ಬುಕಾನನ್ ಪ್ರಯಾಣದ ಪುಟಗಳು

2 years ago

ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಫ್ರಾನ್ಸಿಸ್ ಬುಕಾನನ್ ಎನ್ನುವ ಮನುಷ್ಯ ತಿರುಗಾಡಿ ದಾಖಲಿಸಿದ 200 ವರ್ಷಗಳ ಹಿಂದಿನ ಜನಜೀವನದ ಬಹುದೊಡ್ಡ ಚಿತ್ರಣ. 

ಚರಿತ್ರೆಯ ಬೆನ್ನು ಹತ್ತಿ ಹಲವು ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವುದು ಈ ಕಾಲದ ಬಹುದೊಡ್ಡ ಅನಿವಾರ್ಯ. ಚಾರಿತ್ರಿಕ ವಿಸ್ಮೃತಿ ಒಂದು ಅಪಾಯಕಾರಿ ಅಂಶ. ವರ್ತಮಾನದಲ್ಲಿ ನಿಂತು, ಭೂತವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಕೀಳರಿಮೆಗಳನ್ನು ಕಳೆದುಕೊಂಡು ನೆಮ್ಮದಿಯ, ಹೆಮ್ಮೆಯ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಹಿಂದಿನ ವಿಚಾರಗಳನ್ನು ಮೆಲುಕು ಹಾಕಬೇಕು.

ದುರದೃಷ್ಟವೇನೆಂದರೆ ನಾವು ಚರಿತ್ರೆಯನ್ನು ಪುರಾಣವನ್ನಾಗಿ ಕಲ್ಪಿಸಿಕೊಳ್ಳುವ ಜಾಯಮಾನದವರು. ನಮ್ಮ ತಾತ ಮುತ್ತಾತಂದಿರಿಗೆ ಅಕ್ಷರವೇ ಗೊತ್ತಿರಲಿಲ್ಲ. ಓದು ಬರಹ ತಿಳಿಯದ ಅವರು ಚರಿತ್ರೆಯನ್ನು ದಾಖಲಿಸುವ ಬೌದ್ಧಿಕ ಕೆಲಸ ಮಾಡಲಿಲ್ಲ. ಅಕ್ಷರ ಕಲಿತಿದ್ದ ಬ್ರಾಹ್ಮಣರಿಗೆ ಚರಿತ್ರೆ ಎಂದರೆ ಅಲರ್ಜಿ. ನಮ್ಮ ದೇಶಕ್ಕೆ ಬಂದ ವಿದೇಶಿ ಯಾತ್ರಿಕರು ತಮ್ಮ ಕಣ್ಣಿಗೆ ಕಂಡ ಚರಿತ್ರೆಯನ್ನು ದಾಖಲಿಸಿ ಹೋಗಿದ್ದಾರೆ. ಆ ಪೈಕಿ ಟಿಪ್ಪು ಕಾಲಾನಂತರ ಮೈಸೂರು ರಾಜ್ಯದಲ್ಲಿ ಪ್ರವಾಸ ಮಾಡಿ ತನ್ನ ನಿತ್ಯದ ಅನುಭವಗಳನ್ನು ದಿನಚರಿಯ ರೂಪದಲ್ಲಿ ಬರೆದ ಫ್ಯಾನ್ಸಿಸ್ ಬುಕಾನನ್ ಬಹುಮುಖ್ಯ ಇತಿಹಾಸಕಾರ.

ಬುಕಾನನ್ 25-04-1801 ರಿಂದ 08-05-1801 ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 25 ದಿನಗಳ ಕಾಲ ಪ್ರವಾಸ ಮಾಡುತ್ತಾನೆ. ಇಂಗ್ಲೀಷಿನಲ್ಲಿ ಬರೆದಿರುವ ಅವನ ದಿನಚರಿಯನ್ನು ಪ್ರೊ.ಎಂ.ಜಿ..ರಂಗಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ. ಅವರ ಈ ಅನುವಾದ ಅತ್ಯಂತ ಆಕರ್ಷಕವಾಗಿದೆ. ಕುತೂಹಲದಿಂದ ಓದಿಸಿಕೊಳ್ಳುತ್ತದೆ.

ಸುಮಾರು 200 ವರ್ಷಗಳ ಹಿಂದಿನ ಚಿತ್ರದುರ್ಗ ಜಿಲ್ಲೆಯ ಜನ ಜೀವನದ ಹಲವು ಚಿತ್ರಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಬೇಸಾಯಗಾರರು, ಕೃಷಿ ಕಾರ್ಮಿಕರು, ಕುರಿ ಕಾಯುವ ಕುರುಬರು, ದನ ಕಾಯುವ ಗೊಲ್ಲರು, ಗಣಿ ಕಾರ್ಮಿಕರು, ಕಬ್ಬಿಣದ ಕೆಲಸ ಮಾಡುವ ಅಕ್ಕಸಾಲಿಗರು, ವ್ಯಾಪಾರಿಗಳು, ಆಡಳಿತಗಾರರು ಹೀಗೆ ಆ ಕಾಲದ ಎಲ್ಲಾ ಸಮುದಾಯಗಳ ಬದುಕನ್ನು ಬುಕಾನನ್ ಬಹಳ ಚೆನ್ನಾಗಿ ಚಿತ್ರಿಸಿದ್ದಾನೆ.

ಆಡಳಿತಗಾರರ ಭ್ರಷ್ಟಾಚಾರ, ದರ್ಪ, ದೌರ್ಜನ್ಯ, ಪುರೋಹಿತರ ವಂಚನೆ, ಪಾಳೇಗಾರರ ದಬ್ಬಾಳಿಕೆ, ಆಕ್ರಮಣಕಾರರ ಅಮಾನವೀಯತೆ, ಶ್ರಮಿಕರ ಕಡು ಕಷ್ಟಗಳು, ವ್ಯವಸಾಯಗಾರರ ಅಸಹಾಯಕತೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಮರಾಠಿ ಆಕ್ರಮಣಕಾರ ಪರಶುರಾಮ್ ಭಾವಾನ ದುರಾಕ್ರಮಣದಿಂದ ಹಳ್ಳಿಗರ ಬದುಕು, ತಲ್ಲಣಗೊಂಡದ್ದನ್ನು ಚಿತ್ರಿಸಲಾಗಿದೆ.

ಟಿಪ್ಪುವಿನ ಕಾಲದಲ್ಲಿ ನೇಮಕಗೊಂಡಿದ್ದ ಶಾನುಭೋಗ, ಅಮಲ್ದಾರ ಮುಂತಾದ ಕಂದಾಯ ಇಲಾಖೆ ಅಧಿಕಾರಿಗಳು ರೈತರನ್ನು ಶೋಷಣೆ ಮಾಡುತ್ತಿದ್ದ ರೀತಿ ಅತ್ಯಂತ ಅಮಾನವೀಯವಾಗಿದೆ. ದೊರೆಯ ಆದೇಶ ಒಂದಾದರೆ ಇವರು ಜನರಿಗೆ ಮುಟ್ಟಿಸುತ್ತಿದ್ದ ಆದೇಶವೇ ಮತ್ತೊಂದು ಆಗಿರುತ್ತಿತ್ತು. ಹೆಚ್ಚು ಕಂದಾಯವನ್ನು ಹಳ್ಳಿಗರಿಂದ ವಸೂಲಿ ಮಾಡುತ್ತಿದ್ದ ಈ ಜನ, ರಾಜನ ಬೊಕ್ಕಸಕ್ಕೆ ಅಲ್ಪಸ್ವಲ್ಪ ಮಾತ್ರ ಕಳಿಸಿ, ಉಳಿದದ್ದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಸ್ವಾರ್ಥಿಗಳು, ಭ್ರಷ್ಟಾಚಾರಿಗಳೂ ಆಗಿದ್ದರು ಎಂಬುದನ್ನು ನಾವು ಇಲ್ಲಿ ಸ್ಪಷ್ಟವಾಗಿ ಓದಿ ಅರ್ಥ ಮಾಡಿಕೊಳ್ಳಬಹುದು.

