ಬಿಜೆಪಿ ಬಡವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡುತ್ತಿದೆ: ನಲಪಾಡ್

3 years ago

#BJP #doing #politics #rice #given #poor #Nalapad

ಬೆಂಗಳೂರು: ರಾಜ್ಯದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ‌ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಬಂಧಿಸಿದರು.

ಹೆಚ್ಚುವರಿ ಅಕ್ಕಿಗೆ ಮಾರುಕಟ್ಟೆ ದರದಲ್ಲಿ ಹಣ ನೀಡುವುದಾಗಿ ಹೇಳಿದರೂ ಕೇಂದ್ರ ಸರ್ಕಾರ ಅಕ್ಕಿ ನೀಡದೇ ವಂಚನೆ ನಡೆಸಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮೊಹಮ್ಮದ್ ಹ್ಯಾರಿಸ್ ಅವರ ನೇತೃತ್ವದಲ್ಲಿ ಮಲ್ಲೇಶ್ವರಂ ಹದಿನೆಂಟನೇ ಕ್ರಾಸ್ ನ ಗೋಕಾಕ್ ಉದ್ಯಾನವನದಲ್ಲಿ ಸಮಾವೇಶಗೊಂಡು ಅಲ್ಲಿಂದ  ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಸಿ‌ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಮಾರ್ಗ ಮಧ್ಯದಲ್ಲಿ ತಡೆದರು.

ಮಾರ್ಗ ಮಧ್ಯ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೊಗೆದು ಮುನ್ನುಗ್ಗಿದ ಪ್ರತಿಭಟನಾಕಾರರನ್ನು ತಡೆದರೂ ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ‌ ಚೆದುರಿಸಿ, ಹಲವು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು. 

ಮೆರವಣಿಗೆಗೆ ಮುನ್ನ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮೊಹಮ್ಮದ್ ಹ್ಯಾರಿಸ್ ಬಿಜೆಪಿ ಬಡವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದು, ಬಡವರಿಗೆ ನೀಡುವ ಅಕ್ಕಿಯಿಂದಲೂ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ದೇಶದ ಎಲ್ಲಾ ಜನರನ್ನ ಒಂದೇ ತರ ನೋಡಬೇಕು, ಕೇಂದ್ರ ಸರ್ಕಾರ ಬಿಜೆಪಿ ಆಡಳಿತದ ರಾಜ್ಯಕ್ಕಲ್ಲ ಎಂದರು.

ಬಿಜೆಪಿಗೆ ವೋಟ್ ಹಾಕಿದವರಿಗೂ ನಮ್ಮ ಸರ್ಕಾರ ಅಕ್ಕಿ ಕೊಡಲಿದೆ. ನಾವೇನಾದ್ರೂ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಅಂತ ಅಕ್ಕಿ ಕೊಡಲ್ಲ ಎನ್ನುತ್ತಿದ್ದೇವಾ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕದ 25 ಸಂಸದರ ಮುಖವಾಡಗಳನ್ನ ಧರಿಸಿದ ಕಾರ್ಯಕರ್ತರು ಬಿಜೆಪಿ ಹಾಗೂ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು.

Leave a Reply