಬಂದಿದೆ. ಆದರೆ ಆರ್ಟಿಕಲ್ 14 ಪತ್ರಿಕೆಯ ಅನುಸಾರ 5 ವರ್ಷಕ್ಕಿಂತ ಕೆಳಗಿರುವ ಶೇ. 23 ಪ್ರಮಾಣದ ಮಕ್ಕಳ ಬಳಿ ಮಾತ್ರ ಆಧಾರ್ ಕಾರ್ಡ್ ಇದೆ. ಅಂದರೆ ಉಳಿದ ಶೇ.77 ಪ್ರಮಾಣದ ಮಕ್ಕಳು ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಾರೆ. ಅಂದರೆ ಸಾಲದ ಮೊತ್ತ ಹೆಚ್ಚುತ್ತಿದೆ, ಆದರೆ ದೇಶದ ಬಡತನವೂ ಹೆಚ್ಚಾಗುತ್ತಿದೆ. ಹಾಗಿದ್ದರೆ ಕೇಂದ್ರ ಸರಕಾರ ವಿದೇಶದಿಂದ ಕಡ ತರುವ ಕೋಟಿಗಟ್ಟಲೆ ಹಣ ಎಲ್ಲಿ ವೆಚ್ಚವಾಗುತ್ತಿದೆ? ಇದನ್ನು ಪ್ರಶ್ನಿಸುವವರಿಲ್ಲ, ಮೋದಿ ಸರ್ಕಾರ ಉತ್ತರಿಸುವ ಗೋಜಿಗೂ ಹೋಗುವುದಿಲ್ಲ.
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




