ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದ ಯಡಿಯೂರಪ್ಪ

4 years ago

ಬೆಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ವಿಷಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತಮ್ಮ ಹೆಸರು ಇಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿರಸ್ಕರಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಅವರು, ಶಿವಮೊಗ್ಗ ಜಿಲ್ಲೆಯ ಬಹುದಿನದ ಕನಸಾದ ವಿಮಾನ ನಿಲ್ದಾಣ ನನಸಾಗುತ್ತಿದೆ. ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಇತ್ತೀಚೆಗೆ ತಾವು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯವಾದ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿರುವುದಕ್ಕೆ ತಮಗೆ ಧನ್ಯವಾದಗಳು ಎಂದಿದ್ದಾರೆ.

ಶಿವಮೊಗ್ಗದ ಈ ಹೊಸ ವಿಮಾನ ನಿಲ್ದಾಣಕ್ಕೆ ನನ್ನ ಹೆಸರನ್ನಿಡುವುದಾಗಿ ತಾವು ಘೋಷಿಸಿರುತ್ತೀರಿ. ತಮ್ಮ ಈ ವಿಶೇಷವಾದ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಇದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಘಸಂಸ್ಥೆಗಳು ಹಾಗೂ ಎಲ್ಲ ಮುಖಂಡರುಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ರಾಷ್ಟ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಹಾಗೂ ದೇಶಭಕ್ತರಿದ್ದಾರೆ. ಅವರು ನೀಡಿರುವ ಕೊಡುಗೆಗೆ ಹೋಲಿಸಿದಾಗ ನನ್ನದೊಂದು ಅಳಿಲು ಸೇವೆ ಮಾತ್ರ ಹಾಗೂ ನನ್ನನ್ನು ಸತತವಾಗಿ ಬೆಂಬಲಿಸಿ ಸಲುಹಿದ ಜಿಲ್ಲೆಯ ಜನತೆಗೆ ಸೇವೆ ಮಾಡಿದ್ದೇನೆಂಬ ಧನ್ಯತಾಭಾವ ನನ್ನದು. ಈ ಹಿನ್ನೆಲೆಯಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ ಎಂದಿದ್ದಾರೆ.

ಆದುದರಿಂದ, ತಮ್ಮ ಈ ನಿರ್ಧಾರವನ್ನು ಪುನರ್‌ ಪರಿಶೀಲಿಸಿ, ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದಂತಹ ಮಹನೀಯರ ಹೆಸರನ್ನು ಈ ಹೊಸ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಕೋರುತ್ತೇನೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡುವ ಬಸವರಾಜ ಬೊಮ್ಮಾಯಿಯವರ ಪ್ರಸ್ತಾವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ, ಖ್ಯಾತ ಸಾಹಿತಿಗಳಾದ ಕುವೆಂಪು, ಪಿ.ಲಂಕೇಶ್, ಪೂರ್ಣಚಂದ್ರತೇಜಸ್ವಿ ಮೊದಲಾದವರ ಹೆಸರಿಡಬೇಕು ಎಂಬ ಕೂಗು ಕೇಳಿಬಂದಿತ್ತು.

Leave a Reply