ಕಳೆದ ನಲವತ್ತು ವರ್ಷಗಳಿಂದ ಸಾರ್ವಜನಿಕ ಬದುಕಿಗೆ ತೆತ್ತುಕೊಂಡಿರುವ ನಾನು ಹಿಂದೆಂದೂ ಕಂಡಿರದ ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳ ಅಧಹಪತನಕ್ಕೆ ಈ ದಿನಗಳಲ್ಲಿ ಸಾಕ್ಷಿಯಾಗುತ್ತಿರುವುದು ವರ್ತಮಾನದ ದುರಂತವೇ ಸರಿ.
ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಈತ ಮಣಿಕಂಠ ರಾಥೋಡ್. ವಯಸ್ಸು ಕೇವಲ 26 ವರ್ಷ. ಈತನ ಒಟ್ಟು ಆಸ್ತಿ ಮುವತ್ತು ಕೋಟಿ ರೂಪಾಯಿಗಳು. ( ಈತನದು 13 ಕೋಟಿ, ಪತ್ನಿಯದು 17 ಕೋಟಿ.) ನಾಲ್ಕು ಮರ್ಸಿಡಿಸ್ ಬೆಂಜ್ ಕಾರುಗಳಿವೆ. ಗುಲ್ಬರ್ಗಾ ಜಿಲ್ಲೆಯಲ್ಲಿ ವ್ಯವಹಾರದ ನೆಪದಲ್ಲಿ ಒಂದು ರೈಸ್ ಮಿಲ್ ಇದೆ. ಕೇವಲ 26 ವರ್ಷ ವಯಸ್ಸಿಗೆ ನಲವತ್ತು ಕ್ರಿಮಿನಲ್ ಕೇಸ್ ಗಳು ಈತನ ಮೇಲಿವೆ. ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳ ಗಳ ಸಂಗ್ರಹ ಮತ್ತು ಸಾಗಾಣಿಕೆಯ ಕೇಸ್ ಗಳ ಜೊತೆಗೆ ಬಡವರಿಗೆ ಅನ್ನ ಭಾಗ್ಯ ಯೋಜನೆಯಡಿ ನೀಡಲಾದ ಅಕ್ಕಿಯ ಅಕ್ರಮ ಸಾಗಾಣಿಕೆ, ಶಾಲಾ ಮಕ್ಕಳಿಗೆ ಕುಡಿಯಲು ನೀಡಲಾಗಿದ್ದ ನಂದಿನಿ ಹಾಲಿನ ಪೌಡರ್ ನ ಅಕ್ರಮ ಸಂಗ್ರಹ ಮತ್ತು ಮಾರಾಟ ಹೀಗೆ ಗುಲ್ಬರ್ಗಾ, ಯಾದವಗಿರಿ ಜಿಲ್ಲೆಗಳು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು ಮುವತ್ತನಾಲ್ಕು ಕೇಸ್ ಗಳಿದ್ದರೆ, ನೆರೆಯ ಆಂಧ್ರದಲ್ಲಿ ಆರು ಮೊಕದ್ದಮೆಗಳಿವೆ.
ಈಗಾಗಲೇ 2015 ರ ಕೇಸ್ ಒಂದರಲ್ಲಿ ಹಾಲಿನ ಪೌಡರ್ ಮಾರಾಟಕ್ಕೆ ಸಂಬಂಧಿಸಿದಂತೆ ಈತನಿಗೆ ಹಾಗೂ ಇಬ್ಬರು ಸಹಚರರಿಗೆ ತಲಾ ಹತ್ತು ಸಾವಿರ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಗುಲ್ಬರ್ಗ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ತಡೆಯಾಜ್ಞೆ ತಂದಿರುವ ಈತನಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ (ಡಾ.ವೈ.ಎನ್. ರವಿಕುಮಾರ್ ಎಂದು ನೆನಪು.) ಅವರು ಒಂದು ವರ್ಷ ಕಾಲ ಗುಲ್ಬರ್ಗಾ ಜಿಲ್ಲೆಯಿಂದ ಗಡಿಪಾರು ಮಾಡಿ ಆಜ್ಞೆ ಹೊರಡಿಸಿದ್ದರು. ಅದಕ್ಕೂ ಸಹ ತಡೆಯಾಜ್ಞೆ ತಂದಿರುವ ಈ ಮಹಾಶಯ ಎರಡು ತಿಂಗಳ ಹಿಂದೆ ಚಿತ್ತಾಪುರ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಗುಂಡಿಟ್ಟು ಕೊಲ್ಲುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಘೋಷಿಸಿದ್ದನು. ಈ ಕುರಿತು ಸಹ ಆತನ ಮೇಲೆ ಮೊಕದ್ದಮೆ ದಾಖಲಾಗಿದೆ.
