ಕಲಬುರ್ಗಿ: ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಇವರು ಯಾವತ್ತೂ ಕೂಡ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ಜಿಲ್ಲೆಯ ಅಳಂದದಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು, ಮಾತಾಡಿದ ಅವರು, ಎರಡು ಬಾರಿ ಕೂಡ ಆಪರೇಷನ್ ಕಮಲದ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಆಪರೇಷನ್ ಕಮಲ ಎಂಬ ಹೆಸರು ಕೇಳಿರಲಿಲ್ಲ, ರಾಜ್ಯದಲ್ಲಿ ಈ ಆಪರೇಷನ್ ಕಮಲ ಆರಂಭವಾದುದ್ದು ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರರಿಂದ ಎಂದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಲ್ಲಿ, ನಾವು 80 ಸ್ಥಾನಗಳಲ್ಲಿ ಗೆದ್ದಿದ್ದೆವು. ಆದರೆ ಶೇಕಡಾವಾರು ಮತದಲ್ಲಿ ನಾವು ಬಿಜೆಪಿ ಪಕ್ಷಕ್ಕಿಂತ 2% ಹೆಚ್ಚು ಮತ ಗಳಿಸಿದ್ದೆವು. 2018ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಬಹುಮತ ಸಾಬೀತು ಮಾಡಲಾಗದೆ ಮೂರೇ ದಿನಕ್ಕೆ ರಾಜೀನಾಮೆ ನೀಡಿದ್ರು. ಆ ನಂತರ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣಕ್ಕೆ ಬರೀ 38 ಸ್ಥಾನಗಳನ್ನು ಗಳಿಸಿದ್ದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಸಚಿವರು, ಶಾಸಕರನ್ನು ಭೇಟಿ ಮಾಡದ ಕಾರಣಕ್ಕೆ ಕೇವಲ 14 ತಿಂಗಳಿಗೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು. ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಈ ಮಾತು ಕುಮಾರಸ್ವಾಮಿ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ ಎಂದರು.




