ಚಾಮರಾಜನಗರ: ಕರ್ನಾಟಕ ಸರ್ಕಾರ ಜಾತ್ರೆ, ರ್ಯಾಲಿಗಳು, ಹೆಚ್ಚು ಜನರು ಸೇರುವ ಸಮಾರಂಭಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆಯುವ ಬ್ರಹ್ಮ ರಥೋತ್ಸವದ ಮೇಲೆ ಕೊರೊನಾ ಎರಡನೇ ಅಲೆಯ ಕರಿಛಾಯೆ ಆವರಿಸಿದೆ.
ಏ.6 ರಂದು ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ ನಡೆಯಬೇಕಿದ್ದು ಏ.3ರಿಂದ 9ರ ತನಕ ವಿಶೇಷ ಪೂಜೆ, ಉತ್ಸವಗಳು ನಡೆಯಲಿದ್ದು, ಏ.6ರಂದು ಬ್ರಹ್ಮರಥೋತ್ಸವ ನಡೆಯಬೇಕಿದೆ. ಆದರೆ ಜಿಲ್ಲಾಡಳಿತದ ಕೇವಲ 100 ಮಂದಿಗಷ್ಟೇ ಅವಕಾಶ ನೀಡಿದೆ ಎನ್ನಲಾಗಿದೆ.
ಕೊರೊನಾ ಕಾರಣಕ್ಕಾಗಿಯೇ ಕಳೆದ ವರ್ಷವೂ ರಥೋತ್ಸವ ರದ್ದಾಗಿತ್ತು. ಈ ಬಾರಿಯಾದರೂ ಗೋಪಾಲಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಬಹುದೆಂಬ ಭಕ್ತರ ಆಸೆಗೆ ಕೋವಿಡ್ ತಣ್ಣೀರೆರುಚುವ ಸಾಧ್ಯತೆ ದಟ್ಟವಾಗಿದೆ.
ಗೋಪಾಲಸ್ವಾಮಿ ರಥೋತ್ಸವಕ್ಕೆ ರಾಜ್ಯವಷ್ಟೇ ಅಲ್ಲದೇ ಕೇರಳ, ತಮಿಳುನಾಡಿನ ಸಹಸ್ರಾರು ಭಕ್ತರು ಪ್ರತಿವರ್ಷವೂ ಆಗಮಿಸುವುದರಿಂದ ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ರಥೋತ್ಸವದಂತೆ ಸರಳ ಆಚರಣೆಯಷ್ಟೇ ನಡೆಯಬಹುದು ಎನ್ನಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಈ ಬೆಟ್ಟ ಭೂಮಿಯಿಂದ ಸುಮಾರು 1450 ಅಡಿ ಎತ್ತರದಲ್ಲಿದ್ದು ವರ್ಷದ ಎಲ್ಲಾ ದಿನವೂ ತಂಪಾಗಿರುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿನ ರಥವನ್ನು ಹಂಬಿನಿಂದ ಎಳೆಯಲಿದ್ದು ಇವೆಲ್ಲವನ್ನೂ ಈ ಬಾರಿಯೂ ಭಕ್ತರು ಮಿಸ್ ಮಾಡಿಕೊಳ್ಳುವ ನಿರಾಶೆಯಲ್ಲಿದ್ದಾರೆ.



