ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಆರ್ಥಿಕ ನೆರವು ಬಿಡುಗಡೆ ಮಾಡಲು ವಿಳಂಬ ಮತ್ತು ಬಜೆಟ್ ನಲ್ಲಿ ರಾಜ್ಯದ ಅನುದಾನ ಪ್ರಮಾಣ ಕಡಿತಗೊಳಿಸಿರುವುದನ್ನು ವಿರೋಧಿಸಿ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿರುವ ಕ್ರಮ ಇದೀಗ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ವೇದಿಕೆ ನಿರ್ಮಿಸಿದೆ.
ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳದೆ ವಿಳಂಬ ಮಾಡಿರುವ ರಾಜ್ಯ ಸರ್ಕಾರ ಜನರ ಗಮನ ಬೇರೆಡೆ ಸೆಳೆಯುವ ದೃಷ್ಟಿಯಿಂದ ಪ್ರತಿಭಟನೆ ಮಾಡುವ ಮೂಲಕ ರಾಜಕಾರಣ ಮಾಡಲು ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕರದ ವಿಜಯೇಂದ್ರ ಮತ್ತು ಆರ್ ಅಶೋಕ್ ರಾಜ್ಯ ಸರ್ಕಾರದ ಈ ಧೋರಣೆ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದರು.
ಇದಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಪರಮೇಶ್ವರ್, ರಾಜ್ಯದ 223ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇದಕ್ಕಾಗಿ ವಿಶೇಷ ಅನುದಾನ ನೀಡಬೇಕಿತ್ತು. ಆದರೆ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಇನ್ನು ಎನ್ಡಿಆರ್ಎಫ್ ಪ್ರತಿ ವರ್ಷ ಯಾಂತ್ರಿಕವಾಗಿ ಬಿಡುಗಡೆಯಾಗುವ ಅನುದಾನವೂ ಇಲ್ಲ ಎಂದರು.
ತೆರಿಗೆ ಸಂಗ್ರಹದಲ್ಲಿ ಎರಡನೇ ಅತೀ ದೊಡ್ಡ ರಾಜ್ಯವಾಗಿರುವ ಕರ್ನಾಟಕಕ್ಕೆ ಕೇಂದ್ರದಿಂದ ದೊರೆಯುವ ಅನುದಾನದಲ್ಲೂ ಕಡಿತವಾಗಿದೆ. ಇವುಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿಯವರೇ ಪ್ರತಿಭಟನೆ ಮಾಡುತ್ತೇವೆ ಎಂದರೆ ಇದಕ್ಕೆ ಏನು ಹೇಳಬೇಕು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಪುಟದ ಹಲವು ಸಚಿವರು ಹಲವು ಬಾರಿ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಬಹಳಷ್ಟು ವೇಳೆ ಕೇಂದ್ರ ಸಚಿವರು ರಾಜ್ಯಸಚಿವರ ಭೇಟಿಗೆ ಸಮಯವನ್ನೇ ನೀಡದೇ ಸತಾಯಿಸಿರುವ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ನಮಗೆ ದೆಹಲಿಯಲ್ಲಿ ಪ್ರತಿಭಟನೆ ಮಾಡುವುದನ್ನು ಹೊರತುಪಡಿಸಿ ನಮಗೆ ಬೇರೆ ಯಾವ ಆಯ್ಕೆಗಳಿವೆ ಎಂದರು.
ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಕೇಂದ್ರದ ನೆರವು ಕಾಯದೆ ಹಣ ಬಿಡುಗಡೆ ಮಾಡುತ್ತಿದ್ದುದಾಗಿ ಆರ್.ಅಶೋಕ್ ಸೇರಿದಂತೆ ಅನೇಕ ನಾಯಕರು ಹೇಳಿಕೊಂಡಿದ್ದಾರೆ. ನಾವೂ ಕೂಡ ಈಗಾಗಲೇ ಮೊದಲ ಕಂತಿನ 2 ಸಾವಿರ ರೂ.ಗಳನ್ನು ರೈತರಿಗೆ ಬಿಡುಗಡೆ ಮಾಡಿದ್ದೇವೆ. ಇದಕ್ಕಾಗಿ 650 ಕೋಟಿ ರೂ.ಗಳು ಖರ್ಚಾಗಿದೆ ಎಂದರು.
ಜೊತೆಗೆ ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗೆ 540 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈಗಲಾದರೂ ಕೇಂದ್ರಸರ್ಕಾರ ಹಣ ನೀಡಬೇಕಲ್ಲವೇ ಎಂದರು.
ರಾಜ್ಯಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದರೆ ರೈತರಿಗೆ 2 ಸಾವಿರ ರೂ. ನೀಡುತ್ತಿರಲಿಲ್ಲ, ಬರ ನಿರ್ವಹಣೆಗೆ ಹಣ ಒದಗಿಸುತ್ತಿರಲಿಲ್ಲ. ರಾಜಕೀಯವಾಗಿ ಹೇಳಿಕೆಗಳನ್ನು ನೀಡಿ ಬಿಜೆಪಿಯವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಬರಬಾಧಿತ ತಾಲೂಕುಗಳಿಗೆ ಆರ್ಥಿಕ ನೆರವು ನೀಡದೇ ಇರುವ ಕೇಂದ್ರಸರ್ಕಾರದ ವಿರುದ್ಧ ಧ್ವನಿ ಎತ್ತದೇ ಇರುವ ಬಿಜೆಪಿ ನಾಯಕರು, ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರೆ ಇದ್ಯಾವ ನೈತಿಕತೆ ಎಂದರು.



