ಐಟಿ ಅಧಿಕಾರಿಗಳೇ ಸಿಬಿಐ ಸೇರಿದಂತೆ ಅಗತ್ಯ ನಿರ್ಧಾರ ತೆಗೆದುಕೊಳ್ಳುತ್ತಾರೆ: ಡಾ.ಜಿ.ಪರಮೇಶ್ವರ್

2 years ago

#IT #officials #CBI #decisions #GParameshwar

ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ರಾಜ್ಯದ ಹಲವೆಡೆ ನಡೆದ‌ ಐಟಿ ಕಾರ್ಯಾಚರಣೆಯಲ್ಲಿ ಸಿಕ್ಕಿರುವ ಹಣ ಅಥವಾ ಇನ್ಯಾವುದೇ ಮಾಹಿತಿಯ ಬಗ್ಗೆ ಸಿಬಿಐ ತನಿಖೆ ಅಗತ್ಯವಾದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ನಿರ್ಧರಿಸುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಗಂಭೀರತೆ ಇದೆ ಎಂದಾದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಸಿಬಿಐ ಸೇರಿದಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾರನ್ನೂ ಹೇಳಿ-ಕೇಳಿ ಮಾಡುವುದಿಲ್ಲ ಎಂದರು.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ನಿರಾಧಾರ, ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಈ ರೀತಿಯ ಬೆಳವಣಿಗೆಗಳಾಗಿರಲಿಲ್ಲವೇ ಎಂದು ಪ್ರಶ್ನಿಸಿದರು.

ಆದಾಯ ತೆರಿಗೆ ಅಧಿಕಾರಿಗಳು ಹಣ ಯಾರಿಗೆ ಸಂಬಂಧಪಟ್ಟಿದೆ ಎಂಬುದನ್ನು ಅಗತ್ಯ ಸಂದರ್ಭದಲ್ಲಿ ಬಹಿರಂಗ ಮಾಡುತ್ತಾರೆ. ಬಹುಶಃ ಸದ್ಯದಲ್ಲಿ ತನಿಖೆ ನಡೆಯುತ್ತಿರುವುದರಿಂದ ಈವರೆಗೂ ಮಾಹಿತಿ ಹೊರ ಬಂದಿಲ್ಲ ಇರಬಹುದು ಎಂದರು.

ಹಲವಾರು ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಅಗತ್ಯ ಮಾಹಿತಿ ನೀಡುತ್ತಾರೆ. ಅಧಿಕೃತ ಮಾಹಿತಿ ಪ್ರಕಟವಾಗದ ಹೊರತು ಹಣ ಅವರಿಗೆ ಸೇರಿದೆ, ಇವರಿಗೆ ಸೇರಿದೆ ಎಂದು ಊಹೆ ಮಾಡಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply