ರಾಜ್ಯದಲ್ಲಿ ಇತ್ತೀಚೆಗೆ ತಾನೇ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿ.ಜೆ.ಪಿ 60ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು ಜನರಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಜೆ.ಡಿ.ಎಸ್ ಎಷ್ಟೇ ಪ್ರಯತ್ನಗಳನ್ನು ನಡೆಸಿದರು ಸುಭದ್ರ ಸರ್ಕಾರವನ್ನು ಬಯಸಿದ ಜನತೆ ಅವರಿಗೆ ಕೇವಲ 19 ಸ್ಥಾನವನ್ನು ನೀಡಿದೆ.
ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಹಂತ ಹಂತವಾಗಿ ಯೋಜನಾಬದ್ಧವಾಗಿ ಅಡಳಿತಾತ್ಮಕವಾಗಿ ಯಾವ ಸಮಸ್ಯೆಗಳು ಆಗದೆ ರೀತಿಯಲ್ಲಿ ತಾನು ನೀಡಿರುವ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವಂತಹ ದಾರಿಯಲ್ಲಿ ಸಾಗಿ ಈಗಾಗಲೇ ಶಕ್ತಿ ಯೋಜನೆ, ಭಾಗ್ಯ ಜ್ಯೋತಿ, ಅನ್ನಭಾಗ್ಯ ಇವುಗಳನ್ನು ಜಾರಿಗೊಳಿಸಿದ್ದಾರೆ. ಸದ್ಯದಲ್ಲಿಯೇ ಗೃಹಲಕ್ಷ್ಮಿ ಯೋಜನೆಯು ಜಾರಿಯಾಗುತ್ತಿದೆ. ಯುವನಿಧಿ ಮುಂದಿನ ಕೆಲವು ತಿಂಗಳುಗಳಲ್ಲಿ ಜಾರಿಯಾಗಲಿದೆ.
ಈ ನಡುವೆ ಅಧಿಕಾರವನ್ನು ಕಳೆದುಕೊಂಡಿರುವ ಬಿ.ಜೆ.ಪಿ. ಅಧಿಕಾರದ ಕನಸುಕಂಡು ಹತ್ತಿರಕ್ಕೂ ಬರದ ಜೆ.ಡಿ.ಎಸ್, ನಾಯಕರುಗಳು ಹತಾಶೆಯಿಂದ ದಿನಕ್ಕೊಂದು ಮಾತುಗಳನ್ನಾಡುತ್ತಾ ತಮ್ಮ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದದ್ದನ್ನು ಸಹಿಸಿಕೊಳ್ಳಲಾಗದ ಕೆಲವು ವ್ಯಕ್ತಿಗಳು ಅವರ ವಿರುದ್ಧ ಸದಾ ಮಾತನಾಡುತ್ತಲೇ ಇರುತ್ತಾರೆ.
ಡಿ.ಕೆ. ಶಿವಕುಮಾರ್‌ರವರ ಆಡಳಿತದಲ್ಲಿನ ವೇಗಕ್ಕೆ ಬೆದರಿರುವ ವಿರೋಧ ಪಕ್ಷದವರು ಅವರನ್ನೂ ಟೀಕಿಸುತ್ತಾರೆ. ಇವರಿಗೆ ಮಾತನಾಡಲು ಯಾವ ವಿಚಾರಗಳು ಇಲ್ಲ. ಅದಕ್ಕಾಗಿ ಹಾರಿಕೆಯ ಮಾತುಗಳನ್ನಾಡಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. 2013 ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿನ ಸರ್ಕಾರ ಇದ್ದ ಸಂದರ್ಭದಲ್ಲೂ ಇದೇ ವ್ಯಕ್ತಿಗಳು ಅವರ ವಿರುದ್ಧ ಪ್ರತಿದಿನವೂ ಮಾತನಾಡಿ, ಮಾತನಾಡಿ, ಏನು ಮಾಡಲಿಲ್ಲ.
ಸಂಬಂಧವಿಲ್ಲದ ಸಾವಿಗೆ ಸರ್ಕಾರ ಕಾರಣವೆಂಬ ರೀತಿಯಲ್ಲಿ ದೊಡ್ಡ ಸುದ್ದಿಯನ್ನು ಮಾಡಿಸಿ ಆ ಮೂಲಕ ಜನರ ಮನಸ್ಸಿನಲ್ಲಿ ಭಾವನೆಗಳನ್ನು ಕೆರಳಿಸಿದ ಘಟನೆಗಳು ನೆನಪಿನಲ್ಲಿದೆ. ಐದು ವರ್ಷಗಳ ಕಾಲ ನಿಜವಾದ ಕ್ರಿಯಾಶೀಲ ವಿರೋಧ ಪಕ್ಷವಾಗಿ ತಮ್ಮ ನಡವಳಿಕೆಯನ್ನು ಪ್ರದರ್ಶಿಸಿದರೆ ಆಗಲಾದರೂ ಜನ ಇವರ ಪ್ರಭುತ್ವವನ್ನು ಮೆಚ್ಚಿಕೊಳ್ಳುತ್ತಾರೆ. ಇಲ್ಲದಿದ್ದರೆ ಅಧಿಕಾರ ಕಳೆದುಕೊಂಡವರ ನೋವಿನ ಮಾತುಗಳು ಎಂದು ಜನತೆ ಭಾವಿಸಿ ಇವರ ಟೀಕೆಗಳನ್ನು ನಿರ್ಲಕ್ಷಿಸುತ್ತಾರೆ. ಯಾವುದೇ ರೀತಿಯ ಕೊಡುಗೆಗಳನ್ನು ಕೊಡದಂತಹ ಬಿ.ಜೆ.ಪಿ.ಯವರಿಗೆ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಮಾತನಾಡಲು ಯಾವ ಬಾಯಿಯಾದರೂ ಬರುತ್ತದೋ?
– ಕೆ.ಎಸ್. ನಾಗರಾಜ್, ಬೆಂಗಳೂರು



