ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ಜಡತ್ವದಿಂದ ಕೂಡಿದೆ: ಸಿದ್ದರಾಮಯ್ಯ

3 years ago

ವಿಜಯನಗರ: ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ಜಡತ್ವದಿಂದ ಕೂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ, ಮಾತನಾಡಿದ ಅವರು, ಎಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳು ಇರುವುದಿಲ್ಲ ಅಲ್ಲಿಯವರೆಗೆ ಜಡತ್ವ ಇರುತ್ತದೆ. ಜಡತ್ವ ಇರುವವರೆಗೆ ಜಾತಿ ವ್ಯವಸ್ಥೆ ಹೀಗೆ ಇರುತ್ತದೆ. ಇದೇ ಕಾರಣಕ್ಕೆ ಅಂಬೇಡ್ಕರರು ಎಲ್ಲರೂ ಶಿಕ್ಷಣ ಪಡೆದುಕೊಂಡು, ಹೋರಾಟದ ಮೂಲಕ ನಿಮ್ಮ ಹಕ್ಕುಗಳನ್ನು ಪಡೆಯಿರಿ ಎಂದು ಹೇಳಿದ್ದರು. ಎಲ್ಲ ಶೂದ್ರ ವರ್ಗದ ಜನರಿಗೆ ಈ ಕರೆಯನ್ನು ನೀಡಿದ್ದರು. ಅದಕ್ಕೆ ನಾವು ಶಿಕ್ಷಣ, ಆರ್ಥಿಕ ಚಟುವಟಿಕೆಗಳು ಆರಂಭವಾಗುತ್ತದೆ ಎಂದು ಗುರುಪೀಠ ಸ್ಥಾಪನೆ ಮಾಡಿದ್ದು ಎಂದರು.
ಬಾಬಾ ಸಾಹೇಬ್‌ ಅಂಬೇಡ್ಕರರು ನವೆಂಬರ್‌ 25, 1949 ರಂದು ಸಂವಿಧಾನ ಸಭೆಯಲ್ಲಿ ಮಾಡಿರುವ ಭಾಷಣ ಒಂದು ಐತಿಹಾಸಿಕವಾದುದ್ದು. ಇದನ್ನು ಎಲ್ಲರೂ ಓದಬೇಕು. ಅವರು ತಮ್ಮ ಭಾಷಣದಲ್ಲಿ “ಸಂವಿಧಾನದ ಮೂಲಕ ನಾವು ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಎಂದು ಮಾಡಿದ್ದೇವೆ, ಆದರೆ ಇದೇ ವ್ಯವಸ್ಥೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇಲ್ಲ. ಜನವರಿ 26, 1950 ನೇ ಇಸವಿಯಿಂದ ನಾವು ವೈರುಧ್ಯವಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಇದನ್ನು ಹೋಗಲಾಡಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು. ಈ ಕೆಲಸವನ್ನು ಮಾಡದೇ ಇದ್ದರೆ ಅಸಮಾನತೆಯಿಂದ ನರಳುವ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದಿದ್ದರು ಎಂದರು.
ನಮ್ಮ ಸ್ವಾಮೀಜಿಗಳು ವಸತಿ ಶಾಲೆಗಳನ್ನು ಸ್ಥಾಪನೆ ಮಾಡಿದ್ದಾರೆ, ಇದು ಇನ್ನೂ ಹೆಚ್ಚಾಗಬೇಕು. ನಾವು ಮಠ ಸ್ಥಾಪನೆ ಮಾಡಿದ್ದು ಬರೀ ಕುರುಬರಿಗೆ ಮಾತ್ರ ಅಲ್ಲ, ಎಲ್ಲಾ ಹಿಂದುಳಿದ ಜಾತಿಗಳಿಗೆ ಅಂತ ಮಠ ಸ್ಥಾಪನೆ ಮಾಡಿದ್ದು ಎಂದರು.
