ವಿಧಾನ ಪರಿಷತ್ ನಲ್ಲಿ ಜಟಾಪಟಿಗೆ ಕಾರಣವಾದ ದನ ಹತ್ಯೆ ನಿಷೇಧ ಕಾಯ್ದೆ

3 years ago

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿರುವ ಗೋಹತ್ಯೆ ನಿಷೇಧ ಕಾಯಿದೆಗೆ ರಾಜ್ಯ ಸರ್ಕಾರ ಕೆಲವು ತಿದ್ದುಪಡಿ ಮಾಡಲು ತೀರ್ಮಾನಿಸಿದ್ದು, ತಜ್ಞರ ಸಮಿತಿಯ ಅಧ್ಯಯನಕ್ಕೆ ನೀಡಿದೆ.

ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವ ವಿಚಾರ ವಿಧಾನಪರಿಷತ್ ನಲ್ಲಿ ಪ್ರಸ್ತಾಪಗೊಂಡು ಆಡಳಿತ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ಈ ವೇಳೆ ಮಾತನಾಡಿದ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್, ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ನ್ನು ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದಾಗ್ಯೂ ಅದರ ಹೊರತಾಗಿ 2022ರ ಗೋಹತ್ಯೆ ನಿಷೇಧಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಚಿವರ ಈ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ರವಿಕುಮಾರ್, ಹಿಂದಿನ ಸರ್ಕಾರದಲ್ಲಿ ಜಾರಿ ಮಾಡಿದ್ದ ಕಾಯ್ದೆಯನ್ನು ಹಿಂಪಡೆಯುವುದಿಲ್ಲವೇ ಎಂದು ಸಚಿವರನ್ನು ಪ್ರಶ್ನಿಸಿದರು. 

ಸದ್ಯಕ್ಕೆ ನಮ್ಮ ಮುಂದೆ ಅಂತಹ ಪ್ರಸ್ತಾವನೆ ಇಲ್ಲ ಎಂದು ಸಚಿವ ವೆಂಕಟೇಶ್ ಅವರು ಹೇಳಿದಾಗ, ಹಾಗಾದರೆ ಮುಂದೆ ರದ್ದುಪಡಿಸುತ್ತೀರ? ಎಂದು ಮತ್ತೊಂದು ಪ್ರಶ್ನೆಯನ್ನು ರವಿಕುಮಾರ್ ಮಾಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಮಾತು ಮುಂದುವರೆಸಿದ ರವಿಕುಮಾರ್, ಸರ್ಕಾರ ಸ್ಪಷ್ಟ ಉತ್ತರ ಕೊಡಲಿ. ಹಿಂದಿನ ಸರ್ಕಾರ ಜಾರಿ ಮಾಡಿದ್ದ ಕಾಯ್ದೆಯನ್ನು ಹಿಂಪಡೆಯುವುದಿಲ್ಲ ಎಂದು ಹೇಳಲಿ. ಏಕೆಂದರೆ ಇತ್ತೀಚೆಗೆ ಸಚಿವರೆ ಎಮ್ಮೆ, ಕೋಣ ಕಡಿಯುವುದಾದರೆ ಗೋವುಗಳನ್ನು ಏಕೆ ಕಡಿಯಬಾರದೆಂದು ಹೇಳಿಕೆ ಕೊಟ್ಟಿದ್ದರು. ಇದರಿಂದ ಜನರಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.

ರವಿಕುಮಾರ್ ಮಾತಿಗೆ ದನಿಗೂಡಿಸಿದ ಕೋಟಾ ಶ್ರೀನಿವಾಸಸ ಪೂಜಾರಿ ಜನತೆಗೆ ಇದರ ಬಗ್ಗೆ ತುಂಬಾ ಗೊಂದಲವಿದೆ. ಕಾಯ್ದೆಯನ್ನು ಎಲ್ಲಿ ರದ್ದುಪಡಿಸುತ್ತಾರೆ ಎಂಬ ಆತಂಕವಿದೆ. ನಾಡಿನ ಅನೇಕ ಮಠಾಧೀಶರು ಕೂಡ ಕಾಯ್ದೆಯನ್ನು ರದ್ದುಪಡಿಸಬಾರದೆಂದು ಮನವಿ ಮಾಡಿದ್ದಾರೆ. ಸರ್ಕಾರದ ನಿಲುವೇನೆಂದು ಪ್ರಶ್ನಿಸಿದರು.


ಸರ್ಕಾರದ ಮುಂದೆ ಪ್ರಸ್ತಾವನೆ ಇಲ್ಲ ಎಂದು ವೆಂಕಟೇಶ್ ಹೇಳುತ್ತಿದ್ದಂತೆ, ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಕದನ ನಡೆಸಲು ಮುಂದಾದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಯಿತು.

ಈ ವೇಳೆ ಸಚಿವ ಕೃಷ್ಣಭೈರೇಗೌಡ ಅವರು ಬಿಜೆಪಿಯವರಿಗೆ ಸದನ ನಡೆಯಬೇಕಾಗಿಲ್ಲ. ಅವರು ಸದನವನ್ನು ಹಾಳುಗೆಡವಲು ಬಂದಿದ್ದಾರೆ. ಗೋಮಾತೆ ರಕ್ಷಣೆಯೂ ಬೇಕಿಲ್ಲ. ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುವುದು, ಅದರಲ್ಲಿ ಮತ ಪಡೆಯುವುದು ಇವರ ಉದ್ದೇಶವಾಗಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸಭಾಪತಿಯವರಲ್ಲಿ ಮನವಿ ಮಾಡಿದರು.

ಆಗ ಜೆಡಿಎಸ್‍ನ ಮರಿಸಿದ್ದೇಗೌಡ ಅವರು, ಸಚಿವರು ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಆದರೂ ನನಗೆ ಹೀಗೇ ಉತ್ತರ ಕೊಡಬೇಕೆಂದು ಹೇಳುವ ಅಧಿಕಾರ ಸದಸ್ಯರಿಗಿಲ್ಲ. ಇದಕ್ಕೆ ಸಭಾಪತಿಗಳು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು. ಇದರಿಂದ ಕೆರಳಿ ಕೆಂಡವಾದ ಬಿಜೆಪಿ ಸದಸ್ಯರು ಅದನ್ನು ಹೇಳಲು ನೀವ್ಯಾರು? ಬೇಕಿದ್ದರೆ ಆಡಳಿತ ಪಕ್ಷದಲ್ಲಿ ಕುಳಿತು ಹೇಳಿ. ಇಲ್ಲಿ ಬಂದು ನಮಗೆ ಉಪದೇಶ ಮಾಡಬೇಡಿ ಎಂದು ತಿರುಗೇಟು ನೀಡಿದರು.

Leave a Reply