ಬೆಂಗಳೂರು: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ₹2000 ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿ ಒಂದು ತಿಂಗಳು ಕಳೆದಿದ್ದರೂ ಹಣ ಬಿಡುಗಡೆಗೆ ಮೀನ-ಮೇಷ ಎಣಿಸಲಾಗುತ್ತಿದೆ. ಇದು ಲಜ್ಜೆಗೆಟ್ಟ ಸರ್ಕಾರ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಸರಣಿ ಟ್ವೀಟ್ ಮಾಡಿರುವ ಅವರು, ರೈತರ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು, ಸಾಲಮನ್ನಾ ಆಸೆಗಾಗಿ ಬರಗಾಲ ಬರಲಿ ಎಂದು ರೈತರು ಬಯಸುತ್ತಿದ್ದಾರೆ ಎಂದು ರೈತರಿಗೆ ಅಪಮಾನ ಮಾಡುವುದು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು, ಇವುಗಳಲ್ಲೇ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದೆಯೇ ಹೊರತು ರೈತರ ನೆರವಿಗೆ ಬರುವ ಉದ್ದೇಶವೇ ಇದ್ದಂತಿಲ್ಲ ಎಂದು ಅವರು ಹೇಳಿದ್ದಾರೆ.
2019 ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಯಡಿಯೂರಪ್ಪನವರೇ ಸ್ವತಃ ಪ್ರವಾಸ ಕೈಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ SDRF ಅನ್ವಯ ನೀಡುವ ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಯಿತು ಎಂದಿದ್ದಾರೆ.
ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 13,09,421 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 14,62,841 ರೈತರ ಬ್ಯಾಂಕ್ ಖಾತೆಗೆ ₹2031.15 ಕೋಟಿ ಇನ್‌ಪುಟ್ ಸಬ್ಸಿಡಿ ನೀಡಲಾಯಿತು. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ₹6,800 ಕೊಟ್ಟು, ಒಟ್ಟು ₹13,600 ನೀಡಲಾಯಿತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ. ಮಾರ್ಗಸೂಚಿ ದರವಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ ₹11,500 ಸೇರಿಸಿ ಒಟ್ಟು ₹25,000 ನೀಡಲಾಯಿತು. ಬಹುವಾರ್ಷಿಕ ಬೆಳೆ ಜಮೀನಿಗೆ 18,000 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ₹10,000 ಸೇರಿಸಿ ಒಟ್ಟು ₹28,000 ರೂ. ನೀಡಲಾಯಿತು ಎಂದಿದ್ದಾರೆ.
ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಅದು ಇನ್ನೂ ರೈತರಿಗೆ ತಲುಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು *ಎಲ್ಲಕ್ಕೂ ಕೇಂದ್ರ ಸರ್ಕಾರದತ್ತ ಬೆಟ್ಟು ತೋರಿಸುವುದೇ ತಮ್ಮ ಕೆಲಸ ಎಂದು ಭಾವಿಸಿದಂತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೇಂದ್ರದ ಅನುದಾನಕ್ಕೆ ಕಾಯದೆ ಪರಿಹಾರ ವಿತರಣೆ ಮಾಡಿತ್ತು ಎಂದು ಹೇಳಿದ್ದಾರೆ.
2019 ರಲ್ಲಿ 9,72,517 ಹೆಕ್ಟೇರ್ ಬೆಳೆಹಾನಿಯಾಗಿತ್ತು. 6,71,314 ಫಲಾನುಭವಿಗಳಿಗೆ *₹1232.20 ಕೋಟಿ ಪರಿಹಾರ ನೀಡಲಾಗಿತ್ತು. 2020 ರಲ್ಲಿ 19,68,247 ಹೆಕ್ಟೇರ್ ಬೆಳೆಹಾನಿಯಾಗಿತ್ತು. 12,00,346 ಫಲಾನುಭವಿಗಳಿಗೆ ₹941.70 ಕೋಟಿ ಪರಿಹಾರ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
2021ರಲ್ಲಿ 14,93,811 ಹೆಕ್ಟೇರ್ ಬೆಳೆಹಾನಿಯಾಗಿತ್ತು. 18,56,083 ಫಲಾನುಭವಿಗಳಿಗೆ ₹2446.10 ಕೋಟಿ ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್ ಬೆಳೆಹಾನಿ ಆಗಿತ್ತು. 14,62,841 ಫಲಾನುಭವಿಗಳಿಗೆ ₹2031.15 ಕೋಟಿ ಪರಿಹಾರ ನೀಡಲಾಗಿತ್ತು ಎಂದು ನೆನಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ಅನ್ಯಾಯವಾಗುತ್ತದೆ. 2013-14ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜುಲೈ-ಆಗಸ್ಟ್ ಅವಧಿಯ ಮುಂಗಾರಿನ ಬರಗಾಲದಲ್ಲಿ ಪರಿಹಾರ ನೀಡಿತ್ತು. 2014 ರ ಏಪ್ರಿಲ್‌ನಿಂದ ಇನ್‌ಪುಟ್ ಸಬ್ಸಿಡಿ ಪಾವತಿ ಶುರುವಾಗಿತ್ತು. *ಅದಕ್ಕೆ ತೆಗೆದುಕೊಂಡ ಅವಧಿ 9 ತಿಂಗಳು! ಎಂದು ಹೇಳಿದ್ದಾರೆ.
2014-15 ರ ಸಾಲಿನಲ್ಲಿ ಇದೇ ಸಿದ್ದರಾಮಯ್ಯನವರ
ಸರ್ಕಾರ 2014ರ ಜುಲೈ-ಆಗಸ್ಟ್ ಅವಧಿಯ ಬರಗಾಲಕ್ಕೆ ಪರಿಹಾರ ನೀಡಲು, 2015 ಮಾರ್ಚ್‌ನಿಂದ ಇನ್‌ಪುಟ್ ಸಬ್ಸಿಡಿ ಪಾವತಿ ಶುರು ಮಾಡಿತ್ತು. ಅಂದರೆ ಇದಕ್ಕೆ ತೆಗೆದುಕೊಂಡ ಅವಧಿ 8 ತಿಂಗಳು! ಈ ಬಾರಿಯೂ ಪರಿಹಾರ ಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ತಡ ಮಾಡಿದೆ. ಜೂನ್ ತಿಂಗಳಿನಲ್ಲಿ ಆರಂಭವಾದ ಬರಕ್ಕೆ ಸಂಕ್ರಾಂತಿ ಬಂದರೂ ಇನ್ನೂ ಒಂದು ನಯಾ ಪೈಸೆ ನೆರವು ನೀಡಿಲ್ಲ ಎಂದು ಹೇಳಿದ್ದಾರೆ.
2019-20 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದಾಗ, 2019 ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪ್ರವಾಹ ವಿಕೋಪ ಉಂಟಾಗಿತ್ತು. ಆಗ 2019ರ ಅಕ್ಟೋಬರ್‌ನಿಂದ ಇನ್‌ಪುಟ್ ಸಬ್ಸಿಡಿ ಪಾವತಿ ಶುರು ಮಾಡಲಾಗಿತ್ತು. ಅಂದರೆ ತೆಗೆದುಕೊಂಡ ಅವಧಿ ಕೇವಲ 2 ತಿಂಗಳು. 2020-21 ರ ಸಾಲಿನಲ್ಲಿ, 2020ರ ಆಗಸ್ಟ್-ಅಕ್ಟೋಬರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಅಕ್ಟೋಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಗಿತ್ತು. ತೆಗೆದುಕೊಂಡ ಅವಧಿ 2 ತಿಂಗಳು ಎಂದು ಹೇಳಿದ್ದಾರೆ.
2021-22 ನೇ ಸಾಲಿನಲ್ಲಿ, 2021ರ ಆಗಸ್ಟ್‌ನಲ್ಲಿ ಪ್ರವಾಹವಾದಾಗ, ಸೆಪ್ಟೆಂಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು. ಇದೇ ಸಾಲಿನಲ್ಲಿ, ಮತ್ತೊಮ್ಮೆ ಅಕ್ಟೋಬರ್-ನವೆಂಬರ್ ನಲ್ಲಿ ಪ್ರವಾಹ ಉಂಟಾಗಿ, ಆಗ ನವೆಂಬರ್ ನಿಂದಲೇ ಪರಿಹಾರ ವಿತರಣೆ ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು ಮಾತ್ರ ಎಂದಿದ್ದಾರೆ.
2022-23 ನೇ ಸಾಲಿನಲ್ಲಿ, 2022ರ ಮೇ-ಜೂನ್-ಜುಲೈ ತಿಂಗಳಲ್ಲಿ ಪ್ರವಾಹವಾದಾಗ ಜುಲೈನಿಂದ ಪರಿಹಾರ ವಿತರಣೆ ಶುರು ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. ಮತ್ತೆ ಇದೇ ಸಾಲಿನಲ್ಲಿ, 2022 ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪ್ರವಾಹ ಉಂಟಾಯಿತು. ಆಗ 2 ತಿಂಗಳಲ್ಲಿ ಪರಿಹಾರ ವಿತರಣೆ ಶುರು ಮಾಡಲಾಯಿತು. ಈ ಎಲ್ಲ ಉದಾಹರಣೆಗಳನ್ನು ನೋಡಿದರೆ, ಒಂದಂತೂ ಸ್ಪಷ್ಟವಾಗುತ್ತದೆ. ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕಿಂತ ರೈತರ ಕಣ್ಣೀರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಹೇಗೆ ಎನ್ನುವುದೇ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಮುಖ್ಯ ಎಂದು ಹೇಳಿದ್ದಾರೆ.
2006-2014 ರ ಅವಧಿಯಲ್ಲಿ ಯುಪಿಎ ಸರ್ಕಾರವಿದ್ದಾಗ SDRF ನಡಿ, ಕೇಂದ್ರದ ಪಾಲು 812 ಕೋಟಿ ರೂ. ಹಾಗೂ ರಾಜ್ಯದ ಪಾಲು 271 ಕೋಟಿ ರೂ. ಸಿಕ್ಕಿತ್ತು. ಇದೇ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ-NDRF ನಿಂದ ಸಿಕ್ಕಿದ್ದು ₹3,233 ಕೋಟಿ ಎಂದು ತಿಳಿಸಿದ್ದಾರೆ.
2014-2022 ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕ ಪರಿಹಾರವನ್ನು ಕರ್ನಾಟಕಕ್ಕೆ ಕೊಟ್ಟಿದೆ. ಈ ಅವಧಿಯಲ್ಲಿ SDRF ನಡಿ, ಕೇಂದ್ರದ ಪಾಲು 2,557 ಕೋಟಿ ರೂ. ಹಾಗೂ ರಾಜ್ಯದ ಪಾಲು 852 ಕೋಟಿ ರೂ. ಸಿಕ್ಕಿತ್ತು. ಇದೇ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ-NDRF ನಿಂದ ಸಿಕ್ಕಿದ್ದು ₹11,603 ಕೋಟಿ ಎಂದು ವಿವರಿಸಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ವಿಷಯದಲ್ಲಾದರೂ ಸ್ವಲ್ಪ ರಾಜಕೀಯ ಬದಿಗಿಟ್ಟು, ಅನ್ನದಾತರ ನೆರವಿಗೆ ಬರುವತ್ತ ಗಮನ ಹರಿಸಬೇಕೆಂದು ಆಗ್ರಹಿಸುತ್ತೇನೆ. ಇನ್ನೂ ತಡ ಮಾಡಿದರೆ ರೈತರ ಕೆಂಗಣ್ಣಿಗೆ ಗುರಿಯಾಗುವುದು ಗ್ಯಾರಂಟಿ ಎಂದು ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.




