ಗೋರಕ್ಷಕರ ಪಕ್ಷದ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲು

2 years ago

ಬೆಂಗಳೂರು: ಹಾಲು ಉತ್ಪಾದಕರಿಗೆ ಸಹಾಯಧನ ನೀಡಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಪಿ.ರಾಜೀವ್ ಸೇರಿದಂತೆ ಒಂಭತ್ತು ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಪ್ರತಿಭಟನೆ ಸಮಯದಲ್ಲಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಈ ನಾಯಕರು ಆರು ದನಗಳನ್ನು ಫ್ರೀಡಂ ಪಾರ್ಕ್‌ಗೆ ತಂದಿದ್ದರು. ಈ ಹಿನ್ನೆಲೆಯಲ್ಲಿ 9 ಬಿಜೆಪಿ ನಾಯಕರ ವಿರುದ್ಧ ಮನೇಕಾ ಗಾಂಧಿ ಕಾನೂನು ಎಂದೇ ಖ್ಯಾತಿ ಪಡೆದಿರುವ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಹಾಲು ಉತ್ಪಾದಕರಿಗೆ ಬಾಕಿ ಇರುವ ಸಬ್ಸಿಡಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಕಳೆದ ಫೆ.6ರಂದು ಫ್ರೀಡಂ ಪಾರ್ಕ್ ನಲ್ಲಿ  ಪ್ರತಿಭಟನೆ ನಡೆಸಿದ್ದರು. ಈ ವೇಳೆ ತಮ್ಮೊಂದಿಗೆ ದನಗಳನ್ನೂ ಕರೆತಂದಿದ್ದರು.

ಪ್ರತಿಭಟನೆ ತಡೆಯಲು ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ಗಳಲ್ಲಿ ಹತ್ತಿಸಲು ಮುಂದಾಗಿದ್ದರು. ಈ ವೇಳೆ ಕೆಲ ನಾಯಕರು ದನಗಳನ್ನೂ ಕೂಡ ತಮ್ಮೊಂದಿಗೆ ಬಸ್ ಗಳಲ್ಲಿ ಹತ್ತಿಸಲು ಮುಂದಾಗಿದ್ದರು.

ಬಸ್ ಗಳಲ್ಲಿ ಸಣ್ಣ ಬಾಗಿಲುಗಳಿರುವುದರಿಂದ ಅವುಗಳನ್ನು ಬಸ್ ಗಳ ಒಳಗೆ ಹತ್ತಿಸಲು ಸಾಧ್ಯವಾಗುತ್ತಿರಲಿಲ್ಲ. ದನಗಳ ರಕ್ಷಣೆ ಮಾಡಲು ಹರಸಾಹಸ ಪಡಬೇಕಾಯಿತು. ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ದೊಡ್ಡ ಸ್ಪೀಕರ್ ಗಳಲ್ಲಿ ಬರುತ್ತಿದ್ದ ಧ್ವನಿಯಿಂದಾಗಿ ದನಗಳು ಭೀತಿಗೊಳಗಾಗಿ ವಿವಿಧ ದಿಕ್ಕುಗಳಲ್ಲಿ ಓಡಲು ಪ್ರಯತ್ನಿಸುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವೇಳೆ ದನಗಳಿಗೆ ಹಿಂಸೆ ನೀಡಿದವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ದೂರು ದಾಖಲಿಸಿದ್ದಾರೆ.

ಮಾಜಿ ಶಾಸಕ ಪಿ ರಾಜೀವ್,ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಹರೀಶ್, ಸಪ್ತಗಿರಿಗೌಡ ಸೇರಿದಂತೆ ಒಂಭತ್ತು ಜನರ ವಿರುದ್ಧ ದೂರು ದಾಖಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರೂ, ಪ್ರತಿಭಟನೆಗೆ ಪ್ರಾಣಿಗಳನ್ನು ಕರೆತರುವುದು ಕಾನೂನುಬಾಹಿರವಾಗಿದೆ. ಆರು ಹಸುಗಳನ್ನು ಪ್ರತಿಭಟನಾಕಾರರು ಅಮಾನವೀಯವಾಗಿ ನಡೆಸಿಕೊಂಡರು. ಈ ಜಾನುವಾರುಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ದಂಡದ ರೂಪದಲ್ಲಿ ಶಿಕ್ಷೆಯಾಗಿದ್ದರೂ, ಇನ್ನು ಮುಂದೆ ಯಾವುದೇ ಪ್ರತಿಭಟನೆಗೆ ಪ್ರಾಣಿಗಳನ್ನು ಕರೆತರದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Leave a Reply