ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕ್ಯಾಂಪಸ್ ಕವಿಗೋಷ್ಠಿ.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ನಾನು ಅಧ್ಯಯನ ಮಾಡಿದ ಅಲ್ಲಿನ ಕನ್ನಡ ಅಧ್ಯಯನ ಕೇಂದ್ರ ಎಂದೊಡನೆ ನನ್ನ ಮನಸು ಮತ್ತೆ ಮೂವತ್ತು ವರುಷಗಳಷ್ಟು ಹಿಂದಕ್ಕೆ ಓಡುತ್ತದೆ.

ಕನ್ನಡ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಡಾ.ರಂ.ಶ್ರೀ. ಮುಗಳಿ, ಶಾಸನ ತಜ್ಞರಾದ ಡಾ.ಚಿದಾನಂದ ಮೂರ್ತಿಯವರಿಂದ ಹಿಡಿದು ಅದನ್ನು ಅನೇಕ ವಿಧದಲ್ಲಿ ಕಟ್ಟಿ ಬೆಳೆಸಿ ಅದಕ್ಕೊಂದು ಸಾಂಸ್ಕೃತಿಕ ಮಹತ್ವ ಪ್ರಾಪ್ತವಾಗುವ ಹಾಗೆ ಮಾಡಿದ ಖ್ಯಾತ ಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ಚಂದ್ರಶೇಖರ ಕಂಬಾರ, ಡಾ.ಕೆ.ವಿ.ನಾರಾಯಣ, ನನ್ನ ಪ್ರೀತಿಯ ಗುರುಗಳಾಗಿದ್ದ ಪ್ರೊ.ಕಿ.ರಂ.ನಾಗರಾಜ, ಡಾ.ಹಂ.ಪ.ನಾಗರಾಜಯ್ಯ, ಡಾ.ಸಿದ್ಧಲಿಂಗಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಡಿ.ಆರ್ ನಾಗರಾಜ್, ಡಾ.ಸುಮತೀಂದ್ರ ನಾಡಿಗ್, ಬೇಂದ್ರೆಯವರ ಕಾವ್ಯದ ಬಗ್ಗೆ ವಿಭಿನ್ನ ಒಳನೋಟಗಳನ್ನು ನೀಡುತಿದ್ದ ಡಾ.ಸಿ.ವೀರಣ್ಣ ಸರ್, ಡಾ.ವಿದ್ಯಾಶಂಕರ್, ಡಾ.ಬಸವರಾಜ ಕಲ್ಗುಡಿ, ಡಾ.ಸುಮತೀಂದ್ರನಾಡಿಗ, ಡಾ.ಕೆ.ಪಿ.ಭಟ್, ಡಾ.ಕಾರ್ಲೋಸ್, ಡಾ.ಎಚ್.ಕೆ ಜಯದೇವ್, ಹೀಗೆ ಈ ನಾಡಿನ ಸಾಲು ಸಾಲು ಸಾಹಿತಿ ದಿಗ್ಗಜ ಮೇಷ್ಟ್ರುಗಳ ನೆನಪು, ಅವರ ತರಗತಿಗಳಲ್ಲಿ ಕೂತು ಅವರ ಪಾಠ ಕೇಳಿದ ನೆನಪು, ಅವರೊಡನೆ ಚರ್ಚೆ ಮಾಡಿದ ನೆನಪುಗಳು ಒತ್ತರಿಸಿ ಬರುತ್ತವೆ.

ನಾನಿನ್ನೂ ಆಗತಾನೆ ಬಿಎ. ಪದವಿ ಮುಗಿಸಿ ಕನ್ನಡ ಎಂ.ಎ ತರಗತಿಗೆ ಸೇರಿಕೊಳ್ಳಲು ತಯಾರಿ ನಡೆಸುತಿದ್ದ ಸಂದರ್ಭ. ಅಭಿನವ ಪ್ರಕಾಶನದವರು ಪ್ರಕಟಿಸಿದ ನನ್ನ ಹಾಗು ಶಿವಮೊಗ್ಗ ಸುಬ್ಬಣ್ಣನವರ ಮಗಳು ಬಾಗೇಶ್ರೀ ಅವರ ಲಲಿತ ಪ್ರಬಂಧಗಳ ಸಂಕಲನ, ‘ಇಪ್ಪತ್ತೆರಡರ ಅಳಲು'ನ್ನು ಗುರುಗಳಾದ ಡಾ.ಬಸವರಾಜ ಕಲ್ಗುಡಿ ಅವರು ಬಿಡುಗಡೆಗೊಳಿಸಿ ನೀಡಿದ ಸಲಹೆಗಳಿಗೆ ಆಕರ್ಷಿತನಾಗಿ ಅವರು ಪಾಠಮಾಡುತ್ತಾರೆ ಎಂಬ ಕಾರಣಕ್ಕೂ ನಾನು ಪಾಶಾಣ ಹೃದಯಿಗಳು ಮಾತ್ರ ಓದಬಹುದಾದ ನೀರಸ ಸಬ್ಜೆಕ್ಟ್ ಅಂತ ಓರಗೆಯವರೆಲ್ಲಾ ಗೇಲಿ ಮಾಡುತಿದ್ದಾಗಲೂ ಶಾಸನಶಾಸ್ತ್ರವನ್ನು ವಿಶೇಷ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೆ. ಶಾಸನ ವಿಭಾಗದ ಮತ್ತೊಬ್ಬರು ಪ್ರಾಧ್ಯಾಪಕರಾದ ಎಚ್.ಕೆ ಜಯದೇವ್ ಅವರು ಶಾಸನ ಓದುವುದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿದರೂ ಕೇಳದೆ ಅದನ್ನೇ ಆಯ್ಕೆ ಮಾಡಿಕೊಂಡಿದ್ದೆ. ಅದರಲ್ಲಿ ಒಳ್ಳೆ ಅಂಕಗಳು ಬಂದರೂ ನನ್ನೊಳಗಿದ್ದ ಕವಿ ಅಂತಿಮವಾಗಿ ನನ್ನ ಕಾವ್ಯಲೋಕದ ಕಡೆಗೇ ಎಳೆದು ತಂದು ನಿಲ್ಲಿಸಿದ ಬಿಡಿ!

ಗುರುಗಳಾದ ಪ್ರೊ.ಬರಗೂರು ರಾಮಚಂದ್ರಪ್ಪನವರು ಅದಾಗಲೇ ಚಲನಚಿತ್ರ ನಿರ್ದೇಶಕರಾಗಿ, ಗೀತರಚನಕಾರರಾಗಿ ದೊಡ್ಡ ಹೆಸರು ಮಾಡಿದ್ದರು. ಅವರು ಆಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರೂ ತಪ್ಪದೆ ತರಗತಿ ತೆಗೆದುಕೊಳ್ಳುತಿದ್ದರು. ಬಹಳಷ್ಟು ಪ್ರಾಧ್ಯಾಪಕರು ಕಾರಿನಲ್ಲಿ ಬರ್ತಾ ಇದ್ದರೂ ಬರಗೂರು ಮಾತ್ರ ಬಿ.ಟಿ.ಎಸ್ ಅಥವಾ ಕ್ಯಾಂಪಸ್ ಬಸ್ನಲ್ಲೇ ಪ್ರಯಾಣ ಮಾಡ್ತಾ ಇದ್ರು. ಕಿ.ರಂ ಸರ್ ಕೂಡಾ ಇದೇ ಥರಾ. ಇಬ್ಬರಿಗೂ ತರಗತಿಯ ಬಗ್ಗೆ ವಿಪರೀತ ಕಳಕಳಿ. ಬರಗೂರಿಗೆ ತಡವಾಗಿ ತರಗತಿಗೆ ಬರುವವರ ಬಗ್ಗೆ ಹಾಗೂ ಸುಮ್ಮನೆ ಬುದ್ಧಿವಂತಿಕೆಯ ಪ್ರದರ್ಶನಕ್ಕೆಂದೇ ತರಗತಿಯಲ್ಲಿ ಪ್ರಶ್ನೆ ಕೇಳಿದರೆ ವಿಪರೀತ ಸಿಟ್ಟು ಬರುತ್ತಿತ್ತು. ತರಗತಿಯ ಆಚೆ, ಅವರ ಚೇಂಬರಿಗೆ ಹೋಗಿ ಎಷ್ಟು ಕೇಳಿದರೂ ಸಾವಧಾನದಿಂದಲೇ ಬರಗೂರರು ಉತ್ತರ ಕೊಡುತಿದ್ದರು.
ಕಿ.ರಂ ಗೆ ಸಮಯದ ಅನ್ನೋದಕ್ಕಿಂತ ಟೈಮ್ ಟೇಬಲ್ಲಿನ ಪರಿವೇ ಇರ್ತಾ ಇರಲಿಲ್ಲ. ಮುಂದಿನ ಕ್ಲಾಸಿಗೆ ಟೈಮಾಯ್ತು ಅಂತ ಯಾರಾದರೂ ಎಚ್ಚರಿಸಿದರೆ ಅವರು ಕೆಂಡಾಮಂಡಲವಾಗಿಬಿಡುತಿದ್ದರು. ಅವರಿಗೆ ಸಿಲಬಸ್ ನ ಹಂಗೂ ಇರಲಿಲ್ಲ. ವಿದ್ಯಾರ್ಥಿಗಳಾದ ನಮಗೆ ಈವಯ್ಯ ಔಟ್ ಆಫ್ ಸಿಲಬಸ್ ಹೋಗ್ತಾ ಅವರೆ, ಹೀಗಾದರೆ ಸಿಲಬಸ್ ಗತಿ ಗೋವಿಂದ! ಅಂದ್ಕೋತಾ ಇದ್ವಿ. ಪಂಪನ ಬಗ್ಗೆ ಪಾಠ ಶುರು ಮಾಡಿದ ಕಿ.ರಂ. ಡಾಂಟೆ, ಗಯಟೆ, ಟಾಲ್ಸ್ಟಾಯ್, ಗಾರ್ಕಿ ಹೀಗೆ ಜಗತ್ತಿನ ಮಹಾಕವಿಗಳ ಬಗ್ಗೆ ಎಲ್ಲ ಹೇಳಿಯೇ ಕ್ಲಾಸ್ ಬಿಡ್ತ ಇದ್ದದ್ದು. ಅಷ್ಟೊತ್ತಿಗೆ ಗಂಟೆ ಎರಡಾದರೂ ಸರಿಯೇ ಮೂರಾದರೂ ಸರಿಯೆ. ಕಿ.ರಂ ಕ್ಲಾಸ್ ಅಂದರೆ ಸಮಯ ಊಟ, ನೀರುಗಳ ಪರಿವೆ ಇಲ್ದೆ ಕೇಳುವ ಸಹನೆ, ಜ್ಞಾನದ ಹಸಿವು ಇದ್ದವರಿಗೆ ಮಾತ್ರ ಸರಿ. ಇಲ್ದೆ ಇದ್ರೆ ಈವಯ್ಯಾ ಕುಯ್ತಾವ್ನೆ ಅಂತ ಗೊಣಗಿಕೊಂಡೇ ಕೂರದೆ ವಿಧಿ ಇರುತ್ತಿರಲಿಲ್ಲ. ಅವರ ಅಗಾಧ ಓದಿನ ಹರಹು, ಅದನ್ನು ತನ್ನ ವಿದ್ಯಾರ್ಥಿಗಳಿಗೆ ಹೇಳಲೇಬೇಕೆಂಬ ಅವರ ಸಂಕಲ್ಪ ಅದನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಾಗ ಅವರ ಮುಖದಲ್ಲಿ ಕಾಣುತಿದ್ದ ಸಂತೃಪ್ತಿಯಿಂದಷ್ಟೆ ತಿಳಿಯಬಹುದಾಗಿತ್ತು. ನಾನು ಮೆಷ್ಟ್ರಾಗುವ ತನಕ ನನಗೆ ಅಧ್ಯಾಪನ ವೃತ್ತಿಯಲ್ಲಿ ಮೇಷ್ಟ್ರಿಗೆ ಸಿಗುತ್ತಿದ್ದ ಇಂತಹ ಪರಾಕಷ್ಠೆಯ ಆನಂದದ ಅರಿವಾದಾಗ ಕಣ್ಣ ಮುಂದೆ ಬರುತಿದ್ದುದೇ ಕಿ.ರಂ. ಇಂತಹ ಕಿ.ರಂ ಮೇಷ್ಟ್ರನ್ನು ಮರೆತೇನೆಂದರೆ ಮರೆಯಲಿ ಹೇಗೆ...?

ನಾನು ಎಂ.ಎ ವಿದ್ಯಾರ್ಥಿಯಾಗಿದ್ದಾಗ ನನ್ನ ಕವಿತೆಗಳನ್ನು ಓದಿ, ತಿದ್ದಿ ಕವಿತಾ ಸಂಕಲನಗಳಲ್ಲಿ ಪ್ರಕಟಿಸಿದ ಬರಗೂರು ಮೇಷ್ಟ್ರು, ನನ್ನ ಮೊದಲ ಸಂಕಲನ ಪ್ರಕಟವಾದಾಗ ಅದನ್ನು ದೂರದರ್ಶನ ಕಾರ್ಯಕ್ರಮದಲ್ಲಿ ಪರಿಚಯಿಸಿ ಪ್ರೋತ್ಸಾಹಿಸಿದ ಬರಗೂರು ಮೇಷ್ಟ್ರು, 'ತುಂಬಾ ಚೆನ್ನಾಗಿ ಕವಿತೆ ಬರಿತಾನೆ' ಅಂತ ಯಾವುದೇ ಬಿಗುಮಾನವಿಲ್ಲದೆ ಸಿಕ್ಕಸಿಕ್ಕವರಿಗೆಲ್ಲಾ ಬಾಯಿ ತುಂಬಾ ಕೊಂಡಾಡುತಿದ್ದ, ನನ್ನ ಗುರುಗಳು, ಪಿಎಚ್.ಡಿ ಗೆ ಮಾರ್ಗದರ್ಶಕರೂ ಆಗಿದ್ದ ಸಿದ್ಧಲಿಂಗಯ್ಯ ಮೇಷ್ಟ್ರು, 'ಈ ಹುಡುಗನ ಥರಾ ಪಂಪನ ಪದ್ಯಗಳನ್ನು ಹೇಳ್ತೀರಾ' ಅಂತ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಆಗಲೇ ಊರೂರು ಮೆರೆಸಿದ ಹಂಪನಾ ಮೇಷ್ಟ್ರು,'ಈ ಹಂಪ. ಇರೊವರೆಗೂ ಪಂಪನ ಬಗ್ಗೆ ಭಯ ಬೇಡ ' ಎಂಬ ಭರವಸೆ ಕೊಡುತ್ತಲೇ ಪಂಪನ ಬಗ್ಗೆ, ಹಳಗನ್ನಡ ಕಾವ್ಯಗಳ ಬಗ್ಗೆ ಪ್ರೀತಿ ಹುಟ್ಟಿಸಿದ, ದಲಿತ, ಬಡ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಅಂತಃಕರಣ ಉಳ್ಳ ಮೇಷ್ಟ್ರು ಹಂಪನಾ ಅವರನ್ನು ಮರೆತೇನೆಂದರೆ ಮರೆಯಲಿ ಹೇಗೆ?

ಇನ್ನೂ ಕನ್ನಡ ಛಂದಸ್ಸಿನ ತರಗತಿಯನ್ನು ತರಗೆದುಕೊಳ್ಞುತಿದ್ದ ಡಾ.ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ತರಗತಿ ಎಂದರೆ ನಮಗೆ ಪರಮ ಪ್ರೀತಿ. ಛಂದಸ್ಸು ವ್ಯಾಕರಣಗಳ ಬಗ್ಗೆ ಎಂತಹ ಭಯ, ಅಸಡ್ಡೆ ಇದ್ದವರಿಗೂ ಅದನ್ನು ಮಕ್ಕಳ ಆಟದ ಹಾಗೆ, ಆಸಕ್ತಿ ಹುಟ್ಟಿಸಿಬಿಡುತ್ತಿದ್ದರು ಎನ್ .ಎಸ್. ಎಲ್. ಛಂದಸ್ಸಿನ ಅನೇಕ ಪ್ರಕಾರಗಳಿಗೆ ಕನ್ನಡ ಕಾವ್ಯ ಲೋಕವನ್ನೇ ಬೋರ್ಡಿನ ಮೇಲೆ ಇಳಿಸಿಬಿಡುತಿದ್ದರು. ಕವಿತೆಗಳಿಗೆ ಪ್ರಸ್ತಾರ ಹಾಕುವುದಂತೂ ಭಟ್ಟರ ತರಗತಿಯಲ್ಲಿ ಬಲು ಖುಷಿಯ ಸಂಗತಿಯಾಗಿರುತಿತ್ತು. ನಾದಬ್ರಹ್ಮ ಹಾಗೂ ಕಾವ್ಯಸರಸ್ವತಿ ಅವರ ನಾಲಗೆಯ ತುದಿಯಲ್ಲಿ ನರ್ತನ ಮಾಡುತಿದ್ದರು. ನಾನು ಅಳುಕಿನಿಂದಲೇ ಅವರ ಕೊಠಡಿಗೆ ಹೋಗಿ ನನ್ನ ಕವಿತೆಗಳನ್ನು ತೋರಿಸುತಿದ್ದೆ. 'ನಿನ್ನ ಕವಿತೆಯಲ್ಲೂ ಒಂದು ಛಂದಸ್ಸು ಇರುತ್ತೆ .. ಅದನ್ನು ನೀನು ಕಂಡುಕೋಬೇಕು. ಆಧುನಿಕ ಕವಿತೆಗೂ ಕೂಡಾ ಛಂದಸ್ಸನ್ನು ಸಂಪೂರ್ಣವಾಗಿ ಬಿಡಲು ಆಗಿಲ್ಲ. ಛಂದೋಲಯಗಳಿಲ್ಲದ ಕವಿತೆ ಕವಿತೆ ಹೇಗಾದೀತು ? ಅದು ಗದ್ಯವೇ. ಒಳ್ಳೆಯ ಗದ್ಯದಲ್ಲೂ ಕಾವ್ಯದ ಲಾಲಿತ್ಯ ಹಾಗೂ ಛಂದೋ ಲಯಗಳು ಅಂತರ್ಗತವಾಗಿರುತ್ತೆ' ಅಂತ ಕಿವಿ ಮಾತು ಹೇಳುತಿದ್ದರು. ಭಟ್ಟರ ಬಾಯಲ್ಲಿ ಛಂದಸ್ಸು ಕೇಳುವುದೆಂದರೆ ಕಾವ್ಯವನ್ನು ಕೇಳುವುದೇ ಆಗಿತ್ತೇ ಹೊರತು ಬೇರೆ ಅಂತ ನಮಗೆ ಅನ್ನಿಸುತ್ತಿರಲಿಲ್ಲ.

ಬಹಳ ಸಣ್ಣ ವಯಸ್ಸಿಗೇ ಬಹುಶೃತ ವಿಮರ್ಶಕರಾಗಿದ್ದ. ಡಾ.ಡಿ.ಆರ್ ನಾಗರಾಜ್ ಅವರು ನನ್ನ ಗುರುಗಳಾಗಿದ್ದರು ಎಂಬುದು ಅತ್ಯಂತ ಹೆಮ್ಮೆಯ ಸಂಗತಿ. ಅವರು ನಮಗೆ ಕಾರಂತರ ಕಾದಂಬರಿಗಳನ್ನು ಬೋಧಿಸುತ್ತಿದ್ದರು. ಅವರ ವಿಮರ್ಶನ ಪ್ರಜ್ಞೆ, ತೌಲನಿಕ ಹಾಗೂ ಆನ್ವಯಿಕ ವಿಮರ್ಶೆಗಳ ಮೂಲಕ ಕಾರಂತರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಕಥನಪ್ರತಿಭೆಯೊಂದಿಗೆ ಹೋಲಿಸಿ ಅವರು ಹೇಳುತಿದ್ದ ರೀತಿ ನಮ್ಮ ಆ ವಯಸ್ಸಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ನಾನಂತೂ ಅರಿಯೆ. ನಾನು ಮೇಷ್ಟ್ರಾದ ಮೇಲೆಯೆ ಅವರ ಶಕ್ತಿಶಾರದೆಯ ಮೇಳ, ಸಾಹಿತ್ಯ ಕಥನ ಇಂತಹ ವಿಮರ್ಶೆಗಳನ್ನು ಅದೆಷ್ಟೋ ಸಲ ಓದಿ ಓದಿ ಒಂದಿಷ್ಟು ಅರ್ಥಮಾಡಿಕೊಳ್ಳಲು ನನಗಾಗಿದ್ದು. ಅದು ನನ್ನ ಓದಿನ ಮಿತಿಯೇ ಹೊರತು ಖಂಡಿತಾ ನಮ್ಮ ಗುರುಗಳಾದ ಡಿ.ಆರ್ .ಎನ್ ಅವರ ಮಿತಿ ಅಲ್ಲ. ಇಂತಹ ಗುರುಗಳ ನೆನಪನ್ನು ಮರೆತೇನೇದರೆ ಮರೆಯುವುದಾದರೂ ಹೇಗೆ ...?
ಇನ್ನು ವಿ.ವಿ ಕ್ಯಾಂಪಸ್ನಲ್ಲಿ ಸದಾ ನಳನಳಿಸುವ ಹಸಿರು, ಬಿಸಿಲ ಧಗೆಯಲ್ಲೂ ಹೂನಗೆ ಸೂಸುವ ಸಸ್ಯಶಾಮಲೆಯರು, ಮರಮರಕೂ ತಮ್ಮ ಪ್ರೀತಿಯ ನಾಮಾಂಕಿತದ ಹಚ್ಚೆ ಹೊಯ್ದು ಪ್ರೀತಿಯ ಪಿಸು ಮಾತುಗಳಲ್ಲಿ ಮೈಮರೆತ ಹುಚ್ಚು ಪ್ರೇಮಿಗಳು, ಅಲ್ಲಿನ ಲಕ್ಷಾಂತರ ಗ್ರಂಥರಾಶಿಯ ಜ್ಞಾನದೇಗುಲದ ಜ್ಞಾನಭಾರತಿ, ಘಮಗುಡುವ ದೋಸೆ, ಬೋಂಡಾ, ಟೀಗಳ ಮೂಲಕ ಪಡ್ಡೆ ಹುಡುಗ ಹುಡುಗರ ಅಡ್ಡೆಯಾಗುತಿದ್ದ ಕ್ಯಾಂಪಸ್ ಕ್ಯಾಂಟೀನು, ಎಲ್ಲಾ ವಿಭಾಗದ ಕಾರ್ಯಕ್ರಮಗಳಲ್ಲಿ ತನ್ನ ವನಪು ವಯ್ಯಾರದ ಮೂಲಕ ಸುಮಧುರ ಕಂಠಮಾಧುರ್ಯದ ಹಾಡು ಹಾಡಿ ಮೋಡಿ ಮಾಡುತ್ತಿದ್ದ ಕ್ಯಾಂಪಸ್ ಗಂಧರ್ವಕನ್ಯೆಯಂತಹ ಎಲ್ ಜಿ ಮೀರಾ, ಅವರ ಪರಮಾಪ್ತ ಪ್ರಾಣಸಖಿ ವಸುಂಧರಾ, ಆಹಾ ಹಾ ಮಲ್ಲಿಗೆ ಹಾಡಿನ ಖ್ಯಾತಿಯ ಮಂಜುನಾಥ್, ಆಟಕ್ಕೆ ನಿಂತರೆ ಅರ್ಧಶತಕ ಬಾರಿಸದೆ ಹಿಂತಿರುಗದ ಬಲಿಷ್ಠ ದಾಂಡಿಗ ಕೆಂಪೇಗೌಡ, ಭವಿತವ್ಯದ ರಾಜಕಾರಣಿ ಅಂದಾನಿ, ಆಗಲೇ ಕನ್ನಡ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಕವಿ ಕಾವೆಂಶ್ರೀನಿವಾಸಮೂರ್ತಿ, ನಮ್ಮ ಕಾಲಕ್ಕಾಗಲೇ ವಿಮರ್ಶಕಿಯಾಗಿ ಹೆಸರು ಮಾಡಿದ್ದ ನಮ್ಮ ಸೀನಿಯರ್, ಡಿ.ಆರ್.ಎನ್ ಅವರ ಪರಮಶಿಷ್ಯೆ ಎಂ.ಎಸ್ ಆಶಾದೇವಿ ಮೇಡಮ್ ಇವರುಗಳನ್ನು ಮರೆತೇನೆಂದರೂ ಮರೆಯಲಿ ಹೇಗೆ ?

