ಜಾತಿ ಜನಗಣತಿ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿಗೆ ಸಂಬಂಧಿಸಿದಂತೆ ಸಂಪುಟ ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ನಿನ್ನೆಯ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಜಾತಿಗಣತಿ ಕುರಿತು ವಿವಿಧ ವಲಯದಿಂದ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಿನ್ನೆ ವರದಿ ನೀಡಿದೆ. ಅದರ ಕುರಿತು ನಿನ್ನೆ ಸಂಪುಟದಲ್ಲಿ ಔಪಚಾರಿಕ ಚರ್ಚೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ವರದಿಯ ಕುರಿತು ಸವಿಸ್ತಾರವಾದ ಚರ್ಚೆ ನಡೆಸಲಾಗುವುದು ಎಂದರು.

ವರದಿಯನ್ನು ಉಭಯ ಸದನಗಳಲ್ಲಿ ಮಂಡಿಸಬೇಕೇ ಅಥವಾ ಸರ್ಕಾರವೇ ನೇರವಾಗಿಯೇ ವರದಿಯನ್ನು ಬಹಿರಂಗ ಪಡಿಸಬೇಕೇ ಎಂಬುದನ್ನು ಸಂಪುಟ ನಿರ್ಧರಿಸಬೇಕಾಗುತ್ತದೆ. ಎಲ್ಲಾ ಸಚಿವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.

ಕಾಂಗ್ರೆಸ್ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರಿಗೆ ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂಬ ಆತಂಕ ಇರುವಂತಿದೆ. ಒಂದು ವೇಳೆ ಜನಸಂಖ್ಯೆ ಕಡಿಮೆ ಎಂದಾದರೆ ರಾಜಕೀಯವಾಗಿ ತೊಂದರೆಯಾಗಬಹುದು ಎಂಬ ಅನುಮಾನಗಳೂ ಇವೆ. ಆದರೆ ವರದಿ ಬಹಿರಂಗಗೊಂಡ ನಂತರ ಅದಕ್ಕೆ ಅಧಿಕೃತ ಉತ್ತರ ದೊರೆಯಲಿದೆ. ಆವರೆಗೂ ನನ್ನನ್ನೂ ಸೇರಿದಂತೆ ಹಲವರು ವದಂತಿಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ ಎಂದರು.

ನಿನ್ನೆ ಸರ್ಕಾರ ಸ್ವೀಕರಿಸಿರುವ ವರದಿ ಕಾಂತರಾಜು ಅಥವಾ ಜಯಪ್ರಕಾಶ್ ಹೆಗ್ಡೆ ಅವರ ವರದಿಯೆಂದಾಗುವುದಿಲ್ಲ. ಅದು ಹಿಂದುಳಿದ ವರ್ಗಗಳ ಆಯೋಗದ ವರದಿ ಮಾತ್ರ ಎಂದು ಸ್ಪಷ್ಟೀಕರಣ ನೀಡಿದರು.

Leave a Reply