ಬಿಜೆಪಿಯವರ ಅಸಂಖ್ಯ ಗೋಳಾಟಗಳಲ್ಲಿ ಹೈಕಮಾಂಡ್‌ ಗೆ ಬೈಯುವುದೂ ಒಂದಾಗಿತ್ತು

3 years ago

ಬಿಜೆಪಿಯ ಗೋಳಾಟಗಳು:
೨೦೧೪ರ ಹಿಂದಿನ ಬಿಜೆಪಿಯವರ ಅಸಂಖ್ಯ ಗೋಳಾಟಗಳಲ್ಲಿ ಹೈಕಮಾಂಡ್‌ ಗೆ ಬೈಯುವುದೂ ಒಂದಾಗಿತ್ತು. ಮನಮೋಹನ್‌ ಸಿಂಗರು ಪ್ರಧಾನಿಯಾಗಿದ್ದಾಗ ಆಗ ಪಕ್ಷದ ಅಧ್ಯಕ್ಷರಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಹೋದರೆ ಇವರ ಗೋಳಾಟ ಮುಗಿಲು ಮುಟ್ಟುತ್ತಿತ್ತು. ಸೋನಿಯಾ ಗಾಂಧಿ ಕೂಡಾ ಚುನಾವಣೆಯಲ್ಲಿ ಗೆದ್ದು ಪಕ್ಷದ ಅಧ್ಯಕ್ಷರಾದವರು ಎಂಬುದನ್ನು ಬಿಜೆಪಿಯ ಹರಕು ಬಾಯಿಗಳು ಮರೆತುಬಿಡುತ್ತಿದ್ದವು. ಬಿಜೆಪಿಯ ವಿದ್ಯಾವಂತ ಬುದ್ದಿಜೀವಿಗಳೂ ಮಮ್ಮಲ ಮರುಗುತ್ತಿದ್ದರು. ಆದರೆ ಇವತ್ತು ಜಗದೀಶ್‌ ಶೆಟ್ಟರ್‌ ಹೇಳಿದ ಹಾಗೆʼ ಈ ಬಿ ಎಲ್ ಸಂತೋಷ್‌ ಯಾರು? ಜನರಿಂದ ಚುನಾಯಿತರಾದ ಪ್ರತಿನಿಧಿಗಳನ್ನು ಅಲ್ಲಾಡಿಸುವ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು? ʼರಾಜಕೀಯೇತರ ಸಂಘಟನೆʼ ಎಂದು ಹೇಳಿಕೊಂಡಿರುವ ಆರ್‌ ಎಸ್‌ ಎಸ್‌ ನವರಿಗೆ ಈ ಕೆಲಸಗಳು ಯಾಕೆ ಬೇಕು? ಸಂತೋಷ್‌ ಚುನಾವಣೆಗೆ ಯಾಕೆ ನಿಲ್ಲುವುದಿಲ್ಲ? ಜಗದೀಶ್‌ ಶೆಟ್ಟರ್‌ ಇವತ್ತು ಹೇಳಿದ ಮಾತುಗಳನ್ನು ಗಮನಿಸಿರಿ-

‘ನನಗೆ ಟಿಕೆಟ್ ಕೈ ತಪ್ಪಿದ್ದರ ಹಿಂದೆ ಇರುವ ವ್ಯಕ್ತಿ ಬಿ.ಎಲ್. ಸಂತೋಷ್. ತಮ್ಮ ಮಾನಸ ಪುತ್ರನಾದ ಮಹೇಶ ಟೆಂಗಿನಕಾಯಿಗೆ ಹು–ಧಾ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಕ್ಕಾಗಿ ಸಂತೋಷ್ ಆಡಿದ ಆಟದಿಂದಾಗಿ, ಪಕ್ಷದ ಅಡಿಪಾಯವೇ ಅಲುಗಾಡುತ್ತಿದೆ. ತನ್ನ ಆಪ್ತನಿಗೆ ಟಿಕೆಟ್ ಕೊಡಿಸುವುದಕ್ಕಾಗಿ ಸಂತೋಷ್ ಪಕ್ಷದ ಹಿರಿಯ ನಾಯಕರಿಗೆ ಅಪಮಾನ ಮಾಡಿದರು. ‘ಟೆಂಗಿನಕಾಯಿ ಸೇರಿದಂತೆ ರಾಜ್ಯದಾದ್ಯಂತ ತನಗೆ ಬೇಕಾದವರನ್ನು ಮುಂದೆ ತರಲು ಸಂತೋಷ್ ನಡೆಸುತ್ತಿರುವ ಕುತಂತ್ರದ ಕುರಿತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್ ಅವರಿಗೆಲ್ಲಾ ಹೇಳಿದರೂ, ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ರಾಜ್ಯದಲ್ಲಿ ಸಂತೋಷ್ ಎಂಬ ವ್ಯಕ್ತಿ ಮುಖ್ಯವೇ ಹೊರತು, ಪಕ್ಷವಲ್ಲ. ಇಂತಹವರು ಪಕ್ಷ ಮುಖ್ಯ ಎಂದು ಹೇಗೆ ಸಂಘಟನೆ ಮಾಡಲು ಸಾಧ್ಯ ? ರಾಜ್ಯದ ಬಿಜೆಪಿಯನ್ನು ಸಂತೋಷ್ ಮತ್ತು ಅವರ ಕಡೆಯವರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ರಾಜ್ಯ ಕಚೇರಿಯಲ್ಲೂ ಅವರದ್ದೇ ನಡೆಯುತ್ತದೆ. ತಮಗೆ ಬೇಕಾದ ಸುರಾನ ಮತ್ತು ಕೇಶವಪ್ರಸಾದ್ ಅವರನ್ನು ಕಚೇರಿಯಲ್ಲಿ ಕೂರಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಬ್ಬರನ್ನೂ ಕಚೇರಿಯಿಂದ ಹೊರ ಹಾಕಿದ್ದರು. ಅವರು ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಂತೋಷ್ ಇಬ್ಬರನ್ನು ಕಚೇರಿಗೆ ಕರೆ ತಂದರು. ಒಬ್ಬರನ್ನು ಎಂಎಲ್ಸಿ ಮಾಡಿದರು. ಸಂತೋಷ್ ಅವರನ್ನು ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಳಾದಲ್ಲಿ ಉಸ್ತುವಾರಿ ಮಾಡಿದರೂ ಪಕ್ಷಕ್ಕೆ ಒಳ್ಳೆಯದಾಗಲಿಲ್ಲ. ಇಷ್ಟೆಲ್ಲಾ ವೈಫಲ್ಯಗಳಿದ್ದರೂ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಸಂತೋಷ್ ಅವರಿಗೆ ಕರ್ನಾಟಕ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ.
‘ರಾಜ್ಯದಲ್ಲಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ರಾಜೀನಾಮೆ ಕೊಡಿಸಿ, ತಮಿಳುನಾಡಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಆತನೇ ಚುನಾವಣೆಯಲ್ಲಿ ಸೋತ. ಅಲ್ಲೇನು ಚಮತ್ಕಾರ ನಡೆಯಲಿಲ್ಲ. ನಾಲ್ಕು ಸೀಟು ಬಂದಿದ್ದೇ ಹೆಚ್ಚು. ಅಂತಹ ವ್ಯಕ್ತಿಯನ್ನು ರಾಜ್ಯ ಚುನಾವಣೆಯ ಸಹ ಉಸ್ತುವಾರಿ ಮಾಡಿದರು. ಅವರು ಮುಂದಿನ ಸಾಲಿನಲ್ಲಿ ಕೂತಿದ್ದಾಗ, ಮಾಜಿ ಮುಖ್ಯಮಂತ್ರಿಗಳಾಗಿರುವ ನಾನು ಮತ್ತು ಸದಾನಂದ ಗೌಡ ಹಿಂದಿನ ಸಾಲಿನಲ್ಲಿ ಕೂರಬೇಕು. ನಮ್ಮ ಕೈಕೆಳಗೆ ಕೆಲಸ ಮಾಡಿದ ಅಧಿಕಾರಿ ಹಿಂದೆ, ಏನೂ ಮಾತನಾಡದೆ ಕೂರಬೇಕಾದ ಸ್ಥಿತಿಗೆ ಪಕ್ಷವನ್ನು ತಂದರು. ಮೂರು ತಿಂಗಳಿಗೊಮ್ಮೆ ನಡೆಯುವ ರಾಜ್ಯ ಕಾರ್ಯಕಾರಣಿಯಲ್ಲಿ ನಮಗೆ ಮಾತನಾಡಲು ಅವಕಾಶವೇ ಇರುತ್ತಿರಲಿಲ್ಲ. ಕಳೆದ ಮೂರು ವರ್ಷದಿಂದ ಮಾತನಾಡಲು ನಮಗೆ ಅವಕಾಶ ಕೊಡಲಿಲ್ಲ. ಪಕ್ಷದ ಅಧ್ಯಕ್ಷ ನಳೀನಕುಮಾರ್ ಕೂಡ ಸಂತೋಷ್ ಅವರಿಗೆ ಬೇಕಾದ ವ್ಯಕ್ತಿ. ಕಟೀಲ್ ಅವರ ಅವಧಿ ಮುಗಿದರೂ ಮುಂದುವರಿಸಿದರು. ವರ್ಷದ ಹಿಂದೆ ಕಟೀಲ್ ಅವರ ಟೆಲಿಫೋನ್ ಆಡಿಯೊ ವೈರಲ್ ಆಗಿತ್ತು. ಯಡಿಯೂರಪ್ಪ ಅವರ ಕಾಲ ಮುಗಿಯಿತು. ಮುಂದೆ ಈಶ್ವರಪ್ಪ ಮತ್ತು ಶೆಟ್ಟರ್ ಕಾಲ ಮುಗಿಯಲಿದೆ ಎಂದು ಹೇಳಿದ್ದರು. ಅದೀಗ ನಿಜವಾಗಿದೆ. ಸಂತೋಷ್ ಪ್ಲಾನ್ ಸತ್ಯ ವಾಗಿದೆ.
ನಾನು ಜೋಶಿ ಅವರನ್ನು ಸಂಸದ ಮಾಡಲು ಎಷ್ಟು ಓಡಾಡಿದ್ದೇನೆ ಎಂಬುದನ್ನು ಅವರು ನೆನಪಿಸಿಕೊಳ್ಳಲಿ. ಆದರೆ ಅವರು ನನಗೆ ಟಿಕೆಟ್ ಕೊಡಲು ನಿರಾಕರಿಸಿದಾಗ, ನನ್ನ ಪರವಾಗಿ ಗಟ್ಟಿಯಾಗಿ ಯಾಕೆ ದನಿ ಎತ್ತಲಿಲ್ಲ. ಸಂತೋಷ್ಗೆ ಯಾಕೆ ಮನವರಿಕೆ ಮಾಡಿಕೊಡಲಿಲ್ಲ? ಇಲ್ಲಿ ಆಗುಬಹುದಾದ ಅನಾಹುತಗಳ ಬಗ್ಗೆ ಯಾಕೆ ತಿಳಿಸಲಿಲ್ಲ? ನಾವು ಕಟ್ಟಿದ ಮನೆಯಿಂದ ನಾವು ಅನಿವಾರ್ಯವಾಗಿ ಹೊರಹೋಗಬೇಕಾದ ಸ್ಥಿತಿಯನ್ನು ಸಂತೋಷ್ ಮತ್ತು ಅವರ ಕಡೆಯವರು ಸೃಷ್ಟಿಸಿದರು. ಇದೆಲ್ಲವನ್ನು ನಾನು ಸಹಿಸಿಕೊಂಡಿದ್ದರೆ, ಜನ ನನಗೆ ಮಾನ ಮರ್ಯಾದೆ ಇಲ್ಲವೇನೊ ಎಂದು ಮಾತನಾಡುತ್ತಾರೆ.ʼ
ಕೊನೆಮಾತು:
ಈ ಬಿ ಎಲ್‌ ಸಂತೋಷ್‌ ಯಾರದೋ ಮಾತು ಕೇಳಿ ನನ್ನ ಮೇಲೊಂದು ಸುಳ್ಳು ವೀಡಿಯೋ ಮಾಡಿದ್ದ. ಆಗಲೇ ಅವನ ಯೋಗ್ಯತೆ ನನಗೆ ತಿಳಿದಿತ್ತು. ಈಗ ಅದು ಬಹಿರಂಗಕ್ಕೆ ಬರುತ್ತಿದೆ.‘

– ಪುರುಷೋತ್ತಮ ಬಿಳಿಮಲೆ, ಹಿರಿಯ ಜಾನಪದ ವಿದ್ವಾಂಸರು

Leave a Reply