ಸಾವುನೋವುಗಳನ್ನು ನೆನೆದು ಆ ಬಾಲರಾಮನ ಎಳೆ ಹೃದಯ ಮರುಗಲಾರದೇ?

2 years ago

ಈ ವೈಭವ, ಆ ಸಹಸ್ರಾರು ಜೀವಗಳ ರಕ್ತದ ಕಲೆಯನ್ನು ಒರೆಸಿ ಹಾಕಿಬಿಡಬಲ್ಲುದೇ?

ಜೈ ಶ್ರೀರಾಮ್….!

ನಿನ್ನೆ (22 ಜನವರಿ 2024) ಅಯೋಧ್ಯೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ‘ಯಜಮಾನಿಕೆ’ಯಲ್ಲಿ ಬಾಲರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಸಮಾರಂಭ. ಇತ್ತ ಪ್ರಜಾವಾಣಿಯಲ್ಲಿ ‘ರಾಮಭಜನೆ’ಗೆ ಮಿಸಲಾದ ಭರ್ತಿ ಆರು ಪುಟಗಳ ಪುರವಣಿ. ಇಂಥ ಪುರವಣಿಗಳು, ವಸ್ತುನಿಷ್ಠ ಪತ್ರಿಕಾ ಬರಹಗಳಾಗದೆ, ಜನರ ಸಾಮೂಹಿಕ ಉನ್ಮಾದಕ್ಕೆ ಕನ್ನಡಿಯಾಗುವುದು ಸಹಜವೇ. ಬೇರೆ ಎಲ್ಲ ಪತ್ರಿಕೆಗಳೂ ಸಂಪೂರ್ಣ ಭಜನೆಯಲ್ಲೇ ಮುಳುಗಿರುವಾಗ ಪ್ರಜಾವಾಣಿಯೊಂದು ಅಪವಾದವಾಗಲು ಸಾಧ್ಯವೇ? (ದಿ ಹಿಂದೂ ಮತ್ತು ದಿ ಟೆಲಿಗ್ರಾಫ್ ಪತ್ರಿಕೆಗಳು ತುಸು ಸಮತೋಲ ಕಾಯ್ದುಕೊಂಡಿವೆ.) ಪ್ರಜಾವಾಣಿಯ ಆ ಪುರವಣಿಯಲ್ಲಿ ‘ಮಂದಿರವಲ್ಲೇ ಕಟ್ಟುವೆವು… ಹೋರಾಟದ ಹಾದಿ’ ಎಂಬ ಶೀರ್ಷಿಕೆ ಕಂಡು ಕುತೂಹಲಗೊಂಡು ಓದಿದೆ. ಅದರಲ್ಲಿ ಮಂಡಲ್ ಆಯೋಗದ ವರದಿಯ ರಾಜಕಾರಣಕ್ಕೆ ಉತ್ತರವಾಗಿ ಆರಂಭವಾದ ಅಡ್ವಾಣಿ ರಥಯಾತ್ರೆ ಮುಂತಾಗಿ ಎಲ್ಲ ವಿವರಗಳೂ ಇವೆ. ಆದರೆ ಆಘಾತಕಾರಿ ಸಂಗತಿಯೆಂದರೆ ಈ ರಾಮಜನ್ಮಭೂಮಿ ಹೋರಾಟಕ್ಕೆ ಆಹುತಿಯಾದ ಸಹಸ್ರಾರು ಜೀವಗಳ ಲವಲೇಶ ಉಲ್ಲೇಖವೂ ಅಲ್ಲಿಲ್ಲ! ಇವರ ಭಕ್ತಿಯ ಪರಾಕಾಷ್ಠೆ, ಆ ನೆತ್ತರ ನೆನಪನ್ನೂ ಅಳಿಸಿಹಾಕಿತೇ?….

