ಬೆಂಗಳೂರು: ಆಪ್ ರಾಷ್ಟ್ರೀಯ ವಕ್ತಾರ ಹುದ್ದೆಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ವಿಷಯವನ್ನು ಫೇಸ್ ಬುಕ್ ನಲ್ಲಿ ಘೋಷಿಸಿರುವ ಅವರು, ಯುದ್ಧಕ್ಕೆ ಸಿದ್ಧರಾಗಿರುವುದು ಮತ್ತು ದೇಶದಲ್ಲಿ ಪರಿಣಾಮಕಾರಿ ಬದಲಾವಣೆ ತರಬೇಕಾಗಿದೆ. ಕರ್ನಾಟಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಜವಾದ ಕೊಡುಗೆ ನೀಡಲು ಪ್ರಯತ್ನಿಸುವುದು ಮುಖ್ಯ. ಆದ್ದರಿಂದ ಆಮ್ ಆದ್ಮಿ ಪಕ್ಷದ ಜೊತೆಗಿನ ನನ್ನ ಪಯಣ ಕೊನೆಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಾದಾದ್ಯಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನನ್ನೊಂದಿಗೆ ಹಂಚಿಕೊಂಡ ಪ್ರೀತಿ ಮತ್ತು ವಾತ್ಸಲ್ಯಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನೂ ಕೂಡ ಎಎಪಿ ಬಿಜೆಪಿಯ ಬಿ ಟೀಮ್ ಎಂದು ಹೇಳಿದ್ದೆ. ಆದರೆ ನಾನು ಎಎಪಿನಲ್ಲಿ ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿರುವ ಎಎಪಿ ನ ಒಬ್ಬ ನಾಯಕ ಅಥವಾ ಕಾರ್ಯಕರ್ತನನ್ನೂ ಕಂಡಿಲ್ಲ ಎಂದಿದ್ದಾರೆ.
ತಮ್ಮ ರಾಜಕೀಯ ಹಾದಿಯನ್ನು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಮೆಲುಕು ಹಾಕಿರುವ ಬ್ರಿಜೇಶ್ ಕಾಳಪ್ಪ, ಅರವಿಂದ್ ಕೇಜ್ರಿವಾಲ್ 3 ನೇ ಬಾರಿಗೆ ದೆಹಲಿಯ ಸಿಎಂ ಆದರು. ಈ ಮಧ್ಯೆ ನಾನು ಕೇಜ್ರಿವಾಲ್ ಅವರ ವಿರುದ್ಧ ವೈಯಕ್ತಿಕವಾಗಿ ಹಲವು ಲೇಖನಗಳನ್ನು ಬರೆದಿದ್ದೆ. 2022 ರಲ್ಲಿ, ನಾನು ಆಪ್ ಸೇರುವ ಪರಿಸ್ಥಿತಿ ಉದ್ಭವಿಸಿತು. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ನನ್ನನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂದು ನನಗೆ ಸ್ವಾಭಾವಿಕವಾಗಿ ಅನುಮಾನಗಳಿದ್ದವು ಎಂದಿದ್ದಾರೆ.
ಇವೆಲ್ಲದರ ನಡುವೆ ಕೂಡ ಪಕ್ಷದಲ್ಲಿ ನಾನು ಶೀಘ್ರದಲ್ಲೇ ರಾಷ್ಟ್ರೀಯ ವಕ್ತಾರನಾಗಿ, ರಾಜ್ಯದ ಸಂವಹನ ವಿಭಾಗದ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ ಮತ್ತು ರಾಜ್ಯದಲ್ಲಿ ಪ್ರಣಾಳಿಕೆ ಸಮಿತಿ ಉಸ್ತುವಾರಿ ವಹಿಸುವ ಪ್ರಮುಖ ಸದಸ್ಯನಾಗಿ ಆಯ್ಕೆಯಾದೆ. ಕಾನೂನು ಹೋರಾಟದ ಮೂಲಕ ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಗಳಿಸುವಲ್ಲಿ ಕೂಡ ನಾನು ಕೂಡ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ನೆನಪಿಸಿಕೊಂಡಿದ್ದಾರೆ.




