ಕಲಬುರ್ಗಿ: ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ. ಹಿಂದೆ 450 ರೂ ಇದ್ದ 50 ಕೆ.ಜಿ ಡಿಎಪಿ ಬೆಲೆ ಇಂದು 1450 ರೂ. ಆಗಿದೆ. ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟು ಮಾಡಿದ್ರಾ? ಮೋದಿಜಿ ಕ್ಯೂ ಜೂಟ್ ಬೋಲ್ ಲಿಯಾ ಆಪ್? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದರು.
ಕಲಬುರಗಿ ಜಿಲ್ಲೆಯ ಅಳಂದದಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು, ಮಾತಾಡಿದ ಅವರು, ಈ ಭಾಗದಲ್ಲಿ ಬೆಳೆದ ತೊಗರಿಬೇಳೆಗೆ ನೆಟೆರೋಗ ಬಂದು ಬೆಳೆನಷ್ಟವಾಗಿದೆ. ಈ ಬಗ್ಗೆ ಸದನದಲ್ಲಿ ಕೃಷಿ ಸಚಿವರನ್ನು ರೈತರ ಕಷ್ಟ ಕೇಳಲು ಅವರ ಜಮೀನುಗಳಿಗೆ ಭೇಟಿನೀಡಿದ್ರಾ? ಎಂದು ಕೇಳಿದ್ರೆ ನನಗೆ ಹುಷಾರಿಲ್ಲ, ಅದಕ್ಕೆ ಹೋಗಲಿಲ್ಲ ಎಂದರು. ಆರೋಗ್ಯ ಚನ್ನಾಗಿಲ್ಲ, ಜನರ ಕೆಲಸ ಮಾಡಲು ಆಗಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಅಲ್ವಾ? ಇವತ್ತಿನವರೆಗೆ ಒಂದು ರೂಪಾಯಿ ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ ಎಂದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿರುವಾಗ 72,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ರು, ನಾನು ಮುಖ್ಯಮಂತ್ರಿಯಾಗಿರುವಾಗ ರಾಜ್ಯದ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50 ಸಾವಿರ ವರೆಗಿನ 8,165 ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಮೋದಿ ಅವರಾಗಲೀ, ಬೊಮ್ಮಾಯಿ, ಯಡಿಯೂರಪ್ಪ ಅವರಾಗಲೀ ಒಂದು ರೂಪಾಯಿ ಸಾಲಮನ್ನಾ ಮಾಡಿದ್ದಾರ? ಎಂದು ಪ್ರಶ್ನಿಸಿದರು.
ನ ಖಾವೂಂಗ, ನ ಖಾನೆದೂಂಗ ಎನ್ನುವ ಮೋದಿ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪತ್ರ ಬರೆದು ಒಂದೂವರೆ ವರ್ಷ ಆದರೂ ಯಾಕೆ ಏನು ಕ್ರಮ ಕೈಗೊಂಡಿಲ್ಲ. ಎನ್,ಒ,ಸಿ ಬಿಡುಗಡೆ ಮಾಡಲು 10% ಲಂಚ ನಿಗದಿ ಮಾಡಿದ್ದಾರೆ. ಒಂದು ಕೆಲಸಕ್ಕೆ 40% ಲಂಚ, 18% ಜಿಎಸ್ಟಿ, ಗುತ್ತಿಗೆದಾರರ ಲಾಭ ಕಳೆದು ಉಳಿಯುವುದು 20% ಮಾತ್ರ. ಇದರಲ್ಲಿ ಗುಣಮಟ್ಟದ ಕೆಲಸ ಆಗುತ್ತಾ? ಇದೇ ಕಾರಣಕ್ಕೆ ನಾನು ಈ ಸರ್ಕಾರವನ್ನು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟಕ್ಕೆ ಹೋಲಿಸಿದ್ದು ಎಂದರು.
ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಸಿಮೆಂಟ್, ಕಬ್ಬಿಣ, ಹಾಲು, ಮೊಸರು, ಔಷಧಿ ಇವುಗಳ ಬೆಲೆ ಮಿತಿಮೀರಿದೆ. ಇದನ್ನೇ ಅಚ್ಚೇದಿನ್ ಎಂದು ಕರೆಯಬೇಕಾ ಮೋದಿಜೀ? ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ ಇಂಥವರಿಗೆ ಮತ ಹಾಕ್ತೀರ? ಈ ಬೆಲೆಯೇರಿಕೆಯಿಂದ ನೊಂದಿರುವ ಬಡ ಜನರಿಗೆ ನೆರವಾಗಲು ನಮ್ಮ ಪಕ್ಷವು ಮುಂದೆ ಅಧಿಕಾರಕ್ಕೆ ಬಂದಾಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತದೆ. ಇದಕ್ಕೆ ನಾನು ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಅನುಮಾನವೇ ಬೇಡ ಎಂದರು.
ನಾವು ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ಬಡವರಿಗೆ ಅಕ್ಕಿ ನೀಡಿದ್ರೆ ಇವರ ಅಪ್ಪನ ಮನೆಯ ಗಂಟೇನು ಹೋಗುತ್ತಿತ್ತಾ? ನಾವು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಬಡಜನರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಅಕ್ಕಿಯನ್ನು 5 ಕೆ.ಜಿ ಗೆ ಇಳಿಸಿದವರನ್ನು ಅಧಿಕಾರದಿಂದ ಇಳಿಸಬೇಕಲ್ವಾ? ಎಂದು ಪ್ರಶ್ನಿಸಿದರು.
ನಾವು ಬಸವಾದಿ ಶರಣರಂತೆ ನುಡಿದಂತೆ ನಡೆದವರು. ಇದೇ ಕಾರಣಕ್ಕೆ ನನ್ನ ಯಾತ್ರೆಯನ್ನು ಬಸವಕಲ್ಯಾಣದಿಂದ ಆರಂಭ ಮಾಡಿದ್ದು. ಬಸವಾದಿ ಶರಣರ ಕಾಲದ ಸಮಾನತೆಯ ಸಂಕೇತವಾದ ಅನುಭವ ಮಂಟಪವನ್ನು ಮರು ನಿರ್ಮಾಣ ಮಾಡಿದ್ದು ನಮ್ಮ ಸರ್ಕಾರ. ಗೊರೂರು ಚನ್ನಬಸಪ್ಪ ಅವರ ಸಮಿತಿ ಶಿಫಾರಸನ್ನು ಜಾರಿಗೊಳಿಸಬೇಕು ಎನ್ನುವಾಗ ಚುನಾವಣಾ ನೀತಿ ಸಂಹಿತೆ ಬಂತು. ಹಾಗಾಗಿ ಕೆಲಸ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗ ಕೆಲಸ ಆರಂಭವಾಗಿ ಆಮೆ ವೇಗದಲ್ಲಿ ನಡೆಯುತ್ತಿದೆ. ನಾವು ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಅಗತ್ಯ ಅನುದಾನ ನೀಡಿ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿ ಅವರು 2018ರಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ 50 ರಿಂದ 60 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ನಾವು 2013ರಲ್ಲಿ 165 ಭರವಸೆಗಳನ್ನು ನೀಡಿದ್ದೆವು ಅದರಲ್ಲಿ ಅಧಿಕಾರಕ್ಕೆ ಬಂದ ಮೇಲೆ 158 ಭರವಸೆಗಳನ್ನು ಈಡೇರಿಸುವ ಜೊತೆಗೆ 30 ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಜಾರಿ ಮಾಡಿದ್ದೆವು. ಇಂದಿರಾ ಕ್ಯಾಂಟೀನ್ ಕೂಡ ನಮ್ಮ ಹೆಚ್ಚುವರಿ ಕಾರ್ಯಕ್ರಮದಲ್ಲಿ ಒಂದಾಗಿತ್ತು. ಇವತ್ತು ಇಂದಿರಾ ಕ್ಯಾಂಟೀನ್ ಇದೆಯಾ? ಮುಚ್ಚಿದ್ದಾರೆ ಅಲ್ವಾ? ಮುಚ್ಚಿದ್ದು ಯಾಕೆಂದರೆ ಅವರಿಗೇ ತಿನ್ನಲು ಸಾಲಲ್ಲ, ಇನ್ನು ಬಡವರ ಹೊಟ್ಟೆ ತುಂಬಿಸುತ್ತಾರ? ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ಒಂದೇ ವೇದಿಕೆ ಮೇಲೆ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ಬೊಮ್ಮಾಯಿಯವರು ಈ ಬಗ್ಗೆ ಮಾತಾಡುವುದೇ ಇಲ್ಲ ಎಂದರು.
ನಾನು ಮುಖ್ಯಮಂತ್ರಿಯಾಗಿರುವಾಗ 15 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಟ್ಟಿದ್ದೆ. ಈ ಸರ್ಕಾರ ಬಂದ ಮೇಲೆ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ. ನಾವು ಕಟ್ಟಿಸಿಕೊಟ್ಟ ಮನೆಯನ್ನು ಪೂರ್ತಿಗೊಳಿಸಲು ಅನುದಾನ ನೀಡಿಲ್ಲ. ಈಗ ಅಷ್ಟು ಕಟ್ಟಿದ್ವಿ ಇಷ್ಟು ಕಟ್ಟಿದ್ವಿ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂಥವರ ಮಾತನ್ನು ನಂಬಬೇಡಿ. ಬಡವರಿಗೆ ಸೂರು ಕಟ್ಟಿಸಿಕೊಡದ ಈ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂದರು.
ನಾವು ಪ್ರಜಾಧ್ವನಿಯನ್ನು ಹಮ್ಮಿಕೊಂಡಿರುವುದು ನಿಮ್ಮ ಧ್ವನಿಯನ್ನು ಕೇಳಿ, ನಿಮ್ಮ ಧ್ವನಿಗೆ ಅನುಗುಣವಾಗಿ ಸರ್ಕಾರ ನಡೆಸಲು. ಇದಕ್ಕೆ ನಿಮ್ಮ ಆಶೀರ್ವಾದ ಬೇಕು. 2023ರ ಚುನಾವಣೆಯಲ್ಲಿ ಬಿ.ಆರ್ ಪಾಟೀಲರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಡಬೇಕು ಎಂದರು.