ರಥಯಾತ್ರೆ ನಡೆದಿದ್ದು 1990ರ ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ. ಈ ಯಾತ್ರೆಯಿಂದಲೇ ಪ್ರಚೋದನೆಗೊಂಡು ಸೆಪ್ಟೆಂಬರ್ 1 ರಿಂದ ನವೆಂಬರ್ 20ರವರೆಗಿನ ಅವಧಿಯಲ್ಲಿ ದೇಶಾದ್ಯಂತ 166 ಪ್ರತ್ಯೇಕ ಕೋಮುಗಲಭೆಗಳು ನಡೆದು ಒಟ್ಟು 564 ಜನ ಪ್ರಾಣ ತೆತ್ತರೆಂದು ವರದಿಗಳು ಹೇಳುತ್ತವೆ. ಇದು ಅಲ್ಲಿಗೇ ನಿಲ್ಲಲೂ ಇಲ್ಲ. ಇದೇ ರಾಮಜನ್ಮಭೂಮಿ ಆಂದೋಲನ 1992ರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೂ ಕಾರಣವಾಯಿತು. ಬಾಬರಿ ಮಸೀದಿ ನೆಲಕ್ಕುರುಳಿದ ಸಂದರ್ಭದಲ್ಲೇ ಅಯೋಧ್ಯೆಯಲ್ಲಿ ಮತ್ತೂ ಒಂದಷ್ಟು ಮಸೀದಿಗಳು ನಾಶವಾದವು. (ಯಾಕೋ ಯಾರಿಗೂ ಆ ಕಡೆ ಗಮನವಿಲ್ಲ).

ಭಾರತೀಯ ಸಮಾಜದ ಸೌಹಾರ್ದ ಪರಂಪರೆಯನ್ನು ಶಾಶ್ವತವಾಗಿ ಸುಟ್ಟುಹಾಕಿದ ಈ ಐತಿಹಾಸಿಕ ಅನಾಹುತದ ಪರಿಣಾಮವಾಗಿ ದೇಶಾದ್ಯಂತ ಮತ್ತೆ ಗಲಭೆಗಳು ಭುಗಿಲೆದ್ದು ಎರಡು ಸಾವಿರಕ್ಕೂ ಹೆಚ್ಚು ಜೀವಗಳು ಆಹುತಿಯಾದವು. ಇದಕ್ಕೆ ಪ್ರತೀಕಾರ ರೂಪದಲ್ಲಿ 1993ರಲ್ಲಿ ಸಂಭವಿಸಿದ ಮುಂಬಯಿ ಬಾಂಬ್ ಸ್ಫೋಟಗಳಿಂದ ಒಂದೇ ದಿನ 257 ಜನ ಪ್ರಾಣ ನೀಗಿದರು. ಆದರೆ ನಾವು ಆ ಬಾಂಬ್ ಸ್ಫೋಟವನ್ನು ಮಾತ್ರ ಭಯೋತ್ಪಾದಕ ಕೃತ್ಯ ಎಂದು ಬಣ್ಣಿಸುತ್ತಿದ್ದೇವೆ…..

ಏನೇ ಆಗಲಿ, ಅಯೋಧ್ಯೆಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಮೂರ್ತಿಯಂತೂ ಸುಂದರವಾಗಿ ಕಣ್ಮನ ತುಂಬುವಂತಿದೆ. ಆದರೆ ಈ ಎಲ್ಲ ಸಾವುನೋವುಗಳನ್ನು ನೆನೆದು ಆ ಬಾಲರಾಮನ ಎಳೆ ಹೃದಯ ಮರುಗಲಾರದೇ? ಹರಿದ ನೆತ್ತರ ಕೋಡಿಯನ್ನು ಕಂಡು ಕರುಳು ಕಿವುಚಿ ಬರಲಾರದೇ? ಆ ಮುದ್ದುಮುಖದ ಸಿಗ್ಧ ಮಂದಹಾಸ ಮಾಸಿಹೋಗಲಾರದೇ?……

ನಮ್ಮ ಕಾಲದ ಸಾಕ್ಷಿಪ್ರಜ್ಞೆಯಂತಿರುವ ದೇವನೂರ ಮಹಾದೇವ ತಮ್ಮ ‘ಕುಸುಮಬಾಲೆ’ ಕೃತಿಗೆ ಪ್ರೇರಣೆ ನೀಡಿದ ಮೂರು ಸಂಗತಿಗಳನ್ನು ಸ್ಮರಿಸುತ್ತಾರೆ. ಆ ಮೂರರಲ್ಲೊಂದು ಹೀಗಿದೆ:

ಕೆಲ ವರ್ಷಗಳ ಹಿಂದೆ ನನಗೆ ಗೊತ್ತಿದ್ದ ದಲಿತ ಸಂಘಟನೆಯಲ್ಲಿದ್ದ ಸ್ನೇಹಿತನೊಬ್ಬನ ಕೊಲೆಯಾಯಿತು. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ‘ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು’ ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು….

ಈಗ ರಾಮನಿಗಾಗಿ ಸಾವಿರ ಕೋಟಿ ಮೀರಿದ ವೈಭವೋಪೇತ ಮಂದಿರ ಎದ್ದು ನಿಂತಿದೆ. ದೇಶದ ಬೀದಿ ಬೀದಿಗಳಲ್ಲಿ ರಾಮ ಮತ್ತೆ ಹುಟ್ಟಿ ಬಂದನೆಂಬ ಸಡಗರ ಮನೆ ಮಾಡಿದೆ. ಈ ಸಡಗರವೇ ಬಿಜೆಪಿ ಪಕ್ಷದ ಹಾಗೂ ಹಾಲಿ ರಾಮಮಂದಿರದ ಮಾಲೀಕನಂತೆ ಕಂಡುಬರುತ್ತಿರುವ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಅಭೂತಪೂರ್ವ ಚುನಾವಣಾ ಗೆಲುವಿಗೆ ರಹದಾರಿಯಾದರೆ ಆಶ್ಚರ್ಯಪಡುವಂಥದೇನೂ ಇಲ್ಲ. ಆದರೆ ಈ ವೈಭವ, ಆ ಸಹಸ್ರಾರು ಜೀವಗಳ ರಕ್ತದ ಕಲೆಯನ್ನು ಒರೆಸಿ ಹಾಕಿಬಿಡಬಲ್ಲುದೇ?

ಗಾಂಧೀಜಿ, ದಲಿತರಿಗೆ ಪ್ರವೇಶ ನೀಡದ ದೇವಸ್ಥಾನಗಳಿಗೆ ಸ್ವತಃ ಕಾಲಿಡುತ್ತಿರಲಿಲ್ಲ. ಒಮ್ಮೆ ಅವರ ಆಪ್ತ ಸಹಾಯಕ ಮಹಾದೇವ ದೇಸಾಯಿ ಪುರಿ ದೇವಸ್ಥಾನಕ್ಕೆ ಹೋಗಿ ಬಂದರೆಂದು ಬಾಪೂ, ದೇಸಾಯಿ ಮೇಲೆಯೇ ಮುನಿಸಿಕೊಂಡಿದ್ದರು. (ಪುರಿ ಗುಡಿಯಲ್ಲೂ ದಲಿತರಿಗೆ ಪ್ರವೇಶವಿರಲಿಲ್ಲ.) ಈಗ ನಮ್ಮ ಅಂತಃಕರಣ ಇನ್ನೂ ಉಸಿರಾಡುತ್ತಿದ್ದರೆ, ಸಹಸ್ರಾರು ಜನರ ಮಾರಣಹೋಮದ ಅಡಿಪಾಯದ ಮೇಲೆದ್ದ ಈ ಭವ್ಯ ಮಂದಿರದಿಂದ ನಾವೂ ದೂರ ಉಳಿಯಬೇಕಲ್ಲವೇ? ಗಾಂಧೀಜಿ ಹತ್ಯೆಯಾದಾಗ ಹಲವರು ಸಿಹಿ ಹಂಚಿ ತಿಂದಿದ್ದರಂತೆ. ಸದ್ಯದ ರಾಮನಾಮದ ಉನ್ಮಾದವೂ, ಹತ್ಯೆ ನಂತರ ಸಿಹಿ ಹಂಚಿ ತಿಂದಂತಲ್ಲವೇ?…

ಜೊತೆಗೆ, ರಾಷ್ಟ್ರಪತಿ ಪೀಠದಲ್ಲಿರುವ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಈ ಸಮಾರಂಭದ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲವಲ್ಲ! ಜಾತಿ ಕಾರಣಕ್ಕಾ? ಅಥವಾ ಅವರ ವೈಧವ್ಯ ಅಮಂಗಳಕರ ಎಂದು ಈ ವಿಪ್ರಶ್ರೇಷ್ಠರು ತೀರ್ಮಾನಿಸಿದ್ದರಾ? ಇನ್ನು ಇಂದಿನಿಂದ ರಾಮರಾಜ್ಯ ಆರಂಭ ಎಂದು ಎಲ್ಲರೂ ಕೊಂಡಾಡಿದರಲ್ಲ, ಇದೇನಾ, ಇವರು ಹೇಳುವ ರಾಮರಾಜ್ಯ?….

  • ಎನ್.ಎಸ್.ಶಂಕರ್, ಹಿರಿಯ ಪತ್ರಕರ್ತರು

Leave a Reply