ನಾನು ಮುಖ್ಯಮಂತ್ರಿಯಾಗಿರುವಾಗ ಕನಕ ಜಯಂತಿ, ಭಗೀರಥ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ದೇವರ ದಾಸಿಮ್ಮಯ್ಯ, ಕೆಂಪೇಗೌಡ ಜಯಂತಿ, ಟಿಪ್ಪು ಜಯಂತಿ, ಅಂಬಿಗರ ಚೌಡಯ್ಯ ಜಯಂತಿ, ಸೇವಾಲಾಲ್‌ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಆರಂಭಿಸಿದ್ದು. ಬಸವಣ್ಣನವರ ಭಾವಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಇಡುವಂತೆ ಆದೇಶ ಮಾಡಿದ್ದು ನಾನು. ಬಿಜಾಪುರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ನಾನು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಿದ್ದು, ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿದ್ದು ನಾನು. ಈಗ ನನ್ನನ್ನು ಬಿಟ್ಟು ಜಯಂತಿ ಆಚರಣೆ ಮಾಡುತ್ತಾರೆ, ಸಂತೋಷ ಮಾಡಿಕೊಳ್ಳಲಿ. ಈ ಎಲ್ಲಾ ಮಹನೀಯರ ಜಯಂತಿ ಆಚರಣೆ ಮಾಡಲು ಕಾರಣ ಇವರೆಲ್ಲರೂ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದಾರೆಂದು ಎಂದರು.
ಜನ ನನ್ನನ್ನು ಟಗರು ಎಂದು ಪ್ರೀತಿಯಿಂದ ಕರೆಯುತ್ತಾರೆ, ನಾನು ಸಮಾಜದಲ್ಲಿನ ಎಲ್ಲಾ ಜಾತಿಗಳ ಬಡಜನರಿಗೆ ಸಹಾಯ ಮಾಡಬೇಕು ಎಂದು ಕೆಲಸ ಮಾಡಿದ್ದೆ, ನಾನು ಕುರುಬ ಜಾತಿಯವನು ಎನ್ನುವ ಕಾರಣಕ್ಕೆ ಟಗರು ಎನ್ನುವುದಲ್ಲ. ನಾವು ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಿ ಜಾರಿ ಮಾಡಿದ್ವಾ? ಎಲ್ಲಾ ಬಡವರಿಗೆ ನೀಡಿರಲಿಲ್ವಾ? ಕೃಷಿ ಭಾಗ್ಯ ಯೋಜನೆಯನ್ನು ಬರೀ ಕುರುಬ ಜಾತಿಯ ರೈತರಿಗೆ ಮಾತ್ರ ನೀಡಿದ್ದೆವಾ? ಶೂಭಾಗ್ಯ, ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ, ಶಾದಿ ಭಾಗ್ಯ, ಇವೆಲ್ಲ ಯೋಜನೆಯನ್ನು ಬರೀ ಹಿಂದುಳಿದ ಜಾತಿಗಳಿಗೆ ಸೀಮಿತವಾಗಿ ಜಾರಿ ಮಾಡಿರಲಿಲ್ಲ, ಈ ನಾಡಿನಲ್ಲಿ ಆರ್ಥಿಕವಾಗಿ ಯಾರೆಲ್ಲ ದುರ್ಬಲರಿದ್ದಾರೆ ಅವರಿಗೆ ಸಹಾಯವಾಗಲಿ ಎಂದು ಮಾಡಿದ್ದು ಎಂದರು.
ಅಂಬೇಡ್ಕರರು ಸಂವಿಧಾನ ಅಂಗೀಕಾರವಾದ ಮೇಲೆ ಒಂದು ಮಾತು ಹೇಳಿದ್ದರು, ಈ ದೇಶದ ಜನರಿಗೆ ರಾಜಕೀಯ ಸ್ವಾತಂತ್ರ ಸಿಕ್ಕರೆ ಸಾಲದು, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಸಾರ್ಥಕವಾಗುತ್ತದೆ ಎಂದಿದ್ದರು. ಅವರ ಆಶಯಗಳ ಈಡೇರಿಕೆಗೆ ನಾನು ಅಧಿಕಾರದಲ್ಲಿದ್ದಾಗ ಶ್ರಮಿಸಿದ್ದೆ ಎಂದರು.

Leave a Reply