ಇಂತಹ ಅಪರೂಪದ ದಾಖಲೆ ಹೊಂದಿರುವ ಮಹಾನ್ ಪರಾಕ್ರಮಿ ಈಗ ಚಿತ್ತಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ವಿರುದ್ಧ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಈತನ ಪರವಾಗಿ ಚುನಾವಣೆ ಪ್ರಚಾರ ಮಾಡಲು ಭಾರತದ ಪ್ರಧಾನಿ ಹಾಗೂ ಘನವೆತ್ತ ಶ್ರೀ ಶ್ರೀ ಶ್ರೀ ನರೇಂದ್ರ ಮೋದಿಯವರು ಮೇ 6 ರಂದು ಗುಲ್ಬರ್ಗಾ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ರಾಷ್ಟ್ರ ಪ್ರೇಮದ ಕುರಿತಾಗಿ, ಹಿಂದೂ ಧರ್ಮದ ಕುರಿತಾಗಿ, ಸತ್ಯ ಮತ್ತು ಪ್ರಾಮಾಣಿಕತೆ ಹಾಗೂ ಭಕ್ತಿಯ ಕುರಿತಾಗಿ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಕಿವಿಯಲ್ಲಿ ರಕ್ತ ಬರುವ ಹಾಗೆ ನೈತಿಕತೆಯ ಬಗ್ಗೆ ಮಾತನಾಡುವ ಬಿ.ಜೆ.ಪಿ. ನಾಯಕರು ಮತ್ತು ಸಂಘಪರಿವಾರದ ಪಂಡಿತೋತ್ತಮರು ಒಮ್ಮೆ ಮಣಿಕಂಠ ರಾಢೋಡ್ ನ ಭಾವಚಿತ್ರ ಹಾಗೂ ಆತನ ಜಾತಕವನ್ನು ನೋಡಿ ತಮ್ಮ ಎದೆಯ ಮೇಲೆ ಕೈ ಇಟ್ಟು ಆತ್ಮ ಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುವುದು ಒಳಿತು.
ಇಪ್ಪತ್ತು ವರ್ಷಗಳ ಕಾಲ ಧಾರವಾಡದಲ್ಲಿ ನೆಲೆಸಿ, ಹದಿನೆಂಟು ವರ್ಷಗಳ ಕಾಲ ಉದಯ ಟಿ.ವಿ. ಉತ್ತರ ಕರ್ನಾಟಕದ ಪ್ರಾದೇಶಿಕ ಕಚೇರಿಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ನನಗೆ ಗುಲ್ಬರ್ಗಾ ಜಿಲ್ಲೆ ಹೊಸದಲ್ಲ. ನನ್ನ ವ್ಯಾಪ್ತಿಗೆ ಒಳಪಟ್ಟಿದ್ದ ಗುಲ್ಬರ್ಗಾ ಜಿಲ್ಲೆಗೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡುತ್ತಿದ್ದೆ. ಮೊದಲು ಹುಬ್ಬಳ್ಳಿಯಿಂದ ಗುಲ್ಬರ್ಗಾ ನಗರಕ್ಕೆ ನೇರ ರೈಲು ಸಂಪರ್ಕ ಇರಲಿಲ್ಲ. ರಾತ್ರಿ ಹುಬ್ಬಳ್ಳಿಯಿಂದ ಹೊರಟು ಬೆಳಗಿನ ಜಾವ ಐದು ಗಂಟೆಗೆ ಚಿತ್ತಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಲವತ್ತು ಕಿಲೊಮೀಟರ್ ದೂರದ ಗುಲ್ಬರ್ಗಾ ನಗರಕ್ಕೆ ಬಸ್ಸಿನಲ್ಲಿ ಬರಬೇಕಿತ್ತು. ಹಾಗಾಗಿ ನನಗೆ ಚಿತ್ತಾಪುರ ಕೂಡ ಪರಿಚಿತ ಪ್ರದೇಶ. ಜೊತೆಗೆ ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಖರ್ಗೆಯವರು ಮಾಡಿರುವ ಪ್ರತಿಯೊಂದು ಅಭಿವೃದ್ಧಿ ಕೆಲಸವನ್ನು ಕಣ್ಣಾರೆ ನೋಡಿದ್ದೀನಿ. ನನ್ನ ಅನುಭವದ ಪ್ರಕಾರ ಈಗಿನ ಗುಲ್ಬರ್ಗಾ ನಗರವು ಬೆಂಗಳೂರು ನಗರಕ್ಕಿಂತ ಅತ್ಯಂತ ದುಬಾರಿ ನಗರವಾಗಿದೆ.
ಗುಲ್ಬರ್ಗಾ ನಗರದ ಅಭಿವೃದ್ಧಿಯಲ್ಲಿ ಅಲ್ಲಿನ ವರ್ತುಲ ರಸ್ತೆ, ಬೃಹತ್ ಇ.ಎಸ್.ಐ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜ್ ಇವುಗಳು ಖರ್ಗೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹವು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸುವುದರ ಜೊತೆಗೆ ಮೋದಿ ಸರ್ಕಾರವನ್ನು ನೇರವಾಗಿ ತರಾಟೆ ತೆಗೆದುಕೊಳ್ಳುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರು 2019 ರ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದ ಮುಖ್ಯ ಗುರಿಯಾಗಿದ್ದರು. ಅವರನ್ನು ಸೋಲಿಸುವುದು ಮೋದಿಯ ಏಕೈಕ ಅಜೆಂಡವಾಗಿತ್ತು. ಗುಲ್ಬರ್ಗಾ ಜಿಲ್ಲೆಯಲ್ಲಿ ಲಿಂಗಾಯುತರು ಹಾಗೂ ದಲಿತರು ಇರುವ ಹಾಗೆ ಅಪಾರ ಪ್ರಮಾಣದಲ್ಲಿ ಹಿಂದುಳಿದ ವರ್ಗದ ವಿಶೇಷವಾಗಿ ಲಂಬಾಣಿ ಸಮುದಾಯದ ಮತದಾರರಿದ್ದಾರೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಲಂಬಾಣಿ ಸಮುದಾಯದ ಉಮೇಶ್ ಜಿ.ಜಾದವ್ ಎಂಬ ಅನಾಮಧೇಯನನ್ನು ನಿಲ್ಲಿಸಿ, ಅಪಾರ ಪ್ರಮಾಣದಲ್ಲಿ ಹಣ ಮತ್ತು ಹೆಂಡವನ್ನು ಹಂಚಿ ಖರ್ಗೆಯವರನ್ನು ಸೋಲಿಸಲಾಯಿತು.
ಇದೀಗ ಕರ್ನಾಟಕ ವಿಧಾನಸಭೆಯಲ್ಲಿ ಬಿ.ಜೆ.ಪಿ. ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿರುವ ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಮಣಿಸಲು ಬಿ.ಜೆ.ಪಿ.ಯಿಂದ ಅದೇ ಹಳೆಯ ತಂತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಏಕೆಂದರೆ, ಚಿತ್ತಾಪುರ ಕ್ಷೇತ್ರದಲ್ಲಿ ಅತ್ಯಧಿಕ ಲಂಬಾಣಿ ತಾಂಡಗಳಿವೆ. ಆದರೆ, ಅಭ್ಯರ್ಥಿಯ ಆಯ್ಕೆಗೆ ಯಾವುದೇ ಪಕ್ಷವಾಗಿರಲಿ ಅದಕ್ಕೊಂದು ಮಾನದಂಡ ಇರುತ್ತದೆ ಅಲ್ಲವೆ? ಹಾಗಾದರೆ ಬಿ.ಜೆ.ಪಿ. ಪಕ್ಷದ ಮಾನದಂಡ ಯಾವುದು?
ಇತ್ತೀಚೆಗೆ ಮೋದಿ ಮಹಾಶಯರು ಮಂಡ್ಯಕ್ಕೆ ಬಂದಾಗ ಅವರನ್ನು ಮುಖ್ಯಮಂತ್ರಿಯ ಪಕ್ಕದಲ್ಲಿ ನಿಂತು ಸ್ವಾಗತಿಸಿದ್ದು ಪೈಟರ್ ರವಿ ಎಂಬ ಮಾಜಿ ರೌಡಿ. ಈಗ ಅವನು ಬಿ.ಜೆ.ಪಿ. ಟಿಕೇಟ್ ಸಿಗದ ಕಾರಣ ನಾಗಮಂಗಲ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ. ಚಾಮರಾಜಪೇಟೆ ಕ್ಷೇತ್ರದ ಮತ್ತೊಬ್ಬ ಆಕಾಂಕ್ಷಿ ಸೈಲೆಂಟ್ ಸುನೀಲ ಎಂಬಾತನ ಬೆಂಗಲಿಗರು ತಮ್ಮ ನಾಯಕನಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಬಿ.ಜೆ.ಪಿ. ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು.
ಚಾಮರಾಜ ಪೇಟೆ ಕ್ಷೇತ್ರಕ್ಕೆ ಬಿ.ಜೆ.ಪಿ. ಟಿಕೆಟ್ ಪಡೆದಿರುವ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಎಂಬಾತನು ಮಧ್ಯಮಗಳ ಮುಂದೆ ಮಾತನಾಡುತ್ತಾ ನಾನು ಸುನೀಲ್ ಅವರ ಮನೆಗೆ ಹೋಗಿ ಅವರ ಕೈ ಕಾಲು ಹಿಡಿದು ಮನವೊಲಿಸುತ್ತೀನಿ ಎಂದು ಆಡಿದ ಮಾತುಗಳು ನನಗೆ ತೀರಾ ಅಸಹ್ಯ ಎನಿಸಿದವು. ಈ ಅಯೋಗ್ಯ ಅಧಿಕಾರಿಯ ಇಂತಹ ಮಾತುಗಳಿಂದ ಕರ್ನಾಟಕದ ಜನತೆಗೆ ಪೊಲೀಸ್ ಇಲಾಖೆಯ ಬಗ್ಗೆ ಎಂತಹ ಅಬಿಪ್ರಾಯ ಮೂಡಬಲ್ಲದು ಯೋಚಿಸಿ. ನಾನು ಬಲ್ಲಂತೆ ಇಂದಿನ ಕರ್ನಾಟಕ ಸರ್ಕಾರದಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ನಿಷ್ಟಾವಂತ ಐ.ಎ.ಎಸ್. ಐ.ಪಿ.ಎಸ್ ಮತ್ತು ಕೆ.ಎಸ್.ಎಸ್. ಅಧಿಕಾರಿಗಳಿದ್ದಾರೆ. ಅವರೆಲ್ಲರೂ ಗಂಭೀರವಾಗಿ ಕುವೆಂಪು, ತೇಜಸ್ವಿ, ಲಂಕೇಶ್, ಅನಂತಮೂರ್ತಿ ಹೀಗೆ ಪ್ರಮುಖ ಲೇಖಕರ ಕೃತಿಗಳನ್ನು ಓದಿಕೊಂಡವರು. ಈ ಕಾರಣದಿಂದಾಗಿ ಅವರ ಎದೆಯೊಳಗೆ ಈ ಕ್ಷಣದಲ್ಲಿಯೂ ಸಹ ಮಾನವೀಯತೆ, ಆತ್ಮಸಾಕ್ಷಿ ಜೀವಂತವಾಗಿವೆ. ಈಗ ಅವರ ಮನಸ್ಥಿತಿ ಈ ಭಾಸ್ಕರ್ ರಾವ್ ಎಂಬ ಅವಿವೇಕಿಯಿಂದ ಏನಾಗಿರಬಹುದು ಊಹಿಸಿ?
ನಾನು ವೈಯಕ್ತಿವಾಗಿ ಬಲ್ಲ ನಿವೃತ್ತ ಬೆಂಗಳೂರು ಪೊಲೀಸ್ ಕಮಿಷನರ್ ಕೆ.ಮರಿಸ್ವಾಮಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಹಾಗೂ ನಿವೃತ್ತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಇವರುಗಳನ್ನು ಬೆಂಗಳೂರಿನ ಸಮಾರಂಭಗಳಲ್ಲಿ ಕಂಡ ತಕ್ಷಣ ಕಾಲು ಜೋಡಿಸಿ, ತಲೆ ಬಾಗಿಸಿ, ದೇವರಿಗೆ ಕೈ ಮುಗಿಯುವಂತೆ ಅವರಿಗೆ ನಮಸ್ಕರಿಸಿ ನಂತರ ಅವರ ಜೊತೆ ಮಾತನಾಡುತ್ತೇನೆ. ಸೇವೆಯಲ್ಲಿ ಅವರು ತೋರಿದ ನಿಷ್ಠೆ ಹಾಗೂ ನಿವೃತ್ತಿಯ ನಂತರ ಅವರು ಬದುಕುತ್ತಿರುವ ಘನತೆ ಬದುಕು ಇವೆಲ್ಲವೂ ಪತ್ರಕರ್ತನಾಗಿ ಬದುಕು ರೂಪಿಸಿಕೊಂಡ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಈಗ ಭಾಸ್ಕರ್ ರಾವ್ ಎಂಬ ಹೆಸರನ್ನು ಉಚ್ಚರಿಸಿದ ನಂತರ ನಾಲಿಗೆ ತೊಳೆದುಕೊಳ್ಳಬೇಕು ಎಂದು ಅನಿಸತೊಡಗಿದೆ.
ಬಿ.ಜೆ.ಪಿ. ಪಕ್ಷ ಈ ಚುನಾವಣೆಯಲ್ಲಿ ತೆಗೆದುಕೊಂಡಿರುವ ನಿಲುವುಗಳನ್ನು ನೋಡಿದರೆ, ಇವರಿಂದ ದಂಡುಪಾಳ್ಯದ ಗ್ಯಾಂಗ್ ಸದಸ್ಯರಿಗೆ ಅನ್ಯಾಯವಾಯಿತು ಎನಿಸುತ್ತಿದೆ. ಅವರನ್ನೂ ಸಹ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಿಸಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಎಂಟು ಕ್ಷೇತ್ರಗಳಲ್ಲಿ ನಿಲ್ಲಿಸಬಹುದಿತ್ತಲ್ಲವೆ? ಬಿ.ಜೆ.ಪಿ.ಪಕ್ಷದ ಈ ಅನೈತಿಕ ಚಟುವಟಿಕೆಯನ್ನು ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಮತದಾರರು ಪ್ರಶ್ನಿಸಬೇಕಿದೆ.
ಒಂದು ಮಾತನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಸೋತರೆ ಅದು ಅವರ ಸೋಲಲ್ಲ. ಇಡೀ ಕರ್ನಾಟಕದ ಪ್ರಜ್ಞಾವಂತ ಜನತೆಯ ಸೋಲು. ಇದನ್ನು ಇಲ್ಲಿನ ಜನರ ನೈತಿಕತೆ ಮತ್ತು ವೈಚಾರಿಕತೆಗೆ ಬಿ.ಜೆ.ಪಿ. ಪಕ್ಷ ನೇರವಾಗಿ ಎಸೆದಿರುವ ಸವಾಲು ಎಂದು ನಾವು ಪರಿಗಣಿಸಬೇಕಿದೆ. 1978 ರಲ್ಲಿ ತುರ್ತುಪರಿಸ್ಥಿತಿಯ ನಂತರ ಜೆ.ಪಿ. ಚಳುವಳಿಯಿಂದ ಪ್ರೇರಿತನಾಗಿ ಅಂದಿನ ಇಂದಿರಾ ವಿರುದ್ಧ ನನಗೆ ಇದೇ ಭಾವನೆಗಳಿದ್ದವು. ನಲವತ್ತೈದು ವರ್ಷಗಳ ನಂತರ ಈಗ ಅದೇ ಸ್ಥಿತಿ ತಲುಪಿದ್ದೀನಿ. ಇದು ನನ್ನೊಬ್ಬನ ಕಥೆಯಲ್ಲ, ನನ್ನ ತಲೆಮಾರಿನ ಸಮಾನ ಮನಸ್ಕರ ಮನಸ್ಥಿತಿ ಕೂಡಾ ಹೌದು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