ಈ ಕಾಲದ ಬಹುದೊಡ್ಡ ರಂಗಪ್ರತಿಭೆ ಕವಿ, ಕೆ.ವೈ.ನಾರಾಯಣಸ್ವಮಿ, ವಿಮರ್ಶಕ, ಕವಿ, ರಾಮಲಿಂಗಪ್ಪ ಟಿ.ಬೇಗೂರು, ಎಸ್.ಪಿ .ಬಿ ಕಂಠದ ಬಿ.ಸಿ .ನಾಗೇಂದ್ರಕುಮಾರ್ ಹಾಡು, ಚಿಂತನಪಲ್ಲಿ ಸಂಗೀತ ಪರಂಪರೆಯ ಪ್ರತಿಭೆ ನಾಗೇಂದ್ರಶಾಸ್ತ್ರಿ, ಅಗಲಿದ ಕೆ.ಜಿ ರೇಖಾಳ ಚಿತ್ರಾನ್ನ ಪುಳಿಯೋಗರೆ, ಧನಲಕ್ಷ್ಮಿಯ ಪುಳ್ಚಾರ್ ತಿಂಡಿಗಳ ಅಕ್ಷಯ ಪಾತ್ರೆಯಂತಹ ಟಿಫಿನ್ ಬಾಕ್ಸ್ , ತಮಿಳು ಸೆಲ್ವಿಯ ಪ್ರತಿಭಾವಿಲಾಸ, ಶಾಸನತಜ್ಞ ಎಂ.ಜಿ.ಮಂಜುನಾಥ್, ಕಥೆಗಾರ ಅಮರೇಶ ಹೊಲ್ಲಂಬಳ್ಳಿ, ಕಾಲಿನ ಇಮ್ಮಡಿಯವರೆಗೂ ರೇಶಿಮೆಯ ಎಳೆಯಂತೆ ಮಿರುಗುವ ಉದ್ದ ಜಡೆಯ ಪುಷ್ಪಭಾರತಿ, ವಿದ್ಯಾರ್ಥಿ ಹಕ್ಕುಗಳ ವಾರಸುದಾರರಂತೆ ಹೋರಾಟಕ್ಕಿಳಿಯುತಿದ್ದ ಪುಟ್ಟಣ್ಣ, ಮಿಸ್ ಯೂನಿವರ್ಸಿಟಿ ಹಾಗೂ ಮಿಸ್ಟರ್ ಯೂನಿವರ್ಸಿಟಿ ಸ್ಪರ್ಧೆಗಳ ಮಾಯಾಲೋಕ, ಮಿಸ್ಟರ್ ಕ್ಯಾಂಪಸ್ ಹ್ಯಾಂಡ್ಸಮ್ ಗೋವಿಂದಸ್ವಾಮಿ, ಪದವಿ ಮತ್ತು ಎಂ.ಎ ಮುಗಿಯುವವರೆಗೂ ನನ್ನ ಒಂದು ದಿನವೂ ಅಗಲಿರದ ಗೆಳೆಯ ರುದ್ರೇಶಯ್ಯ, ಅವನಿದ್ದ ಕಡೆ ನಗೆಯ ಹೊನಲೇ ಹರಿಸುತಿದ್ದ ಕಾಮಿಡಿ ಕಿಲಾಡಿ ಶ್ರೀರಾಮಪುರದ ಜಗದೀಶ, ರೇಲಾ ರೇಲಾ ಹಾಡಿನ ರಂಸ್ವಾಮಿ .., ಪ್ರೀತಿಯ ಸಹಪಾಠಿ ಕವಿ ಕಂಪಲಪ್ಪ, ಮಗುಮನದ ಮಹಾಕಾಯದ ಶಾಗದಡು ದೇವರಾಜು, ಸ್ನೇಹಜೀವಿ ಭಾನುಪ್ರಕಾಶ, ಓಹಿಲೇಶ್, ಗುರುರಾಜ್ ಲೇಡಿ ರ್ಯಾಂಬೊ ವಿದ್ಯಾ, ಸೋದರ ಕವಿ ಎಲ್ ಸಿ ರಾಜು, ವಾತ್ಸಲ್ಯದ ಲಕ್ಷ್ಮೀ ಸರೋಜಿನಿ.. ಕೇರಳ ಕುಟ್ಟಿ ಎಂದರೂ ಬೈಯ್ಯದ ನಗುಮುಖದ ಗೀತಾ, ಹುಬ್ಬು ಹಲ್ಲಿನ ಉತ್ಸಾಹಿ ಚಿಲುಮೆ ಮಂಜುಳ, ಧಾರವಾಡದ ಬೆಡಗಿ ಸವಿತಾ ಕುಲಕರ್ಣಿ, ನಮ್ಮ ತರಗತಿಯ ಪ್ರೇಮಕವಿ ಸಿಪಿಲೆ ಸತೀಶ್, ಕನ್ನಡ ಹೋರಾಟಗಾರ ವಿಮರ್ಶಕ ಜೆಜಿಎನ್ ( ನಾಗರಾಜ್ ) ಸ್ಪುರದ್ರೂಪಿ ಚೆಲುವ ಚೆನ್ನಿಗ ಎ.ವಿ.ಲಕ್ಮೀನಾರಾಯಣ, ಮಿತಭಾಷಿ ಕವಿ ಎಲ್ ಸಿ ರಾಜು, ಪ್ರಥಮ ರ್ಯಾಂಕಿನ ಪ್ರತಿಸ್ಪರ್ಧಿ ಜಾಣೆ ಸುಮಾ, ನಿರ್ಮಲ ಮನಸಿನ ನಿಮ್ಮಿ ( ನಿರ್ಮಲ )ಮಹಾಮೌನಿ ಮುನಿಶಾಮಪ್ಪ, ಎಲೆ ಮರೆಯ ಕಾಯಂತೆ ಇದ್ದ ನಾಗಹನುಮಯ್ಯ, ಸದಾ ಸ್ನೇಹಿತರ ನಡುವೆ ಸೇತುವೆಯಂತಿದ್ದ ಆಪತ್ಬಾಂಧವ ಹೇಮಯ್ಯ, ನನಗೆ ಸೋದರ ಪ್ರೀತಿ ತೋರಿದ ನಟೇಶ್, ಶೇಖರಶೆಟ್ಟಿ, ಈಗಿನ ಅನೇಕ ಧಾರವಾಹಿ ಹಾಗು ಚಲನ ಚಿತ್ರಗಳಿಗೆ ಚಿತ್ರಕತೆ ಬರೆಯುವ, ಕೆಪಿಎಸ್.ಸಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಸೃಜನಶೀಲ ಬದುಕು ಕಟ್ಟಿಕೊಂಡ ಸಹಪಾಠಿ ಅನಂತ, ಜೂನಿಯರ್ ಸಿದ್ಧಲಿಂಗಯ್ಯನವರ ಹಾಗೇ ಕಾಣುತಿದ್ದ ನನ್ನ ಕವಿತೆಗಳ ಮೋಹಿ ಪುಟ್ಟಪ್ಪ, ಈ ಗೆಳೆಯ ಗೆಳತಿಯರ ನೆನಪುಗಳ ಬುತ್ತಿ ಎಂದಿಗೂ ಬರಿದಾಗದು ನನ್ನ ಪಾಲಿಗೆ.

ಕ್ಯಾಂಪಸ್ ರಜೆ ಇದ್ದಾಗಲೂ ಹಾಸ್ಟೆಲ್ ನಲ್ಲಿ ಊಟ ಕೊಡಬೇಕೆಂದು, ಫೀಸ್ ಕಡಿಮೆ ಮಾಡಿ ಎಂದು ಶತಮಾನಗಳ ಹಸಿವಿನ ಲೋಕದಿಂದ ಬಂದ ಪರಿಶಿಷ್ಟಜಾತಿ, ಪ.ಪಂಗಡಗಳ ವಿದ್ಯಾರ್ಥಿಗಳ ಮುಷ್ಕರಗಳು, ಪುಷ್ಪಕ ವಿಮಾನಕ್ಕಿಂತ ಆಪ್ಯಾಯಮಾನವಾಗಿದ್ದ ಕ್ಯಾಂಪಸ್ ಬಸ್ಸುಗಳ ಒಳಗಿನ ಪಿಸುಮಾತು,ಗಿಜಿಗಿಜಿ ಕಲರವ, ಕ್ರೀಡಾ ಪ್ರಾಧಿಕಾರದ ಕ್ರೀಡಾಕೂಟಗಳ ರೋಚಕತೆ, ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ಕನ್ನಡ ಅಧ್ಯಯನ ಕೇಂದ್ರದ ಮೂಲಕ ಸೆನೆಟ್ ಹಾಲ್ ನಲ್ಲಿ ಏರ್ಪಡಿಸುತಿದ್ದ ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ವ್ಯಕ್ತವಾಗುತಿದ್ದ ವಿದ್ವಾಂಸರ ಚರ್ಚೆ, ರಾಮಚಂದ್ರಶರ್ಮ ಹಾಗೂ ಸುಮತೀಂದ್ರ ನಾಡಿಗರ ನಡುವಿನ ತಕರಾರು ಖ್ಯಾತೆ, ಕಾಲೆಳೆತ, ಕಿ.ರಂ ಅವರ ತೀರ್ಪು… ಮರೆತೇನೆಂದರೆ ಮರೆಯಲಿ ಹೇಗೆ ? ಕಾಲದ ಕಡಲಲ್ಲಿ ತೇಲುತ ಸಾಗಿದ ಈ ಎಲ್ಲಾ ಉಸಿರಿನ ಹಡುಗುಗಳಲ್ಲಿ ರಂ.ಶ್ರೀ.ಮುಗಳಿ, ಡಾ.ಚಿದಾನಂದಮೂರ್ತಿ, ಸುಮತೀಂದ್ರ ನಾಡಿಗ್, ಜಿ.ಎಸ್.ಎಸ್, ಡಾ.ವಿದ್ಯಾಶಂಕರ್, ಡಿ.ಆರ್.ನಾಗರಾಜ್, ಕಿ.ರಂ.ನಾಗರಾಜ್, ಸಿದ್ಧಲಿಂಗಯ್ಯ ಗುರುಗಳು ತಮ್ಮ ಯಾನ ಮುಗಿಸಿ ಕಣ್ಮರೆಯಾಗಿದ್ದಾರೆ. ಅವರ ನೆನಪುಗಳು, ಅವರ ಪಾಠಪ್ರವಚನಗಳು ಮಾತ್ರ ಈಗಲೂ ಅವರ ವಿದ್ಯಾರ್ಥಿಗಳಾದ ನಮ್ಮ ಹೃನ್ಮನಗಳನ್ನು ತುಂಬಿಕೊಂಡಿವೆ. ಆ ಎಲ್ಲಾ ಗುರುಗಳನ್ನು ಮರೆತೇನೆಂದರೂ ಮರೆಯಲಿ ಹೇಗೆ ?....

ಆಗಿನ ಹಾಗೂ ಈಗಿನ ಕ್ಯಾಂಪಸ್ ಕವಿಗೋಷ್ಠಿಯ ಸಂಭ್ರಮ ಸಡಗರಗಳಲ್ಲಿ ವ್ಯತ್ಯಾಸವೇನಿಲ್ಲ. ವಿಷಾದಕರವಾದ ಸಂಗತಿಯೆಂದರೆ ಈ ಕಾಲದ ಕವಿಗಳಲ್ಲಿ ನಮ್ಮ ಕಾಲದ ಕವಿಗಳಲ್ಲಿದ್ದ ಕಾವ್ಯಪರಂಪರೆಯ ಜೊತೆಗಿನ ಅರಿವು ಅಭ್ಯಾಸ, ಅನುಸಂಧಾನಗಳ ಶ್ರದ್ಧೆ ಕಾಣುತ್ತಿಲ್ಲ. ಕವಿತೆ ಹಾಗೂ ಭಾಷಣಗಳ ಭಾಷೆಗೆ, ಲಯಕ್ಕೆ ವ್ಯತ್ಯಾಸ ತಿಳಿಯದ, ಚರ್ಚಾಸ್ಪರ್ಧೆಯಲ್ಲಿ ಪ್ರತಿಸ್ಪರ್ಧೆಯ ಎದೆನಡುಗುವಂತೆ ಮೇಜುಕುಟ್ಟಿ ಗಂಟಲು ಹರಿದುಕೊಂಡು ವಿಷಯಮಂಡಿಸುವಂತೆ ಸಮಕಾಲೀನ ಸಂಗತಿಗಳ ಬಗ್ಗೆ ಕೂಗು ಹಾಕುವುದನ್ನೆ ಕಾವ್ಯವೆಂದು ಭ್ರಮಿಸುವ, ಆದಿಪ್ರಾಸ, ಅಂತ್ಯಪ್ರಾಸಗಳ ಮಧ್ಯೆ ಕವಿತೆಯ ರೈಲು ಬಿಡುವ ದೊಡ್ಡ ದಂಡು ಕಂಡು ಎದೆ ನಡುಗದೆ ಇರದು. ಆದರೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಕಾವ್ಯಕೃಷಿಯಲ್ಲಿ ತೊಡಗಿಕೊಂಡಿರುವ ಯುವ ಕವಿಗಳ ದಂಡು ನಾಡಿನಾದ್ಯಂತ ಇದ್ದಾರೆ ಎಂಬುದೂ ಸಮಾಧಾನಕರವಾದ ವಾಸ್ತವ ಎಂಬುದೂ ಸತ್ಯವಾದ ಸಂಗತಿ. ಈ ಕಾರ್ಯಕ್ರಮಕ್ಕೆ ನನಗೆ ಆಮಂತ್ರಣವನ್ನು ನೀಡಿದ ಇಂದಿನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಮುನಿಯಪ್ಪನವರಿಗೆ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ನನ್ನ ವಿದ್ಯಾರ್ಥಿನಿ ಚೈತ್ರ ಟಿ ಅವರಿಗೂ ಅನಂತ ಧನ್ಯವಾದಗಳು.
- ಪ್ರೊ.ಟಿ.ಯಲ್ಲಪ್ಪ, ಪ್ರಾಧ್ಯಾಪಕರು