ಯಾರು ಎಷ್ಟೇ ಕಷ್ಟಪಟ್ಟರು ತಾವು ಮಾತ್ರ ಸುಖ ಭೋಜನ ಮಾಡುತ್ತಾ, ಜಾಣತನದಿಂದ ಬದುಕುತ್ತಿದ್ದ ಬ್ರಾಹ್ಮಣರ ಬಗ್ಗೆಯೂ ಬರೆಯಲಾಗಿದೆ. ಹರಿಹರ, ದಾವಣಗೆರೆ ಮುಂತಾದ ಸ್ಥಳಗಳಲ್ಲಿದ್ದ ವ್ಯಾಪಾರಿಗಳ ಜಾಣ್ಮೆಯನ್ನು ಚಿತ್ರಿಸಲಾಗಿದೆ. ಆ ಕಾಲದ ಬಹುತೇಕ ಸಾಮಾನ್ಯ ಜನರು ಸೋಮಾರಿಗಳಾಗಿದ್ದರು. ಯಾರಲ್ಲಿಯೂ ಸಮಾನ ಮನಸ್ಥಿತಿ, ಸಮಾನ ಅಭಿಪ್ರಾಯಗಳು ಇರುತ್ತಿರಲಿಲ್ಲ. ಒಂದೇ ವಿಷಯವನ್ನು ಹಲವರು, ಹಲವು ಬಗೆಯಲ್ಲಿ ತಮಗೆ ತಿಳಿದಂತೆ ವ್ಯಕ್ತಪಡಿಸುತ್ತಿದ್ದರು. ಕಂಬಳಿ ನೇಯುವ ಕುರಿಗಾಹಿಗಳು ಹಾಗೂ ಕಬ್ಬಿಣದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಂಕಷ್ಟವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಫಲವತ್ತಾದ ವ್ಯವಸಾಯ ಯೋಗ್ಯ ಭೂಮಿಯನ್ನು ಬೀಳುಬಿಡುತ್ತಿದ್ದ ಜನರ ಸೋಮಾರಿತನವನ್ನು ಬುಕಾನನ್ ವಿವರಿಸುತ್ತಾನೆ. ಆ ಕಾಲದಲ್ಲಿ ಬಿದ್ದ ಮಳೆಯ ಬಗ್ಗೆ, ಕೆರೆ ಕಟ್ಟೆ, ನದಿ ಕಣಿವೆಗಳ ಬಗ್ಗೆ ಹಾಗೂ ಜಲಾಶಯ ನಿರ್ಮಿಸುವ ತಾಣಗಳ ಬಗ್ಗೆ ಬರೆಯಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ  ಪ್ರಾಂಶುಪಾಲರಾಗಿ ಕೆಲಸ ಮಾಡಿದ ಎಂ.ಜಿ.ರಂಗಸ್ವಾಮಿಯವರ ಪರಿಚಯ ನನಗಿರಲಿಲ್ಲ. ತೀರ ಇತ್ತೀಚೆಗೆ ಜನಪದ ವಿದ್ವಾಂಸರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಇವರನ್ನು ಪರಿಚಯಿಸಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ ಹಾಗೂ ಮಾರಿಕಣಿವೆ ಜಲಾಶಯ ಕುರಿತ ಪುಸ್ತಕಗಳನ್ನು ರಂಗಸ್ವಾಮಿ ನನಗೆ ಕೊಟ್ಟರು. ಇವರಿಂದ ಮತ್ತಷ್ಟು ಅನುವಾದಗಳು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯಾಗಿ ದೊರೆಯಲಿ ಎಂದು ಹಾರೈಸುತ್ತೇನೆ.

– ಎಲ್.ಎನ್. ಮುಕುಂದರಾಜ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ

Leave a Reply