ರವಿ ಕೃಷ್ಣಾ ರೆಡ್ಡಿ Ravi Krishna Reddy ಮತ್ತು ಜನ ಚೈತನ್ಯ ಯಾತ್ರೆ………

4 years ago

ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಕೆಲವು ವರ್ಷಗಳಿಂದ ಪ್ರಾಮಾಣಿಕವಾಗಿ ಹೋರಾಡುತ್ತಿರುವ ಕರ್ನಾಟಕದ ಪ್ರಮುಖ ವ್ಯಕ್ತಿಗಳಲ್ಲಿ ಶ್ರೀ ರವಿ ಕೃಷ್ಣಾ ರೆಡ್ಡಿಯವರು ಒಬ್ಬರು.

ಅಮೆರಿಕದ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಇವರು ಭಾರತದಲ್ಲಿ ಸರ್ವವ್ಯಾಪಿಯಾದ ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕ ಎಂದು ಭಾವಿಸಿ ಅದರ ವಿರುದ್ಧ ಹೋರಾಡಲು ಉದ್ಯೋಗ ತೊರೆದು ಕರ್ನಾಟಕಕ್ಕೆ ಬರುತ್ತಾರೆ.

ಮೊದಲಿಗೆ ವಿವಿಧ ಸಂಘ ಸಂಸ್ಥೆಗಳು ಪಕ್ಷಗಳ ಜೊತೆ ಹೋರಾಟ ಮಾಡಿ ನಂತರ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ಸ್ಥಾಪಿಸಿ ತದನಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪಿಸಿ ನಿರಂತರ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ.

ದಿನೇ ದಿನೇ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಬಯಲಾಗುತ್ತಿರುವ ಹಗರಣಗಳ ಸರಮಾಲೆ ಇವುಗಳಿಂದ ಬೇಸತ್ತ ಯುವ ಸಮೂಹ ಆಸೆಯ ಕಣ್ಣುಗಳಿಂದ  ಈ ರೀತಿಯ ಪ್ರಾಮಾಣಿಕ ಹೋರಾಟಗಾರರತ್ತ ಆಕರ್ಷಿತವಾಗುತ್ತಿದೆ.

ಜಾಗೃತ ಮನಸ್ಥಿತಿಯ ಜನ ಬದಲಾವಣೆ ಬಯಸುವ ಮನಸ್ಸುಗಳು ಕೈ ಜೋಡಿಸುತ್ತಿದ್ದಾರೆ. ದಿಢೀರನೆ ದೊಡ್ಡ ಪರಿವರ್ತನೆ ಸಾಧ್ಯವಾಗದಿದ್ದರೂ ಬದಲಾವಣೆಯ ಮುನ್ನುಡಿ ಇದರಿಂದ ಸಾಧ್ಯವಾಗುತ್ತದೆ.

ರಾಜ್ಯದ ಜನರಲ್ಲಿ ರಾಜಕೀಯ ಪ್ರಜ್ಞೆ ಜಾಗೃತಗೊಳಿಸಲು ಜನ ಚೈತನ್ಯ ಯಾತ್ರೆಯನ್ನು ಇಂದಿನಿಂದ 24/04/2022 ಬೆಂಗಳೂರಿನಿಂದ ಪ್ರಾರಂಭಿಸುತ್ತಿದ್ದಾರೆ. ಒಂದು ವರ್ಷದಷ್ಟು ದೀರ್ಘಕಾಲ ರಾಜ್ಯವನ್ನು ಸುತ್ತುವ ಯೋಜನೆ ರೂಪಿಸಿಕೊಂಡಿದ್ದಾರೆ. ಅವರಿಗೆ ತುಂಬಾ ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ……

ಪರ್ಯಾಯ ರಾಜಕೀಯದ ಸಾಧ್ಯತೆಗಳಲ್ಲಿ ರವಿ ಕೃಷ್ಣಾ ರೆಡ್ಡಿಯವರ ಈ ಒಂದು ಪ್ರಯತ್ನ ಸಹ ಗಮನ ಸೆಳೆಯುತ್ತದೆ. ಬೇರೆ ಬೇರೆ ವ್ಯಕ್ತಿಗಳು ಮತ್ತು ಸಂಘಟನೆಗಳು ಒಟ್ಟಾಗಿ ಒಂದು ವೇದಿಕೆಯ ಅಡಿಯಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಪ್ರದರ್ಶಿಸಿದರೆ ಭ್ರಷ್ಟಾಚಾರ ಮುಕ್ತ ಕರ್ನಾಟಕದ ಕನಸು ನನಸಾಗಬಹುದು. ಹಾಗಾಗಲಿ ಎಂದು ಬಯಸುತ್ತಾ….

ವೈಯಕ್ತಿಕವಾಗಿ ನಾನು ಯಾವುದೇ ಸಂಘ ಸಂಸ್ಥೆ ಪಕ್ಷ ಸಿದ್ದಾಂತಗಳ ಪ್ರತ್ಯಕ್ಷ ಅಥವಾ ಪರೋಕ್ಷ, ಅಧಿಕೃತ ಅಥವಾ ಅನಧಿಕೃತ ಸದಸ್ಯನಲ್ಲ. ಆದರೆ ಸಮಾಜದ ಹಿತದೃಷ್ಟಿಯಿಂದ ಯಾರೇ ಉತ್ತಮ ಕೆಲಸ ಮಾಡಿದರು ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ.

  • ವಿವೇಕಾನಂದ ಎಚ್.ಕೆ., ಬರಹಗಾರರು

Leave a Reply