ಮಗ್ಗಿ ಹೇಳಲು ಬಾರದ ರಾಜ್ಯದ ಬಿಜೆಪಿ ನಾಯಕರೆಲ್ಲಾ ಈಗ ಅರ್ಥಶಾಸ್ತ್ರದ ಪ್ರಕಾಂಡ ಪಂಡಿತರಂತೆ ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ!
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎನ್ನುವ ಬಿಜೆಪಿ ನಾಯಕರಿಗೆ ತಮ್ಮ ಆಡಳಿತದಲ್ಲಿ ರಾಜ್ಯವನ್ನು ದುಃಸ್ಥಿತಿಗೆ ತಳ್ಳಿದ್ದನ್ನು ಮರೆತುಬಿಟ್ಟಿದ್ದಾರೆ ಎನಿಸುತ್ತದೆ.
ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಜನಕಲ್ಯಾಣ ಯೋಜನೆಗಳನ್ನು ನೀಡದೆ, ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳದೆ ಹಣಕಾಸು ವ್ಯವಸ್ಥೆಯನ್ನು ಹದಗೆಡಿಸಿದ್ದು ಹೇಗೆ ಎನ್ನುವುದನ್ನು ಉತ್ತರ ನೀಡಲಿ.
ಹಿಂದಿನ ಬಿಜೆಪಿಯ ಗಾಂಪರ ಸರ್ಕಾರ ಮಾಡಿದ ಹಣಕಾಸಿನ ಅವ್ಯವಸ್ಥೆಯನ್ನು, ಅವಾಂತರವನ್ನು ನಮ್ಮ ಸರ್ಕಾರ ಸರಿ ದಾರಿಗೆ ತರುತ್ತಿದೆ.
ಇದೇ ಬಿಜೆಪಿಗರು ಎಂದಾದರೂ ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ತುಟಿ ಬಿಚ್ಚಿದ್ದಾರೆಯೇ? ಕರ್ನಾಟಕದ ಹಿತ ಕಾಯುವ ಸಣ್ಣ ಕೆಲಸವನ್ನಾದರೂ ಮಾಡಿದ್ದಾರೆಯೇ? ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ಬಾರದಿರುವ ಬಗ್ಗೆ ಒಮ್ಮೆಯಾದರೂ ಪ್ರಶ್ನಿಸಿದ್ದಾರೆಯೇ?ತೆರಿಗೆ ಪಾಲಿನ ಅನ್ಯಾಯ, 15 ಹಣಕಾಸು ಆಯೋಗದ ಅನುದಾನದಲ್ಲಿನ ಅನ್ಯಾಯ, ಪ್ರಕೃತಿ ವಿಕೋಪ ಪರಿಹಾರಗಳಲ್ಲಿನ ಅನ್ಯಾಯಗಳ ಬಗ್ಗೆ ಮಾತಾಡಿದ್ದಾರೆಯೇ?
ಹಿಂದೆ ನೆರೆ ಪರಿಹಾರದ ಬಗ್ಗೆ ವೇದಿಕೆ ಮೇಲೆ ಬಹಿರಂಗವಾಗಿಯೇ ಯಡಿಯೂರಪ್ಪನವರು ಮೋದಿಯವರ ಅನ್ಯಾಯವನ್ನು ಜಗಜ್ಜಾಹೀರು ಮಾಡಿದ್ದರು, ಹಣಕಾಸು ಆಯೋಗದ ಅನ್ಯಾಯವನ್ನು ಸದನದಲ್ಲಿ ಬೊಮ್ಮಾಯಿಯವರು ಒಪ್ಪಿಕೊಂಡಿದ್ದರು, ಇದು ಬಿಜೆಪಿಗರಿಗೆ ನಾಚಿಕೆಗೇಡಿನ ವಿಷಯ ಎನಿಸಲಿಲ್ಲವೇ?
ಈಗ ಅದೇ ಬೊಮ್ಮಾಯಿಯವರು ಸಂಸದರಾಗಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ, ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆಯನ್ನು ನಿರ್ವಹಿಸಿದ ಬೊಮ್ಮಾಯಿಯವರಿಗೆ ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ಪ್ರಶ್ನಿಸುವ ಪ್ರಜ್ಞೆ ಇಲ್ಲವೇ?
ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿ ಮಾಡಿಟ್ಟು ಹೋಗಿರುವ ಅವಾಂತರಗಳು ಒಂದೆರಡಲ್ಲ,
– ಬಜೆಟ್‌ಗಳಲ್ಲಿ ನಿಗದಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಂಡಿದ್ದರು. ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಬಿಜೆಪಿಯವರಿಗೆ ಚರ್ಚಿಸುವ ಧೈರ್ಯ ಇದೆಯೇ?
– ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿ ಹಣ ಒದಗಿಸದೆ ಹೋಗಿದ್ದಾರೆ. ಇಷ್ಟು ದೊಡ್ಡ ಮೊತ್ತಕ್ಕೆ ಮನಸು ಮಾಡಿದ್ದೇಕೆ? ಕಮಿಷನ್ ಆಸೆಗಾಗಿಯೇ?
– ಬಿಜೆಪಿ ಆಡಳಿತದ ಕಾಲದಲ್ಲಿ ಕೇಂದ್ರ ಸರ್ಕಾರಸಂಗ್ರಹಿಸಿದ ಜಿಎಸ್‌ಟಿ ಸೆಸ್‌ನಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿದರು. ಇದರಿಂದ ನಮಗೆ ವರ್ಷಕ್ಕೆ 18-20 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಕಡಿಮೆಯಾಯಿತು. ಕೇಂದ್ರದವರು ಜನರಿಂದ ಸೆಸ್ ಸಂಗ್ರಹಿಸುವುದನ್ನು ನಿಲ್ಲಿಸಲಿಲ್ಲ. ಇಂತಹ ಅನ್ಯಾಯ ಆದರೂ ರಾಜ್ಯ ಬಿಜೆಪಿಗರು ಬಾಯಿ ಬಿಡಲಿಲ್ಲ.
– ಕರ್ನಾಟಕದಿಂದ ವಾರ್ಷಿಕ 4.5 ಲಕ್ಷ ಕೋಟಿ ರೂಪಾಯಿ ತೆರಿಗೆಯನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ, ಆದರೆ ಮರಳಿ ಸಿಗುತ್ತಿರುವುದು ಬಿಡಿಗಾಸು ಮಾತ್ರ, ಕರ್ನಾಟಕಕ್ಕೆ ಏನಿಲ್ಲ ಎಂದರೂ ವಾರ್ಷಿಕ 22 ಸಾವಿರ ಕೋಟಿಗೂ ಅಧಿಕ ನಷ್ಟ ಆಗುತ್ತಿದೆ, ಈ ಬಗ್ಗೆ ಬಿಜೆಪಿ ಬೃಹಸ್ಪತಿಗಳಿಗೆ ಅರಿವಿದೆಯೇ?
– 15ನೇ ಹಣಕಾಸು ಆಯೋಗ ಹೇಳಿದರೂ ಕೇಂದ್ರವು ಕೊಡದೆ ಉಳಿಸಿಕೊಂಡ 11,495 ಕೋಟಿ ರೂ.ಗಳಿಂದ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಿ ಕೊಡದ ಕಾರಣದಿಂದ ಒಟ್ಟಾರೆ ಕೇಂದ್ರದಿಂದ ರಾಜ್ಯಕ್ಕೆ 2.1 ಲಕ್ಷ ಕೋಟಿ.ರೂಗಳಿಗೂ ಹೆಚ್ಚಿನ ಮೊತ್ತ ನಷ್ಟವಾಗಿದೆ. ಈ ಕುರಿತು ಬಿಜೆಪಿಯವರು ಒಂದು ದಿನವೂ ಮಾತಾಡಲಿಲ್ಲ ಏಕೆ? ಇಂತಹ ಘೋರ ಅನ್ಯಾಯಗಳು, ಬಿಜೆಪಿಗರ ದುರಾಡಳಿತದ ದುಷ್ಪರಿಣಾಮಗಳನ್ನು ಎದುರಿಸಿಯೂ ರಾಜ್ಯದ ಆರ್ಥಿಕತೆಯನ್ನು ಸದೃಢಗೊಳಿಸಿದೆ ನಮ್ಮ ಸರ್ಕಾರ.
– ನಮ್ಮ ಎರಡು ವರ್ಷಗಳ ಬಜೆಟ್ ಗಾತ್ರದ ಸರಾಸರಿ ಬೆಳವಣಿಗೆ ಶೇ.18.3 ರಷ್ಟಿದೆ. ಬಿಜೆಪಿಯ 4 ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ ಶೇ.5 ರಷ್ಟಿತ್ತು.
– ರಾಜ್ಯದ ಸ್ವಂತ ತೆರಿಗೆಯ ಬೆಳವಣಿಗೆ ಶೇ. 15 ರಷ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 11 ರಷ್ಟು ಮಾತ್ರ ಇತ್ತು.
– ಗ್ಯಾರಂಟಿ ಯೋಜನೆಗಳು ಸೇರಿದಂತೆ ವರ್ಷಕ್ಕೆ 90 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಜನರಿಗೆ ನೇರವಾಗಿ ಡಿಬಿಟಿ ಮೂಲಕ ಹಾಗೂ ಸಬ್ಸಿಡಿ ಪ್ರೋತ್ಸಾಹಧನದ ಮೂಲಕ ನೀಡುತ್ತಿದ್ದೇವೆ.
– ವೃದ್ಧರಿಗೆ, ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ವರ್ಷಕ್ಕೆ 10,400 ಕೋಟಿಗೂ ಹೆಚ್ಚಿನ ಹಣವನ್ನು ಕೊಡುತ್ತಿದ್ದೇವೆ.
– ವಿತ್ತೀಯ ಕೊರತೆ ಶೇ.3 ರ ಒಳಗೆ ಇದೆ ಮತ್ತು ನಮ್ಮ ಒಟ್ಟು ಹೊಣೆಗಾರಿಕೆ ಜಿಎಸ್‌ಡಿಪಿಯ ಶೇ.25 ರ ಒಳಗೆ ಇದೆ. ಬಿಜೆಪಿ ಅವಧಿಯಲ್ಲಿ ಇವುಗಳು ಅಧೋಗತಿಯಲ್ಲಿದ್ದವು.
– ಬಂಡವಾಳ ವೆಚ್ಚವೂ ಸಹ ಇತರ ಪ್ರಗತಿಪರ ರಾಜ್ಯಗಳಿಗಿಂತ ಉತ್ತಮವಾಗಿದೆ. ಕರ್ನಾಟಕವು ಈ ವರ್ಷದ ಬಜೆಟ್ ಗಾತ್ರಕ್ಕೆ ಎದುರಾಗಿ ಶೇ.15.01 ರಷ್ಟು ಬಂಡವಾಳ ವೆಚ್ಚ ಮಾಡುತ್ತಿದೆ.
– ಸಂಕಷ್ಟಕ್ಕೆ ಸಿಲುಕಿದ ಕೊಬ್ಬರಿ, ತೊಗರಿ ಬೆಳೆಯುವ ರೈತರ ನೆರವಿಗೆ ಧಾವಿಸಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಗೆ ಅನುದಾನಗಳನ್ನು ನೀಡುತ್ತಿದ್ದೇವೆ. ಬೊಮ್ಮಾಯಿಯವರು ಜಲ ಸಂಪನ್ಮೂಲ ಸಚಿವರಾಗಿದ್ದರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊಡಬೇಕಾದ ಅನುದಾನಗಳನ್ನು ಕೊಡಲಿಲ್ಲ. ಆದರೆ ನಮ್ಮ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡಿ ಮುಗಿಸಲು ತೀರ್ಮಾನಿಸಿದೆ.
– ಸರ್ಕಾರಿ ನೌಕರರಿಗೆ 7 ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಶೇ. 27.5 ರಷ್ಟು ವೇತನವನ್ನು ಹೆಚ್ಚು ಮಾಡಲಾಗಿದೆ. ಈ ವರ್ಷದ 8 ತಿಂಗಳಿಗೆ 16 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿನ ಸಂಬಳವನ್ನು ಕೊಡುತ್ತಿದ್ದೇವೆ.
– ಇನ್‌ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ 10.27 ಲಕ್ಷ ಕೋಟಿಗಳಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಒಪ್ಪಂದಗಳಾಗಿವೆ, ಇದು ಸಾಧ್ಯವಾಗಿದ್ದು ರಾಜ್ಯದ ಸ್ಥಿತಿ ಉತ್ತಮವಾಗಿದ್ದರಿಂದಾಗಿ.
ಕರ್ನಾಟಕವನ್ನು ಟೀಕಿಸುವ ಬಿಜೆಪಿಯವರು ಕೇಂದ್ರ ಬಜೆಟ್ಟಿನ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಲಿ.
– 2024-25 ರ ಕೇಂದ್ರದ ಮೂಲ ಬಜೆಟ್ಟಿನ ಅಂದಾಜು 48.21 ಲಕ್ಷ ಕೋಟಿಗಳಷ್ಟಿತ್ತು. ಆದರೆ ಅದನ್ನು ಪರಿಷ್ಕರಿಸಿ 47.16 ಲಕ್ಷ ಕೋಟಿ ರೂ.ಗಳಿಗೆ ಇಳಿಸಿದ್ದು ಯಾಕೆ?
– ಆಯವ್ಯಯದ ಅಂದಾಜಿಗೂ ಪರಿಷ್ಕೃತ ಅಂದಾಜಿಗೂ 1,04,025 ಕೋಟಿಗಳಷ್ಟು ಕಡಿಮೆಯಾಗಲು ಕಾರಣವೇನು? ಬಂಡವಾಳ ವೆಚ್ಚವನ್ನು 92,682 ಕೋಟಿ ಕಡಿಮೆ ಮಾಡಲಾಗಿದೆ.
– 2013-14 ರಲ್ಲಿ 53.11 ಲಕ್ಷ ಕೋಟಿ ರೂಗಳಷ್ಟಿದ್ದ ಕೇಂದ್ರದ ಸಾಲ ನಿರ್ಮಲಾ ಸೀತಾರಾಮನ್ ಅವರೇ ಈ ಬಜೆಟ್ ನಲ್ಲಿ ಘೋಷಿಸಿರುವಂತೆ 2026 ರ ಮಾರ್ಚ್ ವೇಳೆಗೆ 200.16 ಲಕ್ಷ ಕೋಟಿಗಳಷ್ಟಾಗುತ್ತಿದೆ. 11 ವರ್ಷಗಳಲ್ಲಿ 147 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಇಷ್ಟು ಬೃಹತ್ ಮೊತ್ತದ ಸಾಲ ಯಾಕಾಯಿತು?
– 2014 ರ ಮಾರ್ಚ್ ಅಂತ್ಯಕ್ಕೆ ದೇಶದ ಎಲ್ಲ ರಾಜ್ಯಗಳ ಸಾಲ 25 ಲಕ್ಷ ಕೋಟಿ ರೂ. ಇದ್ದದ್ದು ಈಗ 95 ಲಕ್ಷ ಕೋಟಿ ರೂ.ಗಳಿಗೂ ಮೀರಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯಗಳ ಸಾಲ 70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ರಾಜ್ಯಗಳೂ ಸಂಕಷ್ಟಕ್ಕೆ ಈಡಾಗಿವೆ. ಇದೇನಾ ಅಚ್ಛೆ ದಿನ್, ಇದೇನಾ ಅಮೃತ್ ಕಾಲ್?
ಬಿಜೆಪಿ ಸೃಷ್ಟಿಸಿದ ಎಲ್ಲಾ ಸವಾಲುಗಳನ್ನು ಎದುರಿಸಿಯೂ ನಾವು ನುಡಿದಂತೆ ನಡೆದಿದ್ದೇವೆ, ಕರ್ನಾಟಕದ ಜನರ ಕಲ್ಯಾಣಕ್ಕೆ ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸದೆ ಬಾಯಿ ಚಪಲಕ್ಕೆ ಟೀಕಿಸುವ ಬಿಜೆಪಿಗರಿಗೆ ಆನೆ ಮತ್ತು ಬೊಗಳುವ ಶ್ವಾನದ ಕತೆಯೇ ನಮ್ಮ ಉತ್ತರ!
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